Advertisement

ಸರ್ಕಾರ ಅತಂತ್ರವಾಗಿದೆ, ನಾವು ಸನ್ಯಾಸಿಗಳಲ್ಲ:ಬಿಎಸ್‌ವೈ

12:30 AM Jan 01, 2019 | Team Udayavani |

ಬೆಂಗಳೂರು: ಸಮ್ಮಿಶ್ರ ಸರ್ಕಾರ ಅತಂತ್ರವಾಗಿದ್ದು, ಸರ್ಕಾರದಲ್ಲಿರುವ ಮಂತ್ರಿಗಳು ಸಮಾಧಾನವಾಗಿಲ್ಲ. ಯಾವ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು ಎಂದು ಪ್ರತಿಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

Advertisement

ಪಕ್ಷದ ಕಚೇರಿಯಲ್ಲಿ ಲೋಕಸಭೆ ಚುನಾವಣೆಗೆ ಜಿಲ್ಲಾವಾರು ಅಭ್ಯರ್ಥಿಗಳ ಆಯ್ಕೆ ಕುರಿತು ನಡೆದ ಸಭೆಯ ನಂತರ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,   ಹೊಸ ವರ್ಷದಲ್ಲಿ ಸರ್ಕಾರ ಜಂಟಿ ಅಧೀವೇಶನ ಕರೆಯಬೇಕು. ಅಧಿವೇಶನ ಸಮಯದಲ್ಲಿ ಎಲ್ಲ ಶಾಸಕರು ಸೇರುತ್ತಾರೆ. ಆ ಸಮಯದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವ ಮೂಲಕ ಕುತೂಹಲ ಮೂಡಿಸಿದರು.

ಬಿಜೆಪಿಯಿಂದ ಯಾವುದೇ ರೀತಿಯ ಆಪರೇಷನ್‌ ಕಮಲ ಮಾಡುತ್ತಿಲ್ಲ. ಜೆಡಿಎಸ್‌ ಹಾಗೂ ಕಾಂಗ್ರೆಸ್‌ನ ಯಾವ ಶಾಸಕರೂ ನಮ್ಮ ಸಂಪರ್ಕದಲ್ಲಿ ಇಲ್ಲ. ಆದರೆ, ಸರ್ಕಾರದಲ್ಲಿ ಇರುವವರೇ ಅಸಮಾಧಾನಗೊಂಡಿರುವುದರಿಂದ ಯಾವ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು ಎಂದು ತಿಳಿಸಿದರು.

ನಾವು ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ನಡೆಸುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ನಾವು ವಿರೋಧ ಪಕ್ಷದಲ್ಲಿ ಕುಳಿತು ನಮ್ಮ ಕೆಲಸ ಮಾಡುತ್ತಿದ್ದೇವೆ ಎಂದು ಹತ್ತಾರು ಬಾರಿ ಹೇಳಿದ್ದೇವೆ. ಬೇಜವಾಬ್ದಾರಿ ಹೇಳಿಕೆ ನೀಡುವುದು ಸಿದ್ದರಾಮಯ್ಯ ಅವರಿಗೆ ಶೋಭೆ ತರುವುದಿಲ್ಲ. ನಾನು ಬಿಜೆಪಿಯ ರಾಷ್ಟ್ರೀಯ ಅಧಿವೇಶನದಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಿದ್ದೆ. ಆಪರೇಷನ್‌ ಕಮಲ ಮಾಡಲು ಕೋಟ್ಯಂತರ ರೂ. ಆಮಿಷ ಒಡ್ಡಿರುವ ಬಗ್ಗೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

ಸಮ್ಮಿಶ್ರ ಸರ್ಕಾರ ಪತನವಾದರೆ ನಾವು ಸರ್ಕಾರ ರಚನೆ ಮಾಡುತ್ತೇವೆ. ನಾವೇನು ಸನ್ಯಾಸಿಗಳಲ್ಲ. ಕಾಂಗ್ರೆಸ್‌ ನಾಯಕರ ಜೊತೆ ಮುನಿಸಿಕೊಂಡಿರುವ ರಮೇಶ್‌ ಜಾರಕಿಹೊಳಿ ಯಾರ ಜೊತೆಗೆ ಸಂಪರ್ಕದಲ್ಲಿದ್ದಾರೆ, ಯಾರೊಂದಿಗೆ ಉಪಹಾರ ಸೇವಿಸುತ್ತಿದ್ದಾರೋ ನಮಗೆ ಗೊತ್ತಿಲ್ಲ ಎಂದರು.

Advertisement

ರಾಜ್ಯದಲ್ಲಿ 156 ತಾಲೂಕುಗಳಲ್ಲಿ ಬರಗಾಲ ಪರಿಸ್ಥಿತಿ ಇದೆ. ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಕೊರತೆ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಮುಖ್ಯಮಂತ್ರಿ ಹೊಸ ವರ್ಷ ಆಚರಣೆ ಮಾಡಲು ಸಿಂಗಪುರಕ್ಕೆ ತೆರಳಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. 

ಬೇಜವಾಬ್ದಾರಿ ಮುಖ್ಯಮಂತ್ರಿ ರಾಜ್ಯದ ಆಡಳಿತ ನಡೆಸುತ್ತಿರುವುದು ದುರದೃಷ್ಟಕರ.ಸಾಲ ಮನ್ನಾ ವಿಷಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಯಾಕೆ ಸುಳ್ಳು ಹೇಳುತ್ತಿದ್ದಾರೆ ಗೊತ್ತಿಲ್ಲ. ರಾಷ್ಟ್ರೀಕೃತ ಬ್ಯಾಂಕ್‌ಗಳು ಸಹಕಾರ ನೀಡದಿರುವುದಕ್ಕೆ ನಾವು ಕಾರಣ ಅಲ್ಲ ಎಂದು ತಿಳಿಸಿದರು.

ಒಳ್ಳೆಯ ಅಭಿಪ್ರಾಯ ಬೇಕಲ್ಲವೇ?
ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ  ಸಿದ್ದರಾಮಯ್ಯ ಆಡಳಿತ ಪಕ್ಷದಲ್ಲಿ ಇದ್ದರೂ ಪ್ರತಿಪಕ್ಷದವರಾಗಿದ್ದಾರೆ. ಮುಖ್ಯಮಂತ್ರಿ ಸ್ಥಾನ ತಪ್ಪಿಸಿದ್ದಾರೆ ಎಂದು ಅವರೇ ಹೇಳುತ್ತಾರೆ. ಮತ್ತೆ ಸಮ್ಮಿಶ್ರ ಸರ್ಕಾರ ಸಮರ್ಥಿಸಿಕೊಳ್ಳುತ್ತಾರೆ.ಅನ್ಯಾಯವಾಗದರೂ ಸಹಿಸಿಕೊಂಡಿದ್ದಾರೆ ಯಡಿಯೂರಪ್ಪ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಆಗ ಸುದ್ದಿಗಾರರು,  ಸಿದ್ದರಾಮಯ್ಯ ಅವರ ಬಗ್ಗೆ ಮೃದು ಧೋರಣೆ ತಾಳುತ್ತಿರುವ ಕೇಳಿದ ಪ್ರಶ್ನೆಗೆ ಕೆಲವರ ಬಗ್ಗೆ ಒಳ್ಳೆಯ ಅಭಿಪ್ರಾಯ ಇಟ್ಟುಕೊಳ್ಳಬೇಕಲ್ಲವೇ ಎಂದು ಸೂಕ್ಷ್ಮವಾಗಿ ನುಡಿದರು.

ಪ್ರಧಾನಿ ಚೋರ್‌ ಅಲ್ಲ, ಕಾವಲುಗಾರ
ಕಾಂಗ್ರೆಸ್‌ನವರು ಪ್ರಧಾನಿ ನರೇಂದ್ರ ಮೋದಿಯವರನ್ನು ಚೋರ್‌ ಎಂದು ಅವಮಾನ ಮಾಡಿದ್ದಾರೆ. ಅಗಸ್ಟಾ ವೆಸ್ಟ್‌ ಲ್ಯಾಂಡ್‌ ಹೆಲಿಕ್ಯಾಪ್ಟರ್‌ ಖರೀದಿ ಹಗರಣದಲ್ಲಿ ಕ್ರಿಶ್ಚಿಯನ್‌ ಮೈಕೆಲ್‌ ಜೇಮ್ಸ್‌, ಸೋನಿಯಾಗಾಂಧಿ ಹೆಸರು ಹೇಳಿದ್ದಾರೆ. ಇದರ ಫ‌ಲವನ್ನು ರಾಹುಲ್‌ ಗಾಂಧಿ ಪಡೆದುಕೊಂಡಿದ್ದಾರೆ. ಈ ಪ್ರಕರಣದಿಂದ ಕಾಂಗ್ರೆಸ್‌ನವರ ಬಣ್ಣ ಬಯಲಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವ ಯಾವುದೇ ನೈತಿಕತೆ ಇಲ್ಲ ಎಂದು ಹೇಳಿದರು.

ಭಾರತ ಚೌಕಿದಾರ ದಕ್ಷ ಆಡಳಿತಗಾರನಾಗಿದ್ದು, ಕಳ್ಳರನ್ನು ಪರಿಣಾಮಕಾರಿಯಾಗಿ ಹಿಡಿಯಬಲ್ಲರು ಎನ್ನುವುದು ಸಾಬೀತಾಗಿದೆ. ಈಗ ನಿಜವಾದ ಕಳ್ಳರು ಯಾರು ಎಂದು ಗೊತ್ತಾಗಿದೆ. ಹಿಂದಿಯ ನಾಣ್ಣುಡಿಯಂತೆ ಚೋರ್‌ ಮಚಾಯೆ ಶೋರ್‌ ಎಂದು ಕೂಗುತ್ತಿದ್ದವರೇ ನಿಜವಾದ ಚೋರರು, ಕಾಂಗ್ರೆಸ್‌ ನಾಯಕರು ತಮ್ಮ ವಿರುದ್ಧದ ನ್ಯಾಯಾಲಯದ ವಿಚಾರಣೆ ಪೂರ್ಣಗೊಂಡು ತೀರ್ಪು ಹೊರಬರುವವರೆಗೂ ಮೌನವಹಿಸಬೇಕು. ಮೊಂಡು ವಾದದ ಮೂಲಕ ದೇಶದ ಜನರ ದಾರಿ ತಪ್ಪಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next