ಗುವಾಹಟಿ: ರಾಜ್ಯ ಸರಕಾರದ ವ್ಯಾಪ್ತಿಯಲ್ಲಿರುವ ಮದ್ರಸಗಳನ್ನು ರದ್ದುಗೊಳಿಸಿ ಅವುಗಳನ್ನು ಸಾಮಾನ್ಯ ಶಾಲೆಗಳನ್ನಾಗಿ ಪರಿವರ್ತಿಸುವ ವಿಧೇಯಕವನ್ನು ಅಸ್ಸಾಂ ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಎ.1ರಿಂದ ಪರಿಷ್ಕೃತ ನಿರ್ಧಾರ ಜಾರಿಗೆ ಬರಲಿದೆ. ವಿಪಕ್ಷಗಳ ಪ್ರಬಲ ಆಕ್ಷೇಪದ ನಡುವೆಯೇ ಶಿಕ್ಷಣ ಸಚಿವ ಹಿಮಾಂತ ಶರ್ಮ ಬಿಸ್ವಾ ವಿಧೇಯಕವನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಹಿಮಾಂತ ಶರ್ಮಾ ಖಾಸಗಿ ಸಂಸ್ಥೆಗಳು ನಡೆಸುವ ಮದರ ಸಾವನ್ನು ವಿಧೇಯಕಕ್ಕೆ ಸೇರ್ಪಡೆ ಮಾಡಲಾಗಿಲ್ಲ ಎಂದು ಹೇಳಿದ್ದಾರೆ.
ವಿಧಾನಸಭೆಯಲ್ಲಿ ಶರ್ಮಾ ವಿಧೇಯಕ ಮಂಡಿಸಲು ಯತ್ನಿಸಿದಾಗ ಕಾಂಗ್ರೆಸ್ ಮತ್ತು ಎಐಯುಡಿಎಫ್ ಶಾಸಕರು ಆಕ್ಷೇಪಿಸಿದರು. ಸರಕಾರ ಯಾವ ಉದ್ದೇಶಕ್ಕಾಗಿ ಅದನ್ನು ಮಂಡಿಸುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.
ಕೇರಳ ಮತ್ತು ಇತರ ರಾಜ್ಯಗಳಲ್ಲಿರುವ ಹಿಂದೂಗಳು ಕೂಡ ಅರೆಬಿಕ್ ಭಾಷೆ ಕಲಿತು 52 ರಾಷ್ಟ್ರಗಳಲ್ಲಿ ಉತ್ತಮ ಉದ್ಯೋಗ ಪಡೆದು ಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ನೂರುಲ್ ಹುದಾ ಪ್ರತಿಪಾದಿಸಿದರು.
ಡಿ.13ರಂದು ಮುಖ್ಯಮಂತ್ರಿ ಸರ್ವಾನಂದ ಸೊನೊವಾಲ್ ನೇತೃತ್ವದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸರಕಾರಿ ಸ್ವಾಮ್ಯದ ಮದ್ರಸ ಮತ್ತು ಸಂಸ್ಕೃತ ಶಾಲೆಗಳನ್ನು ರದ್ದು ಮಾಡುವ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗಿತ್ತು. ಆದರೆ ಸೋಮವಾರ ಮಂಡಿಸಲಾಗಿರುವ ವಿಧೇಯಕದಲ್ಲಿ ಸಂಸ್ಕೃತ ಶಾಲೆಗಳನ್ನು ರದ್ದು ಮಾಡುವ ಉಲ್ಲೇಖ ಇರಲಿಲ್ಲ. ಅಸ್ಸಾಂನಲ್ಲಿ 610 ಸರಕಾರಿ ಮದ್ರಸಗಳು ಇವೆ. ಅವುಗಳಿಗೆ ವಾರ್ಷಿಕವಾಗಿ 260 ಕೋಟಿ ರೂ. ವೆಚ್ಚವಾಗುತ್ತಿದೆ.