Advertisement

ಪರಿಹಾರವಾಗದ ಗೊಂದಲ: ಬೆರಳೆಣಿಕೆಯಲ್ಲಿ ವಿದ್ಯಾರ್ಥಿಗಳ ಸೇರ್ಪಡೆ

08:43 PM Dec 03, 2019 | Lakshmi GovindaRaju |

ಪಡುಬಿದ್ರಿ: ಐದು ವರ್ಷಗಳ ಹಿಂದೆ ರಾಜ್ಯ ಸರಕಾರದಿಂದ ಘೋಷಣೆಯಾಗಿ ಮೂರು ವರ್ಷಗಳಿಂದ ಎಲ್ಲೂರು ಗ್ರಾ. ಪಂ. ಸಭಾಭವನದಲ್ಲಿ ನಡೆಯುತ್ತಿರುವ ಎಲ್ಲೂರಿನ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯನ್ನು ಯಾರೂ ಕೇಳುವವರೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಗ್ರಾ.ಪಂ. ಜಮೀನು ನೀಡಿದ್ದರೂ ಐಟಿಐ ನಿರ್ಮಾಣವಾಗಿಲ್ಲ. ಜಮೀನಿನ ಕುರಿತಾದ ಗೊಂದಲ ಪರಿಹಾರವಾಗಿಲ್ಲ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಬರೇ 8 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

Advertisement

ವೃತ್ತಿ ಆಧಾರಿತ ಎರಡು ವರ್ಷಗಳ ತರಬೇತಿ ಅವಧಿಯ ಫಿಟ್ಟರ್‌ ಮತ್ತು ಎಲೆಕ್ಟ್ರಿಕಲ್‌ ವಿಭಾಗಕ್ಕೆ ತಲಾ 20 ಸ್ಥಾನಗಳಿದ್ದರೂ, ಎಲೆಕ್ಟ್ರಿಕಲ್‌ ವಿಭಾಗಕ್ಕೆ 8 ವಿದ್ಯಾರ್ಥಿಗಳನ್ನು ಆನ್‌ಲೈನ್‌ ಮೂಲಕ ದಾಖಲಾತಿ ಮಾಡಿಕೊಳ್ಳಲಾಗಿದೆ. ಐಟಿಐಗೆ ಆರಂಭದಲ್ಲಿ 10 ವಿದ್ಯಾರ್ಥಿಗಳು ದಾಖಲಾಗಿದ್ದರು. ಸೂಕ್ತ ಬಸ್‌ ಸೌಕರ್ಯ, ತರಬೇತುದಾರರ ಕೊರತೆಯಿಂದ 6 ವಿದ್ಯಾರ್ಥಿಗಳು ಅರ್ಧದಲ್ಲಿಯೇ ಸಂಸ್ಥೆ ಬಿಟ್ಟು ಹೋಗಿದ್ದರು.

ಆದರೂ ಅತಿಥಿ ತರಬೇತು ದಾರರೊಬ್ಬರನ್ನು ನೇಮಿಸಿ ಉಳಿದ 4 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ. ಇಲ್ಲಿನ ಸಂಸ್ಥೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಿಸಬೇಕಾದರೆ ಓರ್ವ ಪ್ರಾಚಾರ್ಯ, 4 ಜನ ಕಿರಿಯ ತರಬೇತುದಾರರು ಹಾಗೂ ಓರ್ವ ಕ್ಲಾರ್ಕ್‌ ಹುದ್ದೆ ಭರ್ತಿಯಾಗಬೇಕು. ಒಂದು ವೇಳೆ 15 ವಿದ್ಯಾರ್ಥಿಗಳು ದಾಖಲಾದಲ್ಲಿ ಪ್ರಾಚಾರ್ಯ, ಕಿರಿಯ ತರಬೇತು ದಾರ ಹಾಗೂ ಓರ್ವ ಕ್ಲರ್ಕ್‌ ನೇಮಕವಾ ಗಲೇಬೇಕು. ಆದರೆ ಪ್ರಸ್ತುತ ಓರ್ವ ಪ್ರಭಾರ ಪ್ರಾಂಶುಪಾಲರು, ಓರ್ವ ಅತಿಥಿ ತರಬೇತು ದಾರರು ತರಬೇತಿ ನೀಡುತ್ತಿದ್ದಾರೆ.

ಆರ್‌ಟಿಸಿ ಆಗಿದೆ; 9/11ಮಾಡಲಾಗದು
ನಂದಿಕೂರು ಬಳಿ ಮಂಜೂರಾಗಿರುವ ಸುಮಾರು 3 ಎಕರೆ ಸರಕಾರಿ ಜಮೀನು ಐಟಿಐ ಹೆಸರಿನಲ್ಲಿ ಪಹಣಿ ಪತ್ರ ಮಾಡಲಾಗಿದೆ. ಐಟಿಐಯಿಂದ ಪ್ರಾಚಾರ್ಯರ ಹೆಸರಿನಲ್ಲಿ 9//11 ಮಾಡಿ ಕೊಡುವಂತೆ ಗ್ರಾ. ಪಂ. ಬಳಿ ಕೇಳಿದ್ದಾರೆ. ಆದರೆ ಸರಕಾರಿ ಸಂಸ್ಥೆಗೆ 9/11 ಮಾಡಿಕೊಡಲು ಗ್ರಾ. ಪಂ.ನಲ್ಲಿ ಅವಕಾಶವಿಲ್ಲ. ಈ ಬಗ್ಗೆ ತಾ. ಪಂ. ಕಾರ್ಯನಿರ್ವಹಣಾ ಧಿಕಾರಿಯವರಲ್ಲಿ ಸ್ಪಷ್ಟನೆ ಪಡೆಯಲಾಗಿದೆ. ತಹಶೀಲ್ದಾರ್‌ರಲ್ಲಿ ಮಾತುಕತೆ ನಡೆಸಲಾಗುವುದು. ಐಟಿಐ ಇರುವ ಈಗಿನ ಸಮುದಾಯ ಭವನ ಕಟ್ಟಡವನ್ನು ನವೀಕರಿಸಲು ಗ್ರಾ.ಪಂ. ಬಳಿ ಅನುದಾನ ಕೊರತೆಯಿದೆ. ಅನುದಾನ ಒದಗಿಸುವಂತೆ ಶಾಸಕರಿಗೂ ಮನವಿ ಮಾಡಲಾಗಿದೆ ಎಂದು ಎಲ್ಲೂರು ಗ್ರಾ. ಪಂ. ಪಿಡಿಒ ಮಮತಾ ವೈ. ಶೆಟ್ಟಿ ಹೇಳಿದ್ದಾರೆ.

ಜಮೀನು ಗೊಂದಲ ಪರಿಹಾರಕ್ಕೆ ಪ್ರಯತ್ನ ಸಾಗಬೇಕು
ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿ, ನಂದಿಕೂರು-ಶಿರ್ವ ಲೋಕೋಪಯೋಗಿ ರಸ್ತೆಗೆ ಹೊಂದಿಕೊಂಡಿರುವ ನಂದಿಕೂರು ಬಳಿಯ ಸರ್ವೇ ನಂ. 285/3ರಲ್ಲಿ 3 ಎಕರೆ ಜಮೀನನ್ನು ಹಿಂದಿನ ಜಿಲ್ಲಾಧಿಕಾರಿ ಡಾ | ವಿಶಾಲ್‌ ಅವರು ಪರಿಶೀಲಿಸಿ ಐಟಿಐ ಹೆಸರಿಗೆ ಪಹಣಿ ಪತ್ರ ಮಾಡಿಸಿಕೊಟ್ಟಿದ್ದಾರೆ. ಅ ಜಮೀನಿನ ಗೊಂದಲ ಇನ್ನೂ ಪರಿಹಾರವಾಗದ ಕಾರಣ ಕಟ್ಟಡ ನಿರ್ಮಾಣಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ. ಕಟ್ಟಡ ನಿರ್ಮಾಣವಾಗದೆ ಎಲ್ಲೂರಿನ ಸಮುದಾಯ ಭವನದಲ್ಲಿಯೇ ಮುಂದೆಯೂ ಕಾರ್ಯಾಚರಿಸಬೇಕಾದ ಅನಿವಾರ್ಯತೆಯೂ ಇದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಅನುಕೂಲತೆಗಾಗಿ ಎಲ್ಲೂರಿನಲ್ಲಿ ಐಟಿಐ ಸಂಸ್ಥೆ ಆರಂಭವಾಗಿದ್ದರೂ, ಸೂಕ್ತ ಬಸ್‌ ಸೌಕರ್ಯವಿಲ್ಲದೆ ವಿದ್ಯಾರ್ಥಿಗಳು ದಾಖಲಾತಿಗೆ ಹಿಂದೇಟು ಹಾಕುತ್ತಿದ್ದಾರೆ. ನಂದಿಕೂರು ಬಳಿ ಗೊತ್ತುಪಡಿಸಿರುವ ಜಮೀನು ಐಟಿಐಗೆ ಸೂಕ್ತ ಸ್ಥಳವಾಗಿದೆ. ಸನಿಹದಲ್ಲಿಯೇ ಯುಪಿಸಿಎಲ್‌, ನಂದಿಕೂರು ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಇದೆ. ಗ್ರಾ. ಪಂ. ಹಾಗೂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಜಮೀನಿನ ಗೊಂದಲವನ್ನು ಶೀಘ್ರ ಪರಿಹರಿಸಿ ಐಟಿಐ ನಿರ್ಮಾಣಕ್ಕೆ ಪ್ರಯತ್ನಿಸಿದಲ್ಲಿ ಸುತ್ತಮುತ್ತಲಿನ ಹೆಚ್ಚಿನ ಮಕ್ಕಳಿಗೆ ಅನುಕೂಲವಾಗಲಿದೆ.

Advertisement

ಮುಂದಿನ ವರ್ಷ ಹೆಚ್ಚಿನ ದಾಖಲಾತಿಯ ಆಶಾವಾದ
ಸರಕಾರ ರಾಜ್ಯಾದ್ಯಂತ ನೂರು ಐಟಿಐಗಳ ಸ್ಥಾಪನೆ ಮಾಡಿದರೂ ಇನ್ನೂ ಸಿಬಂದಿ ನೇಮಕವಾಗಿಲ್ಲ. ಪ್ರಸ್ತುತ 1500 ಸಿಬಂದಿ ನೇಮಕಕ್ಕಾಗಿ ಪ್ರಕ್ರಿಯೆಗಳು ಆರಂಭವಾಗಿವೆೆ. ಅದರಂತೆ ಇಲ್ಲಿಯೂ ಸಿಬಂದಿ ನೇಮಕವಾಗುವ ಆಶಾಭಾವನೆಯಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಹೆಚ್ಚಿನ ದಾಖಲಾತಿಯೊಂದಿಗೆ ಸಂಸ್ಥೆ ಮುನ್ನಡೆಯುವ ವಿಶ್ವಾಸವಿದೆ. ಫಿಟ್ಟರ್‌ ವಿಭಾಗದ ತರಬೇತಿಗಾಗಿ ಯಂತ್ರೋಪಕರಣಗಳು ಸರ್ವ ಸನ್ನದ್ಧ ವಾಗಿವೆೆ. ಅದು ಕಾರ್ಯಾರಂಭಿಸಬೇಕಾದರೆ ಹೆಚ್ಚಿನ ವಿದ್ಯುತ್‌ ಸಂಪರ್ಕವಾಗಬೇಕು. ವಿದ್ಯುತ್‌ ಸಂಪರ್ಕಕ್ಕಾಗಿ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಡುವಂತೆ ಗ್ರಾ. ಪಂ. ಗೆ ತಿಳಿಸಲಾಗಿದೆ. ಸಮುದಾಯ ಭವನದಲ್ಲಿ ಕಾರ್ಯಾಚರಿಸುವ ಸಂಸ್ಥೆಗೆ ಸರಿಯಾಗಿ ಗಾಳಿ ಬೆಳಕು ಕಲ್ಪಿಸಿಕೊಡುವಂತೆಯೂ ಮನವಿ ಮಾಡಲಾಗಿದೆ. ನಂದಿಕೂರು ಬಳಿ ಗೊತ್ತುಪಡಿಸಿರುವ ಜಮೀನಿನ ಗೊಂದಲ ಸರಿಪಡಿಸುವ ಪ್ರಯತ್ನ ಮಾಡಲಾಗುತ್ತಿದೆ .
– ಭಾಸ್ಕರ ಶೆಟ್ಟಿ ,ಪ್ರಭಾರ ಪ್ರಾಂಶುಪಾಲ

Advertisement

Udayavani is now on Telegram. Click here to join our channel and stay updated with the latest news.

Next