Advertisement

ಒತ್ತುವರಿ ಕಂಡು ಕಣ್ಮುಚ್ಚಿ ಕುಳಿತ ಅಧಿಕಾರಿಗಳು!

06:00 AM Oct 03, 2017 | Team Udayavani |

ಬೆಂಗಳೂರು: ರಾಜ್ಯಾದ್ಯಂತ ಕಳೆದ ಆರು ತಿಂಗಳಲ್ಲಿ ಕೇವಲ 4800 ಎಕರೆ ಸರ್ಕಾರಿ ಭೂಮಿ ಒತ್ತುವರಿ ತೆರವುಗೊಂಡಿದ್ದು, ಇನ್ನೂ ಲಕ್ಷಾಂತರ ಕೋಟಿ ರೂ. ಬೆಲೆ ಬಾಳುವ 1.85 ಲಕ್ಷ ಎಕರೆ ಭೂಮಿ ಒತ್ತುವರಿ ತೆರವು ಬಾಕಿ ಇದೆ ಎಂಬ ಆಘಾತಕಾರಿ ವಿಷಯ ಬಹಿರಂಗವಾಗಿದೆ.

Advertisement

ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಿ ವಶಕ್ಕೆ ಪಡೆಯುವಂತೆ ಕರ್ನಾಟಕ ಸರ್ಕಾರಿ ಜಮೀನುಗಳ ನಿಗಮವು (ಕೆಪಿಎಲ್‌ಸಿ) ನಿರಂತರವಾಗಿ ನಿರ್ದೇಶನ ನೀಡುತ್ತಿದ್ದರೂ ಜಿಲ್ಲಾ ಮಟ್ಟದಲ್ಲಿ ತೆರವು ಕಾರ್ಯಾಚರಣೆ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ. ನಿಗಮ ವಿಧಿಸುವ ಗಡುವಿಗೆ ಬಹಳಷ್ಟು ಜಿಲ್ಲಾಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ.

ಜಿಲ್ಲಾಮಟ್ಟದಲ್ಲಿ ಸರ್ಕಾರಿ ಜಮೀನು ಒತ್ತುವರಿ ತೆರವು ಆಮೆಗತಿಯಲ್ಲಿ ಸಾಗುತ್ತಿರುವುದಕ್ಕೆ ಉದಾಹರಣೆ ಎಂದರೆ, ಆರು ತಿಂಗಳಲ್ಲಿ 13 ಜಿಲ್ಲೆಗಳಲ್ಲಿ ಒತ್ತುವರಿ ತೆರವು ಕಾರ್ಯವೇ ನಡೆದಿಲ್ಲ.ಮೂರು ಹಾಗೂ ಐದು ಎಕರೆಗಿಂತ ಹೆಚ್ಚು ಭೂಮಿ ಒತ್ತುವರಿ ಮಾಡಿಕೊಂಡಿರುವ ಸುಮಾರು 80 ಸಾವಿರ ಎಕರೆ ಭೂಮಿಯನ್ನು 2017ರ ಮಾರ್ಚ್‌ನೊಳಗೆ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ನಿಗಮ ನೀಡಿದ ಸೂಚನೆಗೆ ಬಹುತೇಕ ಜಿಲ್ಲೆಗಳಿಂದ ಸ್ಪಂದನೆ ಸಿಕ್ಕಿಲ್ಲ.

ಹೀಗಾಗಿ, ತೆರವು ಕಾರ್ಯ ಆಮೆಗತಿಯಲ್ಲಿ ನಡೆಯುತ್ತಿದೆ. ಆರು ತಿಂಗಳಲ್ಲಿ 4,800 ಎಕರೆ ಭೂಮಿ ಒತ್ತುವರಿ ತೆರವುಗೊಂಡಿದ್ದು, ಇದೇ ವೇಗದಲ್ಲಿ ತೆರವು ಕಾರ್ಯ ನಡೆದರೆ ಈವರೆಗೆ ಪತ್ತೆ ಹಚ್ಚಿರುವ 1.85 ಲಕ್ಷ ಎಕರೆ ಒತ್ತುವರಿ ತೆರವುಗೊಳಿಸಲು ಹಲವು ದಶಕಗಳೇ ಬೇಕಾಗಬಹುದು. ರಾಜ್ಯದಲ್ಲಿರುವ 63.83 ಲಕ್ಷ ಎಕರೆ ಕಂದಾಯ ಭೂಮಿಯಲ್ಲಿ ಒಟ್ಟು 12.19 ಲಕ್ಷ ಎಕರೆ ಭೂಮಿ ಒತ್ತುವರಿಯಾಗಿದೆ. ಬಗರ್‌ಹುಕುಂ ಸಕ್ರಮದಡಿ 7.54 ಲಕ್ಷ ಎಕರೆ, 8091 ಎಕರೆಗೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ವ್ಯಾಜ್ಯವಿದ್ದರೆ, 7881 ಎಕರೆ ಭೂಮಿ ಸಾರ್ವಜನಿಕ ಉದ್ದೇಶಕ್ಕೆ ಬಳಕೆಯಾಗಿದೆ.

ಉಳಿದಂತೆ ಒಟ್ಟು 4.49 ಲಕ್ಷ ಸರ್ಕಾರಿ ಭೂಮಿ ಕಬಳಿಕೆಯಾಗಿರುವುದು ಕಂಡುಬಂದಿದೆ. 2017ರ ಜ.31ರವರೆಗೆ ಒಟ್ಟು 1,96,237 ಎಕರೆ ಒತ್ತುವರಿ ತೆರವು ಬಾಕಿ ಉಳಿದಿತ್ತು.  4800 ಎಕರೆ ಒತ್ತುವರಿ ತೆರವು 16 ಜಿಲ್ಲೆಗಳಲ್ಲಿ ಕಳೆದ ಫೆಬ್ರುವರಿ 1ರಿಂದ ಜುಲೈ 31ರವರೆಗಿನ ಅವಧಿಯಲ್ಲಿ ಒಟ್ಟು 4800 ಎಕರೆ ಒತ್ತುವರಿ ತೆರವುಗೊಳಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಈ ಅವಧಿಯಲ್ಲಿ ಬಳ್ಳಾರಿಯಲ್ಲಿ 1257 ಎಕರೆ ಒತ್ತುವರಿ ತೆರವಾಗಿದ್ದರೆ, ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 1254 ಎಕರೆ ಸರ್ಕಾರಿ ಭೂಮಿ ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗದಲ್ಲಿ 809, ಚಿಕ್ಕಬಳ್ಳಾಪುರದಲ್ಲಿ 728 ಎಕರೆ ಭೂಮಿ ಒತ್ತುವರಿ ತೆರವುಗೊಂಡಿದೆ ಎಂಬುದು ಕೆಪಿಎಲ್‌ಸಿ ಅಂಕಿಅಂಶಗಳಿಂದ ಗೊತ್ತಾಗಿದೆ. 13 ಜಿಲ್ಲೆಗಳಲ್ಲಿ ತೆರವು ಪ್ರಗತಿ ಶೂನ್ಯ ರಾಜ್ಯದ 13 ಜಿಲ್ಲೆಗಳಲ್ಲಿ ಕಳೆದ ಫೆಬ್ರುವರಿ 1ರಿಂದ ಜುಲೈ 31ರವರೆಗಿನ ಅವಧಿಯಲ್ಲಿ ಇಂಚು ಭೂಮಿಯಷ್ಟೂ ಸರ್ಕಾರಿ ಭೂಮಿ ಒತ್ತುವರಿ ತೆರವಾಗಿಲ್ಲ.

Advertisement

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈವರೆಗೆ ಪತ್ತೆ ಹಚ್ಚಲಾಗಿದ್ದ ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಿ ಸದ್ಯ ಕಂದಾಯ ಭೂಮಿ ಒತ್ತುವರಿಯಿಲ್ಲದ ಏಕೈಕ ಜಿಲ್ಲೆ ಎಂಬಂತಾಗಿದೆ. ಈ ಜಿಲ್ಲೆಯಲ್ಲಿ ಪತ್ತೆಹಚ್ಚಲಾಗಿದ್ದ 12,609 ಎಕರೆ ಒತ್ತುವರಿ ವರ್ಷದ ಹಿಂದೆಯೇ ತೆರವುಗೊಳಿಸಲಾಗಿದೆ.

ಕಂದಾಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಆದ್ಯತೆ ಮೇರೆಗೆ ಕೈಗೊಳ್ಳುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಬರ ನಿರ್ವಹಣೆ, ಇತರೆ ಜವಾಬ್ದಾರಿ ನಿರ್ವಹಣೆ ಜತೆಗೆ ಒತ್ತುವರಿ ತೆರವು ಕಾರ್ಯ ಕೈಗೊಳ್ಳಬೇಕಿರುತ್ತದೆ. ಹಾಗಾಗಿ ಸೂಚಿತ ಕ್ರಿಯಾಯೋಜನೆಯಂತೆ ಒತ್ತುವರಿ ತೆರವುಗೊಳಿಸುವಂತೆ ಸೂಚನೆ ನೀಡಲಾಗುತ್ತಿದೆ. ಹಾಗೆಯೇ ಆರು ತಿಂಗಳಲ್ಲಿ ತೆರವು ಕಾರ್ಯಾಚರಣೆ ನಡೆಯದ ಜಿಲ್ಲೆಗಳಲ್ಲಿ ಆದ್ಯತೆ ಮೇರೆಗೆ ತೆರವು ಕಾರ್ಯ ಕೈಗೊಳ್ಳುವಂತೆ ಸೂಚಿಸಲಾಗುವುದು. -ಎನ್‌.ವಿ.ಪ್ರಸಾದ್‌, ಕೆಪಿಎಲ್‌ಸಿ ವ್ಯವಸ್ಥಾಪಕ ನಿರ್ದೇಶಕ

ರಾಜ್ಯಾದ್ಯಂತ ಸರ್ಕಾರಿ ಭೂಮಿ ಒತ್ತುವರಿ ಪತ್ತೆಗೆ ಆರಂಭವಾದ ಸರ್ವೇ ಪೂರ್ಣಗೊಳ್ಳಲು ಹಿಂದಿನ ಸರ್ಕಾರ ಅವಕಾಶ ನೀಡಲಿಲ್ಲ. ಆದರೆ 2011ರ ಮೇವರೆಗಿನ ಸರ್ವೇ ಆಧರಿಸಿ 1.98 ಲಕ್ಷ ಎಕರೆ ಒತ್ತುವರಿ ಭೂಮಿ ಪತ್ತೆ ಹಚ್ಚಲಾಗಿತ್ತು. ಆದರೆ ಈವರೆಗೆ 13,000 ಎಕರೆ ಒತ್ತುವರಿಯಷ್ಟೇ ತೆರವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಹತ್ತಾರು ಸಾವಿರ ಎಕರೆ ಒತ್ತುವರಿಯಾಗಿದ್ದು, ಆ ಬಗ್ಗೆ ಉಲ್ಲೇಖವಿಲ್ಲದಿರುವುದು ಅನುಮಾನ ಮೂಡಿಸಿದೆ.
-ವಿ.ಬಾಲಸುಬ್ರಮಣ್ಯಂ, ನಿವೃತ್ತ ಐಎಎಸ್‌ ಅಧಿಕಾರಿ

ಮೈಸೂರಲ್ಲಿ ಒಂದಿಂಚೂ ತೆರವಾಗಿಲ್ಲ
ವಿಶೇಷವೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಲ್ಲಿ ಒಂದಿಂಚು ಭೂಮಿಯೂ ತೆರವಾಗಿಲ್ಲ. ಅದೇ ರೀತಿ ಚಿಕ್ಕಮಗಳೂರಲ್ಲಿ ತೆರವು ಕಾರ್ಯ ನಡೆದೇ ಇಲ್ಲ. ಉಳಿದ ಜಿಲ್ಲೆಗಳಲ್ಲಿ ತೆರವಾಗದ ಭೂಮಿಯ ವಿವರ ಇಂತಿದೆ…
ಚಿಕ್ಕಮಗಳೂರು – 48,073
ಚಿತ್ರದುರ್ಗ -15603
ದಕ್ಷಿಣ ಕನ್ನಡ -13218
ದಾವಣಗೆರೆ – 1955
ಧಾರವಾಡ -853
ಹಾವೇರಿ – 790
ಕಲಬುರಗಿ -9640
ಕೋಲಾರ-273
ಕೊಪ್ಪಳ -513
ಮೈಸೂರು- 1592
ರಾಮನಗರ -607
ಉತ್ತರ ಕನ್ನಡ -1158
ಯಾದಗಿರಿ -550

– ಎಂ.ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next