ವಿಜಯಪುರ: ರಾಜ್ಯದಲ್ಲಿ ಕಳೆದ 40 ವರ್ಷಗಳಲ್ಲೇ ಕಂಡರಿಯದ ಭೀಕರ ಬರ ಆವರಿಸಿ ರೈತರು ಕಂಗೆಟ್ಟಿದ್ದಾರೆ. ಇಷ್ಟಾದರೂ ಸರ್ಕಾರ ರೈತರ ಸಂಕಷ್ಟದ ಸಂದರ್ಭದಲ್ಲಿ ರೈತರ ನೆರವಿಗೆ ಬಾರದೇ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಕಿಡಿ ಕಾರಿದರು.
ಬುಧವಾರ ಜಿಲ್ಲೆಯ ಬರ ಅಧ್ಯಯನಕೆ ಆಗಮಿಸಿದ್ದ ಬಿಜೆಪಿ ಬರ ಅಧ್ಯಯನ ತಂಡದ ನೇತೃತ್ವ ವಹಿಸಿದ್ದ ಅವರು, ವಿಜಯಪುರ ತಾಲೂಕಿನ ತಾಜಪುರ, ತೊರವಿ ಗ್ರಾಮಗಳ ಜಮೀನಿಗೆ ಭೇಟಿ ನೀಡಿ ಒಣಗಿದ ಬೆಳೆ ಪರಿಶೀಲಿಸಿ ರೈತರಿಂದ ಅಹವಾಲು ಸ್ವೀಕರಿಸಿದರು.
ಬೆಳೆದು ನಿಂತ ಬೆಳಿ ಒಣಗಿ ಬಾಳಾ ತ್ರಾಸ್ ಪರಸ್ಥಿತಿ ಬಂದೈತ್ರಿ ಸಾಹೇಬ್ರ, ಸರ್ಕಾರ ಸಾಲ ಮನ್ನಾ ಮಾಡ್ತೀನಿ ಅಂತಿದ್ರೂ ಮಾಡಿಲ್ಲ, ಮಾಡಿದ ಸಾಲ ತೀರಿಸೋದ ಹೆಂಗಂತ ತಿಳಿವಲ್ತಾಗೇತಿ. ಸರ್ಕಾರಕ್ಕೆ ನೀವರ ಒಂಚೂರು ಹೇಳಿ ನಮ್ಮ ನೆರವಿಗೆ ಕಳಿಸಿಕೊಡ್ರಿ ಎಂದು ಅಂಗಲಾಚಿದರು.
ಮಳೆ ಇಲ್ಲದೇ ಬೆಳೆದು ನಿಂತಿರುವ ಬೆಳೆಗಳು ಸಂಪೂರ್ಣ ನಷ್ಟವಾಗಿದ್ದು, ಪ್ರತಿ ಜಮೀನಿನ ಬೆಳೆ ಹಾನಿಯೇ ಇಲ್ಲಿನ ಬರದ ಭೀಕರತೆಯನ್ನು ಮನವರಿಕೆ ಮಾಡಿಕೊಡುತ್ತಿದೆ. ಒಣಗಿದ ಬೆಳೆ ರಕ್ಷಣೆಗೆ ದಾರಿ ತೋಚದೇ ರೈತರು ಕಂಗಾಲಾಗಿದ್ದಾರೆ.
ಜಾನುವಾರುಗಳನ್ನು ಕಸಾಯಿಖಾನೆಗೆ ಮಾರಿಕೊಂಡು ರೈತರು ಪಟ್ಟಣಗಳಿಗೆ ಗುಳೆ ಹೋಗುತ್ತಿದ್ದಾರೆ. ಇಷ್ಟಾದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂದು ದೂರಿದರು. ವಿಜಯಪುರ ಜಿಲ್ಲೆಯಲ್ಲಿ ಸಂಪೂರ್ಣ ಭೀಕರ ಬರ ಆವರಿಸಿದ್ದು, ಹೊಲದಲ್ಲಿ ಒಣಗಿರುವ ಬೆಳೆ ಸ್ವತ್ಛಗೊಳಿಸಲು ಕೂಡ ರೈತರ ಬಳಿ ಹಣ ಇಲ್ಲದ ಆರ್ಥಿಕ ಸಂಕಷ್ಟ ಎದುರಾಗಿದೆ. ಹೀಗಾಗಿ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಸಿಎಂ ಬರ ವೀಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಶಾಸಕರಾದ ಎ.ಎಸ್. ಪಾಟೀಲ ನಡಹಳ್ಳಿ, ಸೋಮನಗೌಡ ಪಾಟೀಲ ಸಾಸನೂರ, ಪಕ್ಷದ ಮುಖಂಡ ವಿಜುಗೌಡ ಪಾಟೀಲ ಇತರರು ಜಿಲ್ಲೆಯಲ್ಲಿ ಮಳೆ ಇಲ್ಲದೇ ಆವರಿಸಿರುವ ಭೀಕರ ಬರ ಪರಿಸ್ಥಿತಿಯ ಮನವರಿಕೆ ಮಾಡಿಕೊಟ್ಟರು.
ಜಿಲ್ಲೆಯ ಒಣಗಿದ ಬೆಳೆಗಳೇ ಇಲ್ಲಿನ ಭೀಕರ ಬರವನ್ನು ಮನವರಿಕೆ ಮಾಡಿಕೊಡುತ್ತಿವೆ. ಹೀಗಾಗಿ ಜಿಲ್ಲೆಯ ರೈತರ ಹೊಲದಲ್ಲಿ ಒಣಗಿ ನಿಂತಿರುವ ಬೆಳೆಯನ್ನು ಬೆಳಗಾವಿ ವಿಧಾನಸೌಧಕ್ಕೆ ತಂದು ಸದನದಲ್ಲಿ ತಂದು ಪ್ರದರ್ಶಿಸಿ. ಆಗಲಾದರೂ ದಪ್ಪ ಚರ್ಮದ ಸರ್ಕಾರ ಕಣ್ತೆರೆದು ನೋಡಲಿ ಎಂದು ಸಲಹೆ ನೀಡಿದರು. ಆರ್.ಎಸ್. ಪಾಟೀಲ, ಚಿದಾನಂದ ಚಲವಾದಿ, ರಾಜು ಬಿರಾದಾರ, ಶಿಲ್ಪಾ ಕುದರಗೊಂಡ ಇತರರು ಇದ್ದರು.