Advertisement

ಸರಕಾರಿ ಭೂಮಿ ಕಬಳಿಕೆ: ತೆರವು ಕಾರ್ಯಾಚರಣೆಗೆ ಮತ್ತೆ ಚಾಲನೆ

09:55 PM May 14, 2019 | Team Udayavani |

ಕಾಸರಗೋಡು: ಕೇರಳದಲ್ಲಿ ಸರಕಾರಿ ಭೂಮಿಯ ಅಕ್ರಮ ಕಬಳಿಕೆ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಲು ರಾಜ್ಯ ಸರಕಾರವು ಮುಂದಾಗಿದೆ. ಅದಕ್ಕೆ ಪೂರಕವಾಗಿ ರಾಜ್ಯ ಕಂದಾಯ ಇಲಾಖೆಯು ಅಧಿಸೂಚನೆಯನ್ನೂ ಹೊರಡಿಸಿದೆ.

Advertisement

ಅದರಂತೆ ಕೇರಳದ ಎಲ್ಲ ಜಿಲ್ಲೆಗಳಲ್ಲೂ ಸರಕಾರಿ ಭೂಮಿ ಅತಿಕ್ರಮಣ ಬಗ್ಗೆ ತನಿಖೆ ನಡೆಸಲಾಗುವುದು. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಅದೆಷ್ಟೋ ಪ್ರಮಾಣದ ಸರಕಾರಿ ಭೂಮಿ ಕಬಳಿಕೆ ಮಾಡಲಾಗಿದೆ. ಸರಕಾರಿ ಸ್ಥಳವನ್ನು ಅನಧಿಕೃತವಾಗಿ ಕೈವಶಪಡಿಸಿಕೊಂಡವರು ಯಾರು ಎಂಬುದನ್ನು ಗುರುತಿಸಿ ಅವರಿಂದ ಅಂತಹ ಜಮೀನನ್ನು ತೆರವುಗೊಳಿಸುವಂತೆ ಮಾಡುವ ಕ್ರಮಗಳನ್ನು ಕೈಗೊಳ್ಳಲು ಕಂದಾಯ ಇಲಾಖೆಯು ಮಹತ್ವದ ನಿರ್ಧಾರ ಕೈಗೊಂಡಿದೆ.

ಸರಕಾರಿ ಭೂಮಿಯನ್ನು ಅಕ್ರಮವಾಗಿ ಕೈವಶಪಡಿಸಿಕೊಂಡವರಿಂದ ಅದನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಈ ಹಿಂದೆಯೂ ಆರಂಭಿಸಲಾಗಿತ್ತು. ಅದು ಹಲವೆಡೆಗಳಲ್ಲಿ ಭಾರೀ ವಿವಾದಗಳನ್ನು ಸೃಷ್ಟಿಸಿ ಅದರಿಂದಾಗಿ ಅನೇಕ ಪ್ರದೇಶಗಳ ಕಾರ್ಯಾಚರಣೆ ಬಳಿಕ ನಿಲುಗಡೆಗೊಂಡಿತ್ತು. ಕಂದಾಯ ಇಲಾಖೆಯ 2018ರ ಡಿಸೆಂಬರ್‌ ತಿಂಗಳ ಲೆಕ್ಕಾಚಾರದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಾಗಿ ಒಟ್ಟು 213.67 ಹೆಕ್ಟೇರ್‌ (528 ಎಕ್ರೆ) ಸರಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಣ ನಡೆಸಿರುವುದಾಗಿ ತಿಳಿಸಲಾಗಿತ್ತು. ಆದರೆ ಕಂದಾಯ ಇಲಾಖೆಯ ಲೆಕ್ಕಾಚಾರಕ್ಕಿಂತಲೂ ಅದೆಷ್ಟೋ ಹೆಕ್ಟೇರ್‌ ಸರಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಅಥವಾ ಸಂಸ್ಥೆಗಳು ಅಕ್ರಮವಾಗಿ ಕೈವಶವಿರಿಸಿಕೊಂಡಿರುವುದಾಗಿಯೂ ಹೇಳಲಾಗುತ್ತಿದೆ.

ಸರಕಾರಿ ಭೂಮಿಯನ್ನು ಅಕ್ರಮವಾಗಿ ಕೈವಶವಿರಿಸಿಕೊಂಡ ಬಗ್ಗೆ ರಾಜ್ಯದಲ್ಲಿ 2,537 ಪ್ರಕರಣಗಳು ದಾಖಲುಗೊಂಡಿವೆ. ಆ ಪೈಕಿ 665 ಮಂದಿ ಬಳಿಕ ತಮ್ಮ ಕೈವಶವಿದ್ದ ಸರಕಾರಿ ಜಮೀನನ್ನು ತೆರವುಗೊಳಿಸಿದ್ದರು.

ಇಡುಕ್ಕಿ ಜಿಲ್ಲೆಯಲ್ಲಿ ಅತಿಕ್ರಮಣ ಹೆಚ್ಚು
ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ 179 ಹೆಕ್ಟೇರ್‌ ಸರಕಾರಿ ಭೂಮಿ ಅಕ್ರಮವಾಗಿ ಹಲವರ‌ ಕೈವಶವಾಗಿರುವುದು ಪತ್ತೆಯಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಕೂಡ ಅದೆಷ್ಟೋ ಮಂದಿ ಸರಕಾರಿ ಭೂಮಿ ತಮ್ಮ ಸ್ವಾಧೀನ ದಲ್ಲಿರಿಸಿದ್ದು, ಅದನ್ನು ತೆರವು ಗೊಳಿಸುವ ಪ್ರಕ್ರಿಯೆಗೆ ಕಂದಾಯ ಇಲಾಖೆ ಮತ್ತೆ ಜೀವ ತುಂಬಿದೆ. ಕಾಸರಗೋಡು ಜಿಲ್ಲೆಯ ಕೆಲವು ಪ್ರದೇಶಗಳಲ್ಲೂ ಸರಕಾರಿ ಭೂಮಿ ಅತಿಕ್ರಮಣವಾಗಿರುವುದು ಕಂಡುಬಂದಿದೆ. ಈ ಕುರಿತು ಸಮಗ್ರ ತನಿಖೆಗೆ ಇಲಾಖೆಯು ನಿರ್ಧರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next