ಬಂಗಾರಪೇಟೆ: ಸರ್ಕಾರಿ ಖರಾಬ್ ಜಮೀನುಗಳ ಮೇಲೆ ಭೂಗಳ್ಳರ ಕಣ್ಣುಬಿದ್ದಿದ್ದು, ಎಲ್ಲಲ್ಲಿ ಸರ್ಕಾರದ ಗೋಮಾಳ ಜಮೀನುಗಳಿದೆಯೋ ಅಕ್ಕಪಕ್ಕದಲ್ಲಿರುವ ಭೂ ಮಾಫಿಯಾ ಕೈಹಾಕಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಅಕ್ರಮ ಲೇಔಟ್‌ಗಳನ್ನು ನಿರ್ಮಾಣ ಮಾಡುತ್ತಿರುವುದಕ್ಕೆ ಕಂದಾಯ ಇಲಾಖೆಯು ಬ್ರೇಕ್ ಹಾಕದೇ ಪರೋಕ್ಷವಾಗಿ ಸಹಕಾರ ನೀಡುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ತಾಲೂಕಿನ ಡಿ.ಕೆ.ಹಳ್ಳಿ ಗ್ರಾಪಂ ವ್ಯಾಪ್ತಿ ನಗರಗಳಲ್ಲಿ ಸರ್ಕಾರದ ಜಮೀನು ಭೂ ಕಬಳಿಕೆ ಆಗುತ್ತಿದ್ದು, ಇದಕ್ಕೆ ಸಾಕ್ಷಿಯಾಗಿ ಡಿ.ಕೆ. ಹಳ್ಳಿ ಫ್ಲಾಂಟೇಶನ್ ಕಂದಾಯ ಗ್ರಾಮಕ್ಕೆ ಸೇರಿದ ಸರ್ವೆ ನಂ. 58ರಲ್ಲಿ ಸರ್ಕಾರದ ಖರಾಬು 11.09 ಎಕರೆ ಭೂ ಪ್ರದೇಶವನ್ನು ಹೊಂದಿದೆ ಎಂದು ಕಂದಾಯ ಇಲಾಖೆಯು ಆನ್‌ಲೈನ್‌ನ ತನ್ನ ವೆಬ್‌ಸೈಟ್‌ನಲ್ಲಿ ತೋರಿಸುತ್ತಿದೆ. ಆದರೆ, ಈ ಅಳತೆ ಜಮೀನು ರಾತ್ರೋರಾತ್ರಿ ಮಾಯವಾಗುತ್ತಿದೆ.
ಸರ್ವೆ ನಂ. 58ರಲ್ಲಿ 11.09 ಎಕರೆ ಜಮೀನಿನಲ್ಲಿ ಎಲ್ಲವೂ ಖಾಲಿಯಾಗಿದೆ. ಇದರಲ್ಲಿ ಉಳಿದಿರುವುದು ಕೇವಲ ಬೃಹತ್ ಗಾತ್ರದ ರಾಜಕಾಲುವೆ ಒಂದೇ. ಇದರಲ್ಲೂ ಕೆಲವು ಕಡೆ ಒತ್ತುವರಿ ನಡೆದಿದ್ದು, ಅಕ್ರಮ ಲೇಔಟ್ ಮಾಡಿಕೊಂಡು ನಿವೇಶನಗಳನ್ನು ಮಾಡಿ ಗ್ರಾಪಂನಲ್ಲಿ ಇ-ಸ್ವತ್ತು ಮಾಡಿಕೊಂಡು ಮನೆಗಳನ್ನು ನಿರ್ಮಿಸಲಾಗಿದೆ. ತಾಲೂಕಿನ ಡಿಕೆ ಹಳ್ಳಿ ಗ್ರಾಪಂಗೆ ಸೇರಿದ ಫ್ಲಾಂಟೇ ಶನ್, ಎಚ್.ಪಿ.ನಗರ ಸೇರಿದಂತೆ ಕೆಲವು ನಗರಗಳಲ್ಲಿ ಭೂ ಮಾಫಿಯಾದವರು ಅಕ್ರಮವಾಗಿ 1950 ಸಾಲಿನ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಕಂದಾಯ ಇಲಾಖೆ ಹಾಗೂ ಗ್ರಾಪಂ ಅಧಿಕಾರಿಗಳ ಕುಮ್ಮಕ್ಕಿನಿಂದ ಒತ್ತುವರಿ ಮಾಡಿಕೊಂಡಿದ್ದು, ಸರ್ಕಾರದ ಗೋಮಾಳ ಹಾಗೂ ಖರಾಬು ಜಮೀನುಗಳು ಪೂರ್ಣವಾಗಿ ಮಾಯವಾಗಿವೆ.
ಸರ್ವೆ ನಂ.58ರಲ್ಲಿ ಮಾತ್ರ 11.09 ಎಕರೆ ಜಮೀನು ಇರುವ ಬಗ್ಗ ದಾಖಲೆಗಳಿದ್ದರೂ ಜಮೀನೆಲ್ಲವೂ ಮಾಯವಾಗಿದೆ. ಇತ್ತೀಚೆಗೆ ಭೂ ಮಾಫಿಯಾ ತಂಡ ವೊಂದು ಅಕ್ರಮವಾಗಿ ನಕಲಿ ದಾಖಲೆ ಸೃಷ್ಟಿಸಿಕೊಂಡು ಎಚ್.ಪಿ.ನಗರದಲ್ಲಿ ಹಾದುಹೋಗುವ ಅಗಲ ವಾಗಿರುವ ರಾಜಕಾಲುವೆಯನ್ನು ಕೆಡವಿ ಸಮದಟ್ಟು ಮಾಡುತ್ತಿದ್ದಾರೆ. ಪುರಾತನ ಕಾಲದಲ್ಲಿ ರಾಜಕಾಲುವೆಗೆ ಹೂಳು ಬರದಂತೆ ಅಡ್ಡವಾಗಿ ಹಾಕಲಾಗಿದ್ದ ಕಲ್ಲು ಬಂಡೆಗಳನ್ನು ಸಿಡಿಸಿ ತೆರವು ಮಾಡಿದ್ದರೂ ಕಂದಾಯ ಇಲಾಖೆ ಹಾಗೂ ಗ್ರಾಪಂ ಅಧಿಕಾರಿಗಳು ಅಕ್ರಮ ಒತ್ತುವರಿ ಮಾಡುತ್ತಿರುವುದಕ್ಕೆ ನಿಲ್ಲಿಸುವ ಗೋಜಿಗೆ ಹೋಗಲೇ ಇಲ್ಲ ಎಂದು ಸ್ಥಳೀಯ ಸಾರ್ವಜನಿಕರ ಆರೋಪವಾಗಿದೆ. ಈ ರಾಜಕಾಲುವೆಯಲ್ಲಿ ಅಕ್ರಮ ಲೇಔಟ್ ಮಾಡುವ ಉದ್ದೇಶದಿಂದ ಅಕ್ರಮವಾಗಿ ಭೂ ಮಾಫಿಯಾ ತಂಡವು ಸುಮಾರು 45 ನಿವೇಶನಗಳನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಅಕ್ರಮವಾಗಿ ನೀಲನಕ್ಷೆ ತಯಾರು ಮಾಡಿದ್ದು, ಯಾವುದೇ ದಾಖಲೆಗಳು ಇಲ್ಲದಿದ್ದರೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಗ್ರಾಪಂ ಅಧಿಕಾರಿಗಳ ಮೂಲಕ ಅಕ್ರಮವಾಗಿ ಇ-ಸ್ವತ್ತು ನಿರ್ಮಿಸಿ ಲಾಭಿ ನಡೆಸುತ್ತಿವೆ ಎಂಬ ಆರೋಪ ವ್ಯಕ್ತವಾಗಿದೆ.
ಗ್ರಾಪಂ ಅಧಿಕಾರಿಗಳು ಇ-ಸ್ವತ್ತು ಮಾಡದಿರುವ ಮೇಲಾಧಿಕಾರಿಗಳ ಮೂಲಕ ದಾಖಲೆಗಳನ್ನು ಸಲ್ಲಿಸಿ ಗ್ರಾಪಂ ಆಡಳಿತ ಮಂಡಳಿಯ ಗಮನಕ್ಕೂ ತರದೇ ಅಕ್ರಮ ನಡೆಸಿದ್ದಾರೆ ಎಂಬುದು ತಿಳಿದು ಬಂದಿದೆ.
ಜಮೀನು ಹದ್ದುಬಸ್ತಿಗೆ ಒತ್ತಾಯ: ತಾಲೂಕಿನ ಡಿಕೆ ಹಳ್ಳಿ ಫ್ಲಾಂಟೇಶನ್ ಸರ್ವೆ ನಂ. 58ರಲ್ಲಿ 11.09 ಎಕರೆ ಜಮೀನು ಇರುವ ಬಗ್ಗೆ ಪಹಣಿ ಬರುತ್ತಿದೆ. ಆದರೆ, ಈ ಜಮೀನು ಎಲ್ಲಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಕಂದಾಯ ಇಲಾಖೆ ಅಧಿಕಾರಿಗಳಿಗೂ ಗೊತ್ತಿಲ್ಲ.
ಈ ಜಮೀನಿ ನಲ್ಲಿ ಈಗಾಗಲೇ ಹಲವಾರು ಅಕ್ರಮ ಲೇಔಟ್ ಗಳು ತಲೆಎತ್ತಿವೆ. 30 ವರ್ಷಗಳಿಂದಲೂ ನಕಲಿ ದಾಖಲೆ ಸೃಷ್ಟಿಸಿಕೊಂಡು ನಿವೇಶನಗಳನ್ನು ಮಾಡಿ ಮಾರಾಟ ಮಾಡಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಕಂದಾಯ ಇಲಾಖೆ ಅಧಿಕಾರಿ ಗಳು ಹಾಗೂ ತಹಶೀಲ್ದಾರ್‌ರವರು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಸರ್ವೆ ಮಾಡಿಸಿ ಸರ್ಕಾರದ ಖರಾಬು ಇರುವ ಜಮೀನಿಗೆ ಹದ್ದಬಸ್ತು ನಿರ್ಮಾಣ ಮಾಡಿ ಸರ್ಕಾರದ ಆಸ್ತಿಯನ್ನು ಕಾಪಾಡಬೇಕು ಬೇಕು ಎಂದು ಡಿ.ಕೆ.ಹಳ್ಳಿ ಫ್ಲಾಂಟೇಶನ್ ಸ್ಥಳೀಯ ನಿವಾಸಿ ಸುನೀಲ್ ಕುಮಾರ್ ಒತ್ತಾಯಿಸಿದ್ದಾರೆ.
ತಾಲೂಕಿನಲ್ಲಿ ಸರ್ಕಾರಿ ಜಮೀನು ಎಲ್ಲೇ ಒತ್ತುವರಿಯಾಗಿರುವ ಮನವಿ ಬಂದ ಕೂಡಲೇ ಕೂಡಲೇ ಕ್ರಮಕೈಗೊಳ್ಳ ಲಾಗುವುದು. ಡಿಕೆ ಹಳ್ಳಿ ಫ್ಲಾಂಟೇಶನ್ ಸರ್ವೆ ನಂ. 58ರಲ್ಲಿ 11.09 ಎಕರೆ ಜಮೀ ನಿದ್ದು, ಈ ಜಮೀನು ಒತ್ತುವರಿಯಾಗಿರುವ ಬಗ್ಗೆ ಒಮ್ಮೆ ದೂರು ಬಂದ ಹಿನ್ನಲೆಯಲ್ಲಿ ಸಂಬಂಧಪಟ್ಟ ಗ್ರಾಮ ಲೆಕ್ಕಿಗರಿಗೆ ಸೂಚನೆ ನೀಡಿ ರಾಜಕಾಲುವೆ ಒತ್ತುವರಿ ವಿರುದ್ಧ ಲೇಔಟ್ ಅಕ್ರಮ ನಿರ್ಮಾಣವನ್ನು ನಿಲ್ಲಿಸಲಾಗಿದೆ. ಈ ಜಮೀನಿನ ಸರ್ವೇಗೆ ಕ್ರಮವಹಿಸಲಾಗುವುದು. –
ಎಂ.ದಯಾನಂದ್, ತಹಶೀಲ್ದಾರ್, ಬಂಗಾರಪೇಟೆ
–ಎಂ.ಸಿ.ಮಂಜುನಾಥ್