Advertisement

ಖಾಯಂ ಶಿಕ್ಷಕರಿಲ್ಲದೆ ಮುಚ್ಚುವ ಭೀತಿಯಲ್ಲಿ ಸರಕಾರಿ ಕನ್ನಡ ಶಾಲೆ

01:15 PM Mar 22, 2022 | Team Udayavani |

ತೆಕ್ಕಟ್ಟೆ: ಗ್ರಾಮೀಣ ಭಾಗದ ಅದೆಷ್ಟೋ ವಿದ್ಯಾರ್ಥಿಗಳಿಗೆ ಅಕ್ಷರ ಕಲಿಸಿದ ಶಾಲೆಯಲ್ಲೀಗ 3 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಖಾಯಂ ಶಿಕ್ಷಕರಿಲ್ಲದೇ ಕುಂದಾಪುರ ವಲಯದ ಕೊರ್ಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹೊಸಮಠ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದ್ದು, ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಮುಚ್ಚುವ ಭೀತಿ ಎದುರಾಗಿರುವುದು ಮಾತ್ರ ವಾಸ್ತವ ಸತ್ಯ.

Advertisement

ಕೊರೊನಾ ಅಟ್ಟಹಾಸದಿಂದ ಶೈಕ್ಷಣಿಕ ಕಾರ್ಯ ಚಟುವಟಿಕೆಯಲ್ಲಾದ ಗೊಂದಲ ಹಾಗೂ ಸರಕಾರಿ ಶಾಲೆಗಳಲ್ಲಿ ಆಂತರಿಕ ಪೈಪೋಟಿಯಿಂದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಆಶಾಕಿರಣವಾಗಿದ್ದ ಹೊಸಮಠ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲೀಗ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸರಕಾರದ ನಿಯಮಾನುಸಾರ ಖಾಯಂ ಶಿಕ್ಷಕರನ್ನು ಕೂಡಾ ಬೇರೆಡೆಗೆ ವರ್ಗಾವಣೆಗೊಂಡಿದ್ದಾರೆ. ಪ್ರಸ್ತುತ ಸ್ಥಳೀಯ ಹೆಸ್ಕಾತ್ತೂರು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ರವೀಂದ್ರ ನಾಯಕ್‌ ಅವರನ್ನು ವಾರಕ್ಕೆ ಮೂರು ದಿನಗಳು ಮಾತ್ರ ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ. ಉಳಿದಂತೆ ಗೌರವ ಶಿಕ್ಷಕಿಯಾಗಿ ಸ್ಥಳೀಯ ಕದೀಪಾ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.

ಮೂರು ವಿದ್ಯಾರ್ಥಿಗಳ ವ್ಯಾಸಂಗ

ಸದಾ ವಿದ್ಯಾರ್ಥಿಗಳಿಂದ ಕಲರವದಿಂದ ಕೂಡಿದ್ದ ಗ್ರಾಮೀಣ ಭಾಗದ ಶೈಕ್ಷಣಿಕ ಸಂಸ್ಥೆಯಲ್ಲೀಗ ತರಗತಿಯ ಕೋಣೆಗಳಲ್ಲಿ ವಿದ್ಯಾರ್ಥಿಗಳಿಲ್ಲದೇ ಮೌನ ಆವರಿಸಿದ್ದು, ಸದಾ ಹಸುರಿನಿಂದ ಕಂಗೊಳಿಸುತ್ತಿದ್ದ ಶಾಲಾ ಕೈದೋಟಗಳು ಬಿಸಿಲ ತಾಪಕ್ಕೆ ಸೊರಗಿ ಹೋಗಿದೆ. ಪ್ರಸ್ತುತ 5ನೇ ತರತಿಯಲ್ಲಿ 1 ವಿದ್ಯಾರ್ಥಿ, ಮೂರನೆಯ ತರಗತಿಯಲ್ಲಿ 1 ವಿದ್ಯಾರ್ಥಿ ಹಾಗೂ 2ನೇ ತರಗತಿಯಲ್ಲಿ 1 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಕನ್ನಡ ಶಾಲಾ ಉಳಿವಿಗೆ ಕ್ರಮ

Advertisement

ಆದೆಷ್ಟೋ ಗ್ರಾಮೀಣದ ವಿದ್ಯಾರ್ಥಿಗಳ ಜೀವನವನ್ನೇ ರೂಪಿಸಿದ ಈ ಶಿಕ್ಷಣ ಸಂಸ್ಥೆಯ ಉಳಿವಿಗಾಗಿ ಹಳೆ ವಿದ್ಯಾರ್ಥಿಗಳು ಒಂದಾಗಿ ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸಲಿದ್ದೇವೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಿಂದ ಗ್ರಾಮದ ಶಿಕ್ಷಣ ತಜ್ಞರು, ದಾನಿಗಳು ಹಾಗೂ ಹೆತ್ತ ವರ ಅಭಿಪ್ರಾಯ ಸಂಗ್ರಹಿಸಿ, ಈ ಶಾಲೆಯ ಉಳಿವಿಗೆ ಶಕ್ತಿಮೀರಿ ಕ್ರಮ ಕೈಗೊಳ್ಳಲಾಗುವುದು. – ದಿನೇಶ್‌ ಮೊಗವೀರ ಚಾರುಕೊಟ್ಟಿಗೆ, ಸದಸ್ಯರು, ಗ್ರಾ.ಪಂ. ಕೊರ್ಗಿ, ಹಳೆ ವಿದ್ಯಾರ್ಥಿ

ಖಾಯಂ ಶಿಕ್ಷಕರನ್ನು ನಿಯೋಜಿಸಿ

ಇಲ್ಲಿಗೆ ಕಾಡಿನಬೆಟ್ಟು, ಹೊಸಮಠ, ಕೂರುವಾಡಿ, ಮೂಡು ಕೆದೂರು, ಸಾಗಿನಗುಡ್ಡೆ ಸೇರಿದಂತೆ ಗ್ರಾಮೀಣ ವಿದ್ಯಾರ್ಥಿಗಳು ಕಲಿಕೆಗಾಗಿ ಬರುತ್ತಿದ್ದರು. ಅನಂತ ರ ಸಂಖ್ಯೆ ಏಕಾಏಕಿ ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಿಂದ ಮನೆ ಮನೆಗೆ ತೆರಳಿ ಅರಿವು ಮೂಡಿಸುವ ಮಹತ್ವದ ಕಾರ್ಯವನ್ನು ಒಂದಾಗಿ ನಡೆಸಲಿದ್ದು ಗ್ರಾಮಸ್ಥರ ಸಹಕಾರ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಗ್ರಾಮದ ಕನ್ನಡ ಶಾಲಾ ಉಳಿವಿಗಾಗಿ ಖಾಯಂ ಶಿಕ್ಷಕರನ್ನು ನಿಯೋಜನೆಗೊಳಿಸುವಲ್ಲಿ ಶಿಕ್ಷಣ ಇಲಾಖೆ ಧನಾತ್ಮಕವಾಗಿ ಸ್ಪಂದಿಸಬೇಕಾಗಿದೆ. – ಉಮೇಶ್‌ ಮೊಗವೀರ ಚಾರುಕೊಟ್ಟಿಗೆ, ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ

ಶೀಘ್ರ ನೇಮಕ

ಪ್ರಕ್ರಿಯೆ ಹೊಸಮಠ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ರವೀಂದ್ರ ನಾಯಕ್‌ ಅವರನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದ್ದು, ಗೌರವ ಶಿಕ್ಷಕಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಈ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಸರಕಾರ ಈಗಾಗಲೇ ಶಿಕ್ಷಕರ ನೇಮಕಾತಿ ಹಾಗೂ ಹೆಚ್ಚುವರಿ ಶಿಕ್ಷಕರ ಮರು ನೇಮಕ ಪ್ರಕ್ರಿಯೆ ಕೂಡ ನಡೆಸಲಿದೆ. – ಅರುಣ್‌ ಕುಮಾರ್‌ ಶೆಟ್ಟಿ , ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕುಂದಾಪುರ 

ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next