Advertisement
ಕಡಲ ತಡಿಯ ಭಾರ್ಗವ ಡಾ| ಕೆ. ಶಿವರಾಮ ಕಾರಂತ 1936ರಿಂದ 1978ರ ತನಕ ಪುತ್ತೂರು ಪರ್ಲಡ್ಕದ ಬಾಲವನವನ್ನು ತಮ್ಮ ಸಾಹಿತ್ಯ, ಸಾಂಸ್ಕೃತಿಕ ಕೃಷಿಯ ಕರ್ಮಭೂಮಿಯನ್ನಾಗಿಸಿಕೊಂಡಿದ್ದರು. ಡಾ| ಶಿವರಾಮ ಕಾರಂತರ “ಮೂಕಜ್ಜಿಯ ಕನಸುಗಳು’ ಮಹಾ ಕಾದಂಬರಿಗೆ 1976ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿತ್ತು.
ಡಾ| ಕಾರಂತರು ತಮ್ಮ ಕೊನೆಯ ದಿನ ಗಳಲ್ಲಿ ಪುತ್ತೂರಿನಿಂದ ದೂರವಾದರೂ ಜ್ಞಾನಪೀಠ ಪ್ರಶಸ್ತಿ ಬಾಲವನದ ಕರ್ಮ ಭೂಮಿಯಲ್ಲಿಯೇ ಇರಿಸಿದ್ದರು. ಪುನಶ್ಚೇತನ, ಭದ್ರತೆಗಾಗಿ ಸ್ಥಳಾಂತರ
ಮೂರು ವರ್ಷಗಳ ಹಿಂದೆ ಡಾ| ಶಿವರಾಮ ಕಾರಂತರ ಬಾಲವನದಲ್ಲಿ ಪುನಶ್ಚೇತನ ಕಾಮಗಾರಿಗಳನ್ನು ಆರಂಭಿಸ ಲಾಗಿದೆ. ಕಾರಂತರ ಮನೆಯನ್ನು 30 ಲಕ್ಷ ರೂ. ವೆಚ್ಚದಲ್ಲಿ ಪುನಶ್ಚೇತನ ಮಾಡುವ ಸಂದರ್ಭದಲ್ಲಿ ಭದ್ರತೆಯ ಕಾರಣಕ್ಕಾಗಿ ಜ್ಞಾನಪೀಠ ಪ್ರಶಸ್ತಿಯನ್ನು ಬಾಲವನದಿಂದ ಸರಕಾರಿ ಲಾಕರ್‌ಗೆ ಸ್ಥಳಾಂತರ ಮಾಡಲಾಗಿತ್ತು.
Related Articles
Advertisement
ಈ ಬಾರಿ ಅ. 10ರಂದು ಕಾರಂತರ ಜನ್ಮದಿನೋತ್ಸವದ ಸಂದರ್ಭದಲ್ಲಿ ಸಾಹಿತ್ಯಾಸಕ್ತರ ಬೇಡಿಕೆಯ ಮೇರೆಗೆ ಬಾಲವನದಲ್ಲಿ ಪ್ರದರ್ಶನಕ್ಕೆ ಇಡುವ ವ್ಯವಸ್ಥೆಯನ್ನು ಸಹಾಯಕ ಆಯುಕ್ತರ ನೇತೃತ್ವದ ಸಮಿತಿಯ ಮೂಲಕ ಮಾಡಲಾಗಿತ್ತು. ಜತೆಗೆ ವಿಶೇಷವಾಗಿ ಪೊಲೀಸ್ ಭದ್ರತೆಯನ್ನೂ ನಿಯೋಜಿಸಲಾಗಿತ್ತು.
ಬಾಲವನದಲ್ಲಿ ಕಾರಂತರ ಮನೆಯ ಪುನಶ್ಚೇತನ ಕಾಮಗಾರಿ ನಡೆದಿದ್ದರೂ ಕಾರಂತರ ನಾಟ್ಯಶಾಲೆ, ರಂಗಮಂದಿರ, ಪ್ರಿಂಟಿಂಗ್ ಪ್ರಸ್ ಇದ್ದ ಗ್ರಂಥಾಲಯ ಮುಂತಾದವುಗಳ ಪುನಶ್ಚೇತನ ಕಾಮಗಾರಿ ನಡೆಯಬೇಕಿದೆ.
ಇದಕ್ಕಾಗಿ ಸರಕಾರ 1 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದೆ. ಸ್ವಲ್ಪ ಮಟ್ಟಿನ ಕೆಲಸ ನಡೆದಿದ್ದರೂ ಹೆಚ್ಚುವರಿ ಹಣಕ್ಕಾಗಿ ಗುತ್ತಿಗೆದಾರ ಸಂಸ್ಥೆ ಮನವಿ ಮಾಡಿದೆ.ಬಾಲವನದಲ್ಲಿ ಒಟ್ಟು ಪುನಶ್ಚೇತನ ಕಾಮಗಾರಿ ನಡೆದ ಬಳಿಕವಷ್ಟೇ ಜ್ಞಾನಪೀಠ ಪ್ರಶಸ್ತಿ ಸ್ಥಳಾಂತರಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತೆಯ ದೃಷ್ಟಿ
ಡಾ| ಶಿವರಾಮ ಕಾರಂತರಿಗೆ ಲಭಿಸಿದ ಅತ್ಯುಚ್ಚ ಗೌರವ ಜ್ಞಾನಪೀಠ ಪ್ರಶಸ್ತಿಗೆ ಭಾರೀ ಮೌಲ್ಯವಿರುವುದರಿಂದ ಭದ್ರತೆ ದೃಷ್ಟಿಯಿಂದ ಸರಕಾರಿ ಲಾಕರ್‌ಗೆ
ಸ್ಥಳಾಂತರ ಮಾಡಲಾಗಿದೆ. ಬೇಡಿಕೆಯ ಮೇರೆಗೆ ಒಂದು ದಿನ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಾಲವನದಲ್ಲಿ ಪುನಶ್ಚೇತನ ಕಾಮಗಾರಿ ಸಹಿತ ಒಟ್ಟು ವ್ಯವಸ್ಥೆಗಳು ಸಮರ್ಪಕವಾದ ಬಳಿಕ ಭದ್ರವಾದ ಲಾಕರ್ ನಿರ್ಮಿಸಿ ಅಲ್ಲಿಗೆ ಮರು ಸ್ಥಳಾಂತರ ಮಾಡಲಾಗುತ್ತದೆ.
– ಎಚ್.ಕೆ. ಕೃಷ್ಣಮೂರ್ತಿ, ಸಹಾಯಕ ಆಯುಕ್ತ, ಪುತ್ತೂರು ರಾಜೇಶ್ ಪಟ್ಟೆ