ಮುಳಬಾಗಿಲು: ತಾಲೂಕಿನಲ್ಲಿ ಕಳೆದ ಐದು ವರ್ಷಗಳ ಹಿಂದೆ ಖಾಸಗೀ ಕಂಪನಿಯೊಂದು ಸೋಲಾರ್ ವಿದ್ಯುತ್ ಘಟಕ ನಿರ್ಮಾಣ ನೆಪದಲ್ಲಿ 60 ಎಕರೆ ಸರ್ಕಾರಿ ಜಮೀನನ್ನು ಅಕ್ರಮವಾಗಿ ವಶಪಡಿಸಿಕೊಂಡಿ ದ್ದರೂ, ತಾಲೂಕು ಆಡಳಿತ ಇದುವರೆಗೂ ತೆರವು ಗೊಳಿಸಿರುವುದಿಲ್ಲ. ಆದ್ದರಿಂದ ಶೀಘ್ರವಾಗಿ ಸರ್ಕಾರಿ ಜಮೀ ನನ್ನು ವಶ ಪಡಿಸಿಕೊಳ್ಳದೇ ಇದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಒತ್ತಾಯಿಸಿದರು.
ನಗರದ ಸರ್ಕಾರಿ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಾರಾದರೂ ಬಡ ರೈತರು ತಮ್ಮ ಜೀವನ ನಿರ್ವಹಣೆಗಾಗಿ ಸ್ವಲ್ಪ ಜಮೀನನ್ನು ಒತ್ತುವರಿ ಮಾಡಿಕೊಂಡರೆ ಒತ್ತುವರಿ ತೆರವುಗೊಳಿಸುವ ಕಂದಾಯ ಇಲಾಖೆ ಅಧಿಕಾರಿಗಳು, ಇತ್ತ ಮುಂಬೈನ ಆದಿತ್ಯಾ ಬಿರಾÉ ಗ್ರೂಪ್ಸ್ ಕಂಪನಿ ಮತ್ತು ಆಂಧ್ರದ ಕರ್ನೂಲು ಮೂಲದ ಸೋಲಾರ್ ಕಿಂಗ್ ಇಂಡಿಯಾ ಕಂಪನಿ ಕಪಟತನದಿಂದ ಕೋಟ್ಯಂತರ ರೂ. ಬೆಲೆ ಬಾಳುವ 75ಎಕರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆಂದು ಆರೋಪಿಸಿದರು.
ಕ್ರೆಡಲ್‌ನಿಂದ ಟೆಂಡರ್: 2016ರಲ್ಲಿ ಮುಂಬೈನ ಆದಿತ್ಯಾ ಬಿರ್ಲಾ ಗ್ರೂಪ್ಸ್ ಕಂಪನಿ ಮುಳಬಾಗಿಲು ತಾಲೂಕಿನಲ್ಲಿ 20 ಮೆ.ವ್ಯಾ ಸೋಲಾರ್ ವಿದ್ಯುತ್ ಉತ್ಪಾದಿಸಿ ಸರಬರಾಜು ಮಾಡಲು ಕ್ರೆಡಲ್‌ನಿಂದ ಟೆಂಡರ್ ಪಡೆದಿತ್ತು. ಆದರೆ, ಕಂಪನಿ ಯಾವುದೇ ನಿಖರವಾದ ಗ್ರಾಮ ಮತ್ತು ಸರ್ವೆ ನಂಬರ್ ಜಮೀನಿ ನಲ್ಲಿ ಸೋಲಾರ್ ಘಟಕ ನಿರ್ಮಾಣ ಮಾಡುವುದಾಗಿ ಮಾಹಿತಿ ನೀಡದೇ ಉತ್ಪಾದಿಸಿದ ಸೋಲಾರ್ ವಿದ್ಯುತ್ತನ್ನು ಬೈರಕೂರು ಸಬ್‌ಸ್ಟೇಷನ್‌ಗೆ ಸರಬರಾಜು ಮಾಡಲು 7 ಕಿ.ಮೀ ದೂರದ ತಂತಿ ಹಾಕಲು ಅನುಮತಿ ಪಡೆದಿದ್ದರು. ಅದರಂತೆ ಸದರಿ ಕಂಪನಿ 2017ರಲ್ಲಿ ಬೈರಕೂರು ಹೋಬಳಿ ಪುಣ್ಯಹಳ್ಳಿ ಗ್ರಾಮದ ಪಕ್ಕದಲ್ಲಿ ಸೋಲಾರ್ ವಿದ್ಯುತ್ ಘಟಕ ನಿರ್ಮಾಣಕ್ಕೆ ಚಿಂತಿಸಿ, ಘಟಕ ನಿರ್ಮಾಣದ ಗುತ್ತಿಗೆಯನ್ನು ಆಂಧ್ರದ ಕರ್ನೂಲು ಮೂಲದ ಸೋಲಾರ್ ಕಿಂಗ್ ಇಂಡಿಯಾ ಕಂಪನಿಗೆ ನೀಡಿದ್ದರು ಎಂದರು.
ಸರ್ಕಾರದ ಅನುಮತಿ ಪಡೆದಿಲ್ಲ: ಸೋಲಾರ್ ಕಿಂಗ್ ಇಂಡಿಯಾ ಕಂಪನಿ ತಾಲೂಕಿನ ಪುಣ್ಯಹಳ್ಳಿ ಸ.ನಂ. 116 ಮತ್ತು 117ರ ಎರಡೂ ಸರ್ವೆ ನಂಬರ್‌ಗಳಲ್ಲಿನ 60 ಎಕರೆ ಸರ್ಕಾರಿ ಜಮೀನು ಸೇರಿ ಪ.ಜಾತಿ, ವರ್ಗಗಳ ರೈತರಿಗೆ ಮಂಜೂರಾಗಿದ್ದ ಖುಷ್ಕಿ ಜಮೀ ನನ್ನು ರೈತರಿಂದ ಜಿಪಿಎ ಮೂಲಕ ಪಡೆದಿದ್ದು, ದಲಿತ ರೈತರಿಂದ ಜಮೀನು ಕೊಂಡುಕೊಳ್ಳಲು ಸರ್ಕಾರ ದಿಂದ ಅನುಮತಿ ಪಡೆಯದೇ, ಪಡೆದುಕೊಂಡ ಜಮೀನು ಭೂ ಪರಿವರ್ತನೆ ಮಾಡಿಸದೇ ಸರ್ಕಾರದ ನೀತಿ ನಿಯಮ ಗಾಳಿಗೆ ತೂರಿ ಬಹುತೇಕ ಸೋಲಾರ್ ಘಟಕ ನಿರ್ಮಾಣ ಮಾಡಿ ದ್ದರು. ಆದರೆ, ಅಂದಿನ ಇಂಧನ ಇಲಾ ಖೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರ ಆದೇಶ ಸಂಖ್ಯೆ: ಇ.ಎನ್.70ವಿಎಸ್ ಸಿ2015, ದಿ.22/7/2016 ಆದೇಶದಂತೆ ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಸೋಲಾರ್ ಘಟಕ ನಿರ್ಮಾಣಕ್ಕೆ ತಡೆಯೊಡ್ಡಿ ಸದರಿ ಸ್ಥಳದಿಂದ ಸಂಪೂರ್ಣವಾಗಿ ತೆರವುಗೊಳಿಸಲು ಆದೇಶಿಸಿದ್ದರೆಂದರು.
ಅಂದಿನ ತಹಶೀಲ್ದಾರ್ ಬಿ.ಎನ್.ಪ್ರವೀಣ್ ನಂಗಲಿ ಪೊಲೀಸರ ಸಹಕಾರದೊಂದಿಗೆ ನಿರ್ಮಾಣ ಗೊಂಡಿದ್ದ ಸೋಲಾರ್ ಘಟಕವನ್ನು ಜೆಸಿಬಿಗಳಿಂದ ತೆರವುಗೊಳಿಸಿದ್ದರು. ಆದರೆ, ಆ ಸಂದರ್ಭದಲ್ಲಿ ಸದರಿ ಕಿಂಗ್ ಸೋಲಾರ್ ಇಂಡಿಯಾ ಕಂಪನಿ ಒತ್ತುವರಿ ಮಾಡಿಕೊಂಡಿರುವ 60 ಎಕರೆ ಸರ್ಕಾರಿ ಜಮೀನು ಇಂದಿಗೂ ಆದಿತ್ಯ ಬಿರ್ಲಾ ಗ್ರೂಪ್ ಅಧೀನದಲ್ಲಿಯೇ ಇದ್ದು, ಇದುವರೆಗೂ ತಾಲೂಕು ಆಡಳಿತ ತೆರವುಗೊಳಿಸಿ ವಶಕ್ಕೆ ಪಡೆದುಕೊಂಡಿರುವುದಿಲ್ಲ ಎಂದು ಆರೋಪಿಸಿದರು.
ಸರ್ಕಾರಿ ಜಮೀನು ಒತ್ತುವರಿ ತೆರವು ಕಾರ್ಯಾಚರಣೆ ತಮಗೆ ಸಂಬಂಧಿಸಿ ದ್ದಲ್ಲ. ಅದು ರಾಜಸ್ವ ನಿರೀಕ್ಷಕರ ವಿಚಾರ. ಈ ವಿಚಾರವಾಗಿ ತಾಲೂಕು ಕಚೇರಿ ಅಧಿಕಾರಿಗಳು ಏನು ಮಾಡಿದ್ದಾರೋ ನಮಗೆ ಗೊತ್ತಿಲ್ಲ.
-ಡಿ.ಟಿ.ವೆಂಕಟೇಶಯ್ಯ, ಉಪ ತಹಶೀಲ್ದಾರ್, ಬೈರಕೂರು ನಾಡಕಚೇರಿ
ಈ ಕುರಿತು ತಮಗೆ ಮಾಹಿತಿ ಇಲ್ಲ. ತಹಶೀಲ್ದಾರ್ ಅವರೊಂದಿಗೆ ಚರ್ಚಿಸಿ, ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು.
-ವೆಂಕಟ್‌ರಾಜಾ, ಜಿಲ್ಲಾಧಿಕಾರಿ