Advertisement

ಸರ್ಕಾರ ಬೀಳೋದಕ್ಕೆ ಅವಕಾಶ ಕೊಡಲ್ಲ

12:30 AM Jan 29, 2019 | Team Udayavani |

ಬೆಂಗಳೂರು: ‘ನಾನು ಎಲ್ಲ ನೋವನ್ನೂ ಸಹಿಸಿ ಕೊಂಡಿದ್ದು, ಸಮ್ಮಿಶ್ರ ಸರ್ಕಾರಕ್ಕೆ ತೊಂದರೆಯಾಗದಂತೆ ನನ್ನ ಪ್ರಯತ್ನ ಮಾಡುತ್ತೇನೆ’ ಎಂದಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕಾಂಗ್ರೆಸ್‌ನಿಂದ ಮೈತ್ರಿ ಧರ್ಮ ಪಾಲನೆಯಾಗಬೇಕು ಎಂದು ಕಿವಿ ಮಾತು ಹೇಳಿದ್ದಾರೆ.

Advertisement

ಪಕ್ಷದ ಕಚೇರಿಯಲ್ಲಿ ಜೆಡಿಎಸ್‌ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿರುವ ವೈ.ಎಸ್‌.ವಿ.ದತ್ತಾ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ‘ನಾನು ಎಲ್ಲ ನೋವನ್ನು ಸಹಿಸಿಕೊಂಡಿದ್ದೇನೆ. ಸಮ್ಮಿಶ್ರ ಸರ್ಕಾರಕ್ಕೆ ತೊಂದರೆಯಾಗದಂತೆ ನನ್ನ ಪ್ರಯತ್ನ ನಾನು ಮಾಡುತ್ತೇನೆ. ಆಮೇಲಿನದು ದೈವೇಚ್ಛೆ. ಆದರೆ, ಕಾಂಗ್ರೆಸ್‌ನಿಂದ ಮೈತ್ರಿ ಧರ್ಮ ಪಾಲನೆಯಾಗಬೇಕು’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಕೊನೇ ಹಂತದವರೆಗೂ ಸಮ್ಮಿಶ್ರ ಸರ್ಕಾರ ಉಳಿಸಲು ಪ್ರಯತ್ನ ಮಾಡುತ್ತೀನಿ. ಅದರ ಮೇಲೆ ಏನಾಗುತ್ತದೆಯೋ ಗೊತ್ತಿಲ್ಲ. ಮೈತ್ರಿ ಸರ್ಕಾರಕ್ಕೆ ಯಾವುದೇ ಅಪಾಯ ಬಂದ್ರೂ ಅದನ್ನು ಸರಿಪಡಿಸಿ ಕೊಂಡು ಹೋಗುವ ತಾಳ್ಮೆ-ಸಹನೆ ನಮಗಿದೆ. ದೇಶದ ಹಿತದೃಷ್ಟಿಯಿಂದ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ. ಯಾವುದೇ ಕಾರಣಕ್ಕೂ ಮೈತ್ರಿ ಸರ್ಕಾರ ಬೀಳ್ಳೋದಕ್ಕೆ ಅವಕಾಶ ಮಾಡಿಕೊಡಲ್ಲ. ಬಿಜೆಪಿ ಕಡೆ ಕಿಂಚಿತ್ತೂ ನೋಡಲ್ಲ’ ಎಂದರು.

ಕಾಂಗ್ರೆಸ್‌ ಶಾಸಕ ಎಸ್‌.ಟಿ.ಸೋಮಶೇಖರ್‌ ಹೇಳಿಕೆ ಕುರಿತು ಪ್ರಸ್ತಾಪಿಸಿದ ಅವರು, ಕಾಂಗ್ರೆಸ್‌, ರಾಷ್ಟ್ರೀಯ ಪಕ್ಷ. ಯಾರಾದರೂ ಅಸಮಾಧಾನ ಗೊಂಡಿದ್ದರೆ ವೈಯಕ್ತಿಕವಾಗಿ ನೋವು ಹೇಳಿಕೊಂಡರೆ ಅದನ್ನು ಸರಿಪಡಿಸುವ ಶಕ್ತಿ ಕಾಂಗ್ರೆಸ್‌ಗೆ ಇದೆ. ನಮಗೂ ನಮ್ಮ ಶಾಸಕರು ಏನಾದರೂ ದಾರಿ ತಪ್ಪಿ ಮಾತನಾಡಿದರೆ ಸರಿ ಮಾಡೋ ಶಕ್ತಿ ಇದೆ. ಕಾಂಗ್ರೆಸ್‌ ಶಾಸಕರು ಯಾಕೆ ಹೀಗೆ ಹೇಳಿದ್ದಾರೆ ಎಂಬುದು ನನಗೆ ಗೊತ್ತಿದೆ. ಅವೆಲ್ಲದರ ಬಗ್ಗೆ ಈಗ ಮಾತನಾಡೋದು ಬೇಡ. ನನ್ನ ರಾಜಕೀಯ ಅನುಭವದಲ್ಲಿ ರಾಜಕಾರಣ ಅರ್ಥಮಾಡಿಕೊಂಡಿದ್ದೇನೆ. ಮುಖ್ಯಮಂತ್ರಿಗೆ ಕಾಂಗ್ರೆಸ್‌ ಬಗ್ಗೆ ಅಸಮಾಧಾನವಿಲ್ಲ ಎಂದು ಸೂಕ್ಷ್ಮವಾಗಿ ತಿಳಿಸಿದರು. ಸಚಿವ ಪುಟ್ಟರಾಜು ಅವರು ಬಿಜೆಪಿ ಜತೆ ಇದ್ದಾಗ ಉತ್ತಮವಾಗಿತ್ತು ಎಂಬ ಹೇಳಿಕೆ ಬಗ್ಗೆ ಚರ್ಚೆ ಮಾಡಲ್ಲ. ಯಾರ ಹೇಳಿಕೆಗೂ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.

ನಿಗಮ-ಮಂಡಳಿ ನೇಮಕದ ಬಗ್ಗೆ ಎರಡು ದಿನಗಳಲ್ಲಿ ಚರ್ಚೆ ಮಾಡಿ ಅಂತಿಮ ತೀರ್ಮಾನ ಮಾಡಲಾಗುವುದು. ನಮ್ಮ ಪಾಲಿನ ಎಲ್ಲವನ್ನು ತುಂಬಲಾಗುವುದು ಎಂದು ತಿಳಿಸಿದರು.

Advertisement

ದತ್ತಾಗೆ ಶಹಬ್ಟಾಸ್‌ಗಿರಿ: ವ್ಯಕ್ತಿ ನಿಷ್ಠೆ, ಪಕ್ಷ ನಿಷ್ಠೆ ಇರುವಂತ ವ್ಯಕ್ತಿಯನ್ನು ನಾನು ನೋಡಿದ್ದರೆ ಅದು ದತ್ತಾ. ನನ್ನ ಕಷ್ಟ ಕಾಲದಲ್ಲಿ ಡಾ.ತಿಮ್ಮೇಗೌಡ, ದತ್ತಾ, ಉಗ್ರಪ್ಪ ಜತೆಗಿದ್ದರು. ನಾನು ಆತ್ಮಹತ್ಯೆ ಮಾಡಿಕೊಳ್ಳಬಹುದು ಅನ್ನೋ ಆತಂಕದಲ್ಲಿ ನನ್ನ ಜತೆ ಇರ್ತಿದ್ದರು. ನಂತರ, ಕೆಲವರು ಕಾಂಗ್ರೆಸ್‌ಗೆ ಹೋದರು. ಆದರೆ, ದತ್ತಾ ನನ್ನ ಬಿಟ್ಟು ಹೋಗಲಿಲ್ಲ ಎಂದು ದೇವೇಗೌಡರು ಶಹಬ್ಟಾಸ್‌ಗಿರಿ ನೀಡಿದರು.

ಪಕ್ಷ ಉಳಿಸಲು ದತ್ತಾಗೆ ಅಧಿಕಾರ ಕೊಟ್ಟಿದ್ದೇನೆ. ಮುಂದಿನ ಮೂರು ತಿಂಗಳಲ್ಲಿ ದತ್ತಾ ಕಡೂರಿಗೆ ಹೋಗಬಾರ್ದು. ಆಗ ಕಡೂರಿನ ಜನರೇ ಬಂದು ಎಳೆದುಕೊಂಡು ಹೋಗುತ್ತಾರೆ ಎಂದು ದತ್ತಾಗೆ ತಿಳಿಸಿದರು. ಪಕ್ಷದ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್‌, ಶಾಸಕರಾದ ಗೋಪಾಲಯ್ಯ, ಪರಿಷತ್‌ ಸದಸ್ಯರಾದ ಶರವಣ, ರಮೇಶ್‌ಗೌಡ, ಪರಿಷತ್‌ನ ಮಾಜಿ ಸದಸ್ಯ ರಮೇಶ್‌ಬಾಬು, ಮುಖಂಡರಾದ ಪ್ರಕಾಶ್‌, ಆರ್‌.ವಿ.ಹರೀಶ್‌ ಮತ್ತಿತರರು ಉಪಸ್ಥಿತರಿದ್ದರು.

ಇಂದು ಜೆಡಿಎಸ್‌ ರಾಷ್ಟ್ರೀಯ ಕಾರ್ಯಕಾರಿಣಿ
ಜೆಡಿಎಸ್‌ ಕಚೇರಿಯಲ್ಲಿ ಮಂಗಳವಾರ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯಲಿದೆ. ಲೋಕಸಭೆ ಚುನಾವಣೆ ಮೈತ್ರಿ ಸಂಬಂಧ ರಾಜಕೀಯ ನಿರ್ಣಯ ಕೈಗೊಳ್ಳಲಾಗುವುದು. ಕೇರಳ, ಉತ್ತರ ಪ್ರದೇಶ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ನಾವು ಸ್ಪರ್ಧೆ ಮಾಡಲಿದ್ದೇವೆ. ಬುಧವಾರ ಅರಮನೆ ಮೈದಾನದಲ್ಲಿ ರಾಷ್ಟ್ರೀಯ ಮಂಡಳಿ ಬಳಿಕ ಮಹಾಧಿವೇಶನ ಸಹ ನಡೆಯಲಿದ್ದು, ಒಂದು ಲಕ್ಷ ಜನ ಸೇರಲಿದ್ದಾರೆ. ಕೇಂದ್ರ ಸರ್ಕಾರದ ವೈಫ‌ಲ್ಯಗಳು ಸೇರಿ ರಾಜಕೀಯ ಹಾಗೂ ಆರ್ಥಿಕ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ದೇವೇಗೌಡ ತಿಳಿಸಿದರು. ದತ್ತಾ ಬೇಡಿಕೆ: ನಾನು ಪ್ರಚಾರ ಸಮಿತಿ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುವೆ. ಆ ವಿಶ್ವಾಸವೂ ನನಗಿದೆ. ಆದರೆ, ನನಗೆ ಸ್ವಲ್ಪ ಸ್ವಾತಂತ್ರ್ಯ ಕೊಡಬೇಕು. ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟನೆಗೆ ಪದಾಧಿಕಾರಿಗಳ ನೇಮಕ ಸಂಬಂಧ ಪಕ್ಷ ನಿಷ್ಠರನ್ನು ಗುರುತಿಸಿ ಪಟ್ಟಿ ಮಾಡಿ ತರುತ್ತೇನೆ. ನೀವು ಒಪ್ಪಿಗೆ ನೀಡಬೇಕು ಎಂದು ಪ್ರಚಾರ ಸಮಿತಿ ಕಾರ್ಯ ಭಾರ ಸ್ವೀಕರಿಸಿದ ದತ್ತಾ ವೇದಿಕೆಯಲ್ಲೇ ದೇವೇಗೌಡರು ಹಾಗೂ ಎಚ್.ವಿಶ್ವನಾಥ್‌ಗೆ ಮನವಿ ಮಾಡಿಕೊಂಡರು.

ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಸಂಬಂಧ ಕಾಂಗ್ರೆಸ್‌ ಜತೆ ಚರ್ಚೆ ನಡೆದಿಲ್ಲ. ಆದರೂ, ಮೂರು ಕ್ಷೇತ್ರಗಳಲ್ಲಿ ಸ್ವಲ್ಪ ಜಗ್ಗಾಟ ಆಗಬಹುದು. ಉಳಿದಂತೆ ಎಲ್ಲವೂ ಸುಗಮ ಆಗಲಿದೆ.
– ಎಚ್‌.ವಿಶ್ವನಾಥ್‌, ಜೆಡಿಎಸ್‌ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next