Advertisement

ಸರ್ಕಾರಿ ಭೂಮಿ ಅತಿಕ್ರಮಣ ತೆರವಿಗೆ ಸೂಚನೆ

12:55 PM Aug 05, 2017 | Team Udayavani |

ಧಾರವಾಡ: ತಾಲೂಕಿನ ಹೆಬ್ಬಳ್ಳಿ, ಶಿವಳ್ಳಿ ಮತ್ತು ಅಮ್ಮಿನಬಾವಿ ಗ್ರಾಮಗಳಲ್ಲಿ ಅತಿಕ್ರಮಣಗೊಂಡಿರುವ ಗಾಂವಠಾಣಾ ಜಾಗೆಯನ್ನು ಒಂದು ತಿಂಗಳೊಳಗೆ ತೆರವುಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ್‌ ಕುಲಕರ್ಣಿ ಅಧಿಕಾರಿಗಳಿಗೆ ಸೂಚನೆ ನೀಡಿದರು. 

Advertisement

ಇಲ್ಲಿನ ಆಲೂರು ವೆಂಕಟರಾವ್‌ ಭವನದಲ್ಲಿ ಶುಕ್ರವಾರ ನಡೆದ ಜಿಲ್ಲಾ ಜನಸಂಪರ್ಕ ಸಭೆಯಲ್ಲಿ, ಶಿವಳ್ಳಿ ನಿವಾಸಿ ಅಬ್ದುಲ್‌ ಗಣಿ ಎಂಬುವರು ಕಳೆದ 30 ವರ್ಷಗಳಿಂದ ಅರ್ಜಿ ಕೊಡುತ್ತಿದ್ದೇನೆ ನನಗೆ ಒಂದು ನಿವೇಶನ ಕೊಡಿ ಎಂದು ವಿನಂತಿಸಿಕೊಂಡರು. ಈ ಕುರಿತು ವಿವರಣೆ ಕೇಳಿದ ಸಚಿವ ವಿನಯ್‌ ಕುಲಕರ್ಣಿ, ಹೆಬ್ಬಳ್ಳಿ, ಶಿವಳ್ಳಿ ಮತ್ತು ಅಮ್ಮಿನಬಾವಿ ಗ್ರಾಮದಲ್ಲಿ ನೂರಾರು ಎಕರೆಯಷ್ಟು ಸರ್ಕಾರಿ ಜಮೀನು ಇದೆ. ಇದನ್ನು ಕೆಲವರು ಎಕರೆಗಟ್ಟಲೇ ಅತಿಕ್ರಮಿಸಿಕೊಂಡಿದ್ದಾರೆ.

ಕೆಲವರು ಎರಡೂರು ಎಕರೆಯಷ್ಟೂ ಭೂಮಿಗೆ ಟ್ರೆಂಚ್‌ ಹೊಡೆದುಕೊಂಡು ಕೂತಿದ್ದಾರೆ. ಆದರೆ ಇಲ್ಲಿ ಮನೆ ಇಲ್ಲದ ನೂರಾರು ಬಡವರು ಇದ್ದಾರೆ. ಹೀಗಾಗಿ ಈಗಾಗಲೇ ಅಲ್ಲಿ ಮನೆಗಳನ್ನು ನಿರ್ಮಿಸಿದ್ದನ್ನು ಬಿಟ್ಟು ಉಳಿದೆಲ್ಲವನ್ನು ಕೂಡಲೇ ಮರಳಿ ಪಡೆದುಕೊಳ್ಳಬೇಕು. ಇನ್ನು ಒಂದು ತಿಂಗಳಲ್ಲಿ ಈ ಕೆಲಸ ಮಾಡಿ ಮುಗಿಸುವಂತೆ ಸಚಿವ ವಿನಯ್‌ ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೂ ಸೂಚಿಸಿದರು. 

ಭ್ರಷ್ಟರ ಗಡಿಪಾರು: ತಹಶೀಲ್ದಾರ್‌ ಕಚೇರಿಯಲ್ಲಿ ಆಗಬೇಕಿರುವ ಕೆಲಸವೊಂದಕ್ಕೆ ಲಂಚ ಕೇಳುತ್ತಿದ್ದಾರೆ ಎಂದು ಗರಗ ಗ್ರಾಮದ ಮಾನಪ್ಪ ದಾನಪ್ಪನವರ ಎಂಬ ಹಿರಿಯ ನಾಗರಿಕರು ಸಭೆಯಲ್ಲಿ ದೂರು ನೀಡಿದರು. ಸಚಿವ ವಿನಯ್‌ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು, ಧಾರವಾಡ ತಹಶೀಲ್ದಾರ ಕಚೇರಿಯಲ್ಲಿ ಲಂಚ ತಿನ್ನೋರ ಹಾವಳಿ ಹೆಚ್ಚಾಗಿದ್ದು ನನ್ನ ಗಮನಕ್ಕೂ ಬಂದಿದೆ. ಅಲ್ಲಿರುವವರು ಕೋಟ್ಯಾಧೀಶರಾಗಿದ್ದು, ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡುತ್ತಿದ್ದಾರೆ. ಅಂತವರ ಪಟ್ಟಿ ಮಾಡಿ ಕೂಡಲೇ ಜಿಲ್ಲೆಯಿಂದ ಅವರನ್ನು ಹೊರಕ್ಕೆ ಹಾಕಿ ಎಂದರು.  

ಸುಮೋಟೋ ಕೇಸ್‌ಗೆ ಸಲಹೆ: ಮಾಳಮಡ್ಡಿಯ ವಾಸುದೇವಾಚಾರ್ಯ ಎಂಬುವರು ಮಾತನಾಡಿ, 5 ಗುಂಟೆಯಷ್ಟು ಪಿತ್ರಾರ್ಜಿತ ಜಾಗವನ್ನು ಭೂಮಾಪನ ಸಮೀಕ್ಷೆ ಮಾಡಿಕೊಡಲು 50 ಸಾವಿರ ರೂ. ಲಂಚ ಕೇಳಿದ್ದು, ಕೆಲವರು ಹಿಂಸೆ ಕೊಡುತ್ತಿದ್ದಾರೆ. ಲಂಚ ನೀಡಲು ನಿರಾಕರಿಸಿದಾಗ ಕಾಗದ ಪತ್ರವನ್ನೇ ಭೂ ಮಾಪನ ಇಲಾಖೆ ಅಧಿಕಾರಿಗಳಾದ ರಾಜಣ್ಣ ಮತ್ತು ಕೆ.ಜಿ. ಲಟ್ಟಿ ಎಂಬುವರು ಹೇರುಪೇರು ಮಾಡಿಟ್ಟಿದ್ದು, ಅವರೀಗ ಧಾರವಾಡ ಭೂಮಾಪನ ಕಚೇರಿಯಿಂದ ವರ್ಗವಾಗಿದ್ದಾರೆ ಎಂದು ದೂರಿದರು. 

Advertisement

ಇದಕ್ಕೆ ಪ್ರತಿಕ್ರಿಯಿಸಿದ, ಸಚಿವ ವಿನಯ್‌ ಕುಲಕರ್ಣಿ ಮತ್ತು ಜಿಲ್ಲಾಧಿಕಾರಿ ಡಾ| ಬೊಮ್ಮನಹಳ್ಳಿ, ಈ ಕೆಲಸ ಮಾಡಿದ ಇಬ್ಬರು ಅಧಿಕಾರಿಗಳು ಸದ್ಯಕ್ಕೆ ಎಲ್ಲೇ ಇದ್ದರೂ ಸರಿ, ಅವರಿಗೆ ಮೊದಲು ನೋಟಿಸ್‌ಗಳನ್ನು ಕಳುಹಿಸಿ. ಪ್ರಕರಣದಲ್ಲಿ ಅವರು ಈ ನಿರ್ಣಯ ಕೈಗೊಳ್ಳಲು ಕಾರಣ ಕೇಳಿ. ಪ್ರಕರಣವನ್ನು ಮತ್ತೂಮ್ಮೆ ಪರಿಶೀಲನೆ ಮಾಡಲು ಸ್ವಯಂದೂರು(ಸುಮೋಟೋ ಕೇಸ್‌) ದಾಖಲಿಸುವಂತೆ ಭೂ ಮಾಪನ ಇಲಾಖೆಯ ಉಪ ನಿರ್ದೇಶಕ ನಿಸಾರ್‌ ಅಹಮದ್‌ ಅವರಿಗೆ ಸೂಚನೆ ನೀಡಿದರು. 

ಗೌಳಿಗರಿಗೆ ನೆರವು: ಧಾರವಾಡ ತಾಲೂಕಿನ ಅಳ್ನಾವರ ಹೋಬಳಿಯ ಗೌಳಿಗರು ವಾಸವಾಗಿರುವ ಚಂದ್ರಗಿರಿ ದೊಡ್ಡಿ, ಕಂಬಾರ ಗಣವಿ ಸೇರಿದಂತೆ ಅನೇಕ ಕಡೆಗಳಲ್ಲಿ ಗೌಳಿಗರಿಗೆ ಓಡಾಡಲು ರಸ್ತೆಗಳೇ ಇಲ್ಲವಾಗಿದೆ. ಅದೇ ರೀತಿ, ಅಂಗನವಾಡಿ ಮತ್ತು ಕುಡಿವ ನೀರಿನ ವ್ಯವಸ್ಥೆ ಮಾಡುವಂತೆ ಗೌಳಿಗರು ಸಚಿವರನ್ನು ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಸಚಿವ ವಿನಯ್‌, ಶೀಘ್ರವೇ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರಲ್ಲದೆ ಸ್ಥಳದಲ್ಲಿದ್ದ ಜಿಪಂ ಸದಸ್ಯ ನಿಂಗಪ್ಪ ಘಾಟೀನ್‌ ಗೆ ಈ ಕುರಿತು ಕೆಲಸ ನಿರ್ವಹಿಸುವಂತೆ ಸೂಚಿಸಿದರು. 

ವೆಬ್‌ಸೈಟ್‌ ಉದ್ಘಾಟನೆ: ಇದೇ ವೇಳೆ ವಿನಯ್‌ ಕುಲಕರ್ಣಿ ಅವರ ಅಭಿವೃದ್ದಿ ಕಾರ್ಯಗಳನ್ನು ಬಿಂಬಿಸುವ ಮತ್ತು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ನೂತನ ವೆಬ್‌ಸೈಟ್‌ನ್ನು ಕವಿವಿ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ| ಹರೀಶ್‌ ರಾಮಸ್ವಾಮಿ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಜಿಪಂ ಸಿಇಒ ಸ್ನೇಹಲ್‌ ರಾಯಮಾನೆ, ಎಸ್‌ಪಿ ಸಂಗೀತಾ, ಜಿಪಂ ಸದಸ್ಯರಾದ ಕಲ್ಲಪ್ಪ ಪುಡಕಲಕಟ್ಟಿ, ಚೆನ್ನಬಸಪ್ಪ  ಮಟ್ಟಿ, ನಿಂಗಪ್ಪ ಘಾಟೀನ್‌ ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next