Advertisement

ಹಡಿಲು ಭೂಮಿ ಸರಕಾರದ ಸುಪರ್ದಿಗೆ: ಕಾಯ್ದೆಯಲ್ಲಿ ಅವಕಾಶ

02:18 AM Apr 20, 2021 | Team Udayavani |

ಉಡುಪಿ: ಜಿಲ್ಲೆಯಲ್ಲಿ ಎರಡು ವರ್ಷಗಳ ಕಾಲ ಹಡಿಲು ಬಿಟ್ಟ ಕೃಷಿ ಭೂಮಿಯನ್ನು ಸರಕಾರ ಸುಪರ್ದಿಗೆ ತೆಗೆದುಕೊಳ್ಳಲು ಕಾಯ್ದೆಯಲ್ಲಿ ಅವಕಾಶವಿದ್ದು ಇಂತಹವರಿಗೆ ನೊಟೀಸು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದರು.
ಉಡುಪಿ ವಿಧಾನಸಭಾ ಕ್ಷೇತ್ರದ ಕೃಷಿ ಆಂದೋಲನದ ಪ್ರಥಮ ಹಂತವಾಗಿ ಕೃಷಿ ಚಟುವಟಿಕೆ ನಡೆಸುವ ಗದ್ದೆಗಳಿಗೆ ಸಮರ್ಪಕವಾಗಿ ನೀರು ಹರಿದು ಹೋಗಲು ತೋಡುಗಳ ಹೂಳೆತ್ತುವ ಕಾರ್ಯಕ್ಕೆ ಸೋಮವಾರ ಕೆಳಪರ್ಕಳದ ಗೋಪಾಲಕೃಷ್ಣ ದೇವಸ್ಥಾನದ ಸಮೀಪದಲ್ಲಿ ಸೋಮವಾರ ಚಾಲನೆ ನೀಡಿ ಮಾತನಾಡಿದರು.

Advertisement

ಜಿಲ್ಲೆಯಲ್ಲಿ ಹಡಿಲು ಬಿಟ್ಟಿರುವ ಭೂಮಿ ಗಳನ್ನುಗುರುತಿಸುವಂತೆ ಈಗಾಗಲೇ ತಹಶೀಲ್ದಾರ್‌ ಸೂಚನೆ ನೀಡಲಾಗಿದೆ. ಎರಡನೇ ಹಂತವಾಗಿ ಹಡಿಲು ಭೂಮಿಯ ಮಾಲಕರಿಗೆ ನೊಟೀಸು ನೀಡಲಾಗುತ್ತದೆ. ಅನಂತರವು ಭೂಮಿಯಲ್ಲಿ ಕೃಷಿ ಮಾಡದೆ ಹೋದರೆ, ಅದನ್ನು ಸರಕಾರದ ವಶಕ್ಕೆ ತೆಗೆದುಕೊಳ್ಳಲು ಕಾಯ್ದೆಯಲ್ಲಿ ಅವಕಾಶ ವಿದೆ ಎಂದು ಹೇಳಿದರು.

ಕೃಷಿ ಇಲಾಖೆಯ ಅಧಿಕಾರಿಗಳು ಕೃಷಿಯಲ್ಲಿ ಯಾಂತ್ರೀಕರಣ ಅಳವಡಿಸಿ ಕೊಳ್ಳುವ ಮೂಲಕ ಲಾಭದಾಯಕವಾಗಿ ಮಾಡಲು ಸಾಧ್ಯವಿದೆ ಎಂದು ತೋರಿಸಿಕೊಟ್ಟಿದ್ದಾರೆ. ಯಾರೆಲ್ಲ ಭೂಮಿ ಹಡಿಲುಬಿಟ್ಟಿದ್ದಾರೆ ಅವರೆಲ್ಲರೂ ಕೃಷಿಯಲ್ಲಿ ತೊಡಗಿಸಿಕೊಳ್ಳಿ. ಭೂಮಿಯಲ್ಲಿ ಕೃಷಿ ಮಾಡುವುದರಿಂದ ನೀರು ಇಂಗಲು ಸಾಧ್ಯವಾಗುತ್ತದೆ. ಇದರಿಂದ ಸುತ್ತಮುತ್ತ ಅಂತರ್ಜಲ ಹೆಚ್ಚಾಗುತ್ತದೆ ಎಂದು.

ಶಾಸಕ ಕೆ. ರಘುಪತಿ ಭಟ್‌ ಮಾತನಾಡಿ, ಹಡಿಲು ಭೂಮಿ ಕೃಷಿ ಆಂದೋಲನದ 35 ನಗರಸಭೆ ವಾರ್ಡ್‌ ಹಾಗೂ 19 ಪಂಚಾಯತ್‌ ಸೇರಿದಂತೆ ಒಟ್ಟು 54 ಪ್ರದೇಶದಲ್ಲಿ ಹಿಟಾಚಿಗಳ ಮೂಲಕ ಕಾಲುವೆಗಳ ಹೊಳೆತ್ತುವ ಕಾರ್ಯಕ್ರಮ ಚಾಲನೆ ನೀಡಲಾಗಿದೆ. ಅಭಿಯಾನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 2,000 ಎಕರೆ ಪ್ರದೇಶದಲ್ಲಿ ಕೃಷಿ ಮಾಡುವ ಉದ್ದೇಶ ವನ್ನು ಹೊಂದಲಾಗಿದೆ. ಕೃಷಿ ಇಲಾಖೆ, ಜಿಲ್ಲಾಡಳಿತ, ವಿವಿಧ ಸಂಘಗಳು ಸಹಕಾರ ನೀಡುತ್ತಿವೆ. ಅಭಿಯಾನದ ಯಶಸ್ವಿಗೆ ರೈತರ ಸಹಾಯ ಅಗತ್ಯವಿದೆ ಎಂದರು.

ಕೃಷಿ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ್‌, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಶೇಷಕೃಷ್ಣ, ನಗರ ಬಿಜೆಪಿ ಅಧ್ಯಕ್ಷ ಮಹೇಶ್‌ ಠಾಕೂರ್‌, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್‌ ಅಂಚನ್‌, ನಗರಸಭಾ ಸದಸ್ಯ ಮಂಜುನಾಥ್‌ ಮಣಿಪಾಲ, ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾಕರ ಮೋರ್ಚಾ ಪ. ಕಾರ್ಯದರ್ಶಿ ಅಲ್ವಿನ್‌ ಡಿ’ಸೋಜಾ, ನಿಟ್ಟೂರು ಪ್ರೌಢ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಮುರಳಿ ಕಡೆಕಾರ್‌ ಸ್ಥಳೀಯ ರಂಜಿತ್‌, ಹೇಮಂತ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next