Advertisement

ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ

03:20 PM Aug 16, 2022 | Team Udayavani |

ಬೆಳಗಾವಿ: ಸ್ವಾತಂತ್ರ ಭಾರತ ಉದಯದ 75ನೇ ವರ್ಷದ ಸಂಭ್ರಮ ಆಚರಣೆಯ ಸಂದರ್ಭದಲ್ಲಿ ಈ ಅಮೃತಗಳಿಗೆಯನ್ನು ನಾಡಿಗೆ ಸಮರ್ಪಣೆ ಮಾಡೋಣ. ನಾಡಿನಲ್ಲಿ ಮಳೆಯಾಗುತ್ತಿದೆ, ನಮ್ಮ ಜಲಾಶಯಗಳೆಲ್ಲ ತುಂಬಿ ನಳನಳಿಸುತ್ತಿವೆ. ಭೂದೇವಿಯ ಒಡಲು ಹಸಿರಿನಿಂದ ಕಂಗೊಳಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.

Advertisement

ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ 76ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದ ಅವರು, ನಮ್ಮ ಸಾಲು ಸಾಲು ಪಶ್ಚಿಮ ಘಟ್ಟಗಳು ಹಸಿರಿನ ತೋರಣದಿಂದ ಅಲಂಕೃತಗೊಂಡಿವೆ. ಜಲಾಶಯ ಭರ್ತಿಯಾಗಿ ನಮ್ಮ ನಾಡಿನಲ್ಲಿ ಸಮೃದ್ಧಿಯ ಅಮೃತ ಘಳಿಗೆಯ ಆಗಮವನ್ನು ಸಾರುತ್ತಿದೆ. ಅದೇ ರೀತಿ ಪ್ರಧಾನಮಂತ್ರಿ ನರೇದ್ರ ಮೋದಿ ಅವರು ಹರ್‌ ಘರ್‌ ತಿರಂಗಾ ಕಾರ್ಯಕ್ರಮ ಆಯೋಜಿಸಲು ನೀಡಿದ ಕರೆ ಪ್ರತಿಯೊಬ್ಬ ಭಾರತಿಯ ನಾಗರಿಕನ ಮನ ಮುಟ್ಟುತ್ತಿದೆ. ಸ್ವಾತಂತ್ರ್ಯದ ಜಾಗೃತಿ ಮೂಡಿಸಿದೆ ಎಂದರು.

ಹರ್‌ ಘರ್‌ ತಿರಂಗಾ ಅಭಿಯಾನವನ್ನು ಬೆಳಗಾವಿ ಜಿಲ್ಲೆಯಲ್ಲಿಯೂ ಯಶಸ್ವಿಯಾಗಿ ನಡೆಸಲಾಗಿದ್ದು, ನಾಗರಿಕರು ಹಾಗೂ ಸಂಘ-ಸಂಸ್ಥೆಗಳ ನೆರವಿನಿಂದ ಎಲ್ಲೆಡೆ ಮನೆ ಮನೆಗಳ ಮೇಲೆ ಮಾತ್ರವಲ್ಲದೇ ಮನದಂಗಳದಲ್ಲಿ ಕೂಡ ತ್ರಿವರ್ಣ ಧ್ವಜ ರಾರಾಜಿಸಿದೆ ಎಂದರು.

ಮಹಾದಾಯಿ ಯೋಜನೆ: ಕರ್ನಾಟಕದ ಹೊಸ ನೀರಾವರಿ ಯೋಜನೆಗಳೆಲ್ಲ ನಮ್ಮ ರೈತರಿಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ದಾಪುಗಾಲನ್ನಿಡುತ್ತಿದೆ. ಮಹಾದಾಯಿ, ಕೃಷ್ಣ ಮೇಲ್ದಂಡೆ ಯೋಜನೆಯ 3ನೇ ಹಂತದ ಕಾಮಗಾರಿಗಳು ರೈತನ ಹೊಲಕ್ಕೆ ನೀರುಣಿಸುವ ಹೊಸ್ತಿಲಲ್ಲಿ ಬಂದು ನಿಂತಿವೆ. ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸುವ ಮಹದಾಯಿ ಯೋಜನೆ ಸಕಾರಗೊಳ್ಳುವ ಕಾಲ ಸನ್ನಿಹಿತವಾಗಿದೆ. ಪರಿಷ್ಕೃತಗೊಂಡ ಯೋಜನಾ ವರದಿಗಳು ಅನುಮೋದನೆ ಪಡೆಯುವ ಮಹತ್ತರ ಕಾಲಘಟ್ಟ ಸನಿಹವಾಗುತ್ತಿದೆ ಎಂದು ಸಚಿವರು ಹೇಳಿದರು.

ಜಿಲ್ಲೆಯಲ್ಲಿ ಪ್ರಸ್ತುತ ತುಬಚಿ-ಬಬಲೇಶ್ವರ, ಬಸವೇಶ್ವರ (ಕೆಂಪವಾಡ), ವೆಂಕಟೇಶ್ವರ, ಗೊಡಚಿನಮಲ್ಕಿ, ಚಚಡಿ, ಮುರಗೋಡ, ಶ್ರೀ ರಾಮೇಶ್ವರ, ವೀರಭದ್ರೇಶ್ವರ, ಸಾಲಾಪುರ ಹೀಗೆ ಒಟ್ಟು 9 ಏತ ನೀರಾವರಿ ಯೋಜನೆಗಳು ಪ್ರಗತಿಯಲ್ಲಿದ್ದು ಈ ಯೋಜನೆಗಳ ಕಾಮಗಾರಿ ಆರಂಭಗೊಂಡಾಗಿನಿಂದ ಇದುವರೆಗೆ 4,937 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ 9 ನೀರಾವರಿ ಯೋಜನೆಗಳಿಂದ ಜಿಲ್ಲೆಯ 6 ತಾಲೂಕುಗಳ 80,162 ಹೆಕ್ಟೇರ್‌, ಬಾಗಲಕೋಟೆ ಜಿಲ್ಲೆಯ ಮೂರು ತಾಲೂಕುಗಳ 13,869 ಹೆಕ್ಟೇರ್‌ ಹಾಗೂ ವಿಜಯಪುರ ಜಿಲ್ಲೆಯ 44,375 ಹೆಕ್ಟೇರ್‌ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಬಹುದಾಗಿದೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.

Advertisement

ತುಬಚಿ ಬಬಲೇಶ್ವರ, ಶ್ರೀರಾಮೇಶ್ವರ, ಮುರಗೋಡ ಏತ ನೀರಾವರಿ ಯೋಜನೆಯಡಿ ಇದುವರೆಗೆ ಸುಮಾರು 52,336 ಹೆಕ್ಟೇರ್‌ ಕ್ಷೇತ್ರದ ತೂಬುಗಾಲುವೆ ಕ್ಷೇತ್ರವನ್ನು ಸೃಷ್ಟಿಸಲಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 5 ಕೆರೆ ತುಂಬುವ ಯೋಜನೆಗಳು ಪ್ರಗತಿಯಲ್ಲಿದ್ದು ಈ ಯೋಜನೆಗಳಿಂದ ಮಳೆಗಾಲದಲ್ಲಿ 125 ಕೆರೆಗಳನ್ನು ತುಂಬಿಸುವ ಗುರಿಯನ್ನು ಹೊಂದಲಾಗಿದ್ದು, ಈವರೆಗೆ ಇದಕ್ಕೆ 242.26 ಕೋಟಿ ರೂ ವೆಚ್ಚಮಾಡಲಾಗಿದೆ ಎಂದರು.

ಸಮಗ್ರ ಅಭಿವೃದ್ಧಿಗೆ ಬದ್ಧ: ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಸರ್ಕಾರ ಕಂಕಣಬದ್ದವಾಗಿದ್ದು, ಅನೇಕ ಮಹತ್ತರ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ನೀರಾವರಿ, ಆರೋಗ್ಯ ಕೃಷಿ, ಉದ್ಯಮ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹಲವು ಬಗೆಯ ನೂತನ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಹೇಳಿದರು.

2021 ರ ಜುಲೈ ಮತ್ತು ನವೆಂಬರ್‌ ತಿಂಗಳಿನಲ್ಲಿ ಉಂಟಾದ ಅತಿವೃಷ್ಟಿ ಹಾಗೂ ಪ್ರವಾಹದಿಂದ 1.50ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು 1,18,348 ರೈತರಿಗೆ 192. 10 ಕೋಟಿ ರೂ ಪರಿಹಾರವನ್ನು ತಂತ್ರಾಂಶದ ಮೂಲಕ ನೇರವಾಗಿ ರೈತರ ಬ್ಯಾಂಕ್‌ ಖಾತೆಗಳಿಗೆ ಜಮೆ ಮಾಡಲು ದೃಢೀಕರಣ ಮಾಡಲಾಗಿದೆ. ಈ ಅವಧಿಯಲ್ಲಿ ಹಾನಿಯಾದ ಎ ಮತ್ತು ಬಿ ವರ್ಗ-9376 ಮತ್ತು ಸಿ ವರ್ಗ- 5169 ಹೀಗೆ ಒಟ್ಟು 14545 ಮನೆಗಳನ್ನು ಆರ್‌.ಆರ್‌.ಎಚ್‌ .ಸಿ.ಎಲ್‌ ತಂತ್ರಾಂಶದಲ್ಲಿ ದಾಖಲಿಸಲಾಗಿದ್ದು ಈ ಮನೆಗಳಿಗೆ 115 ಕೋಟಿ ರೂಗಳನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಅದೇ ರೀತಿ 2019 ನೇ ಸಾಲಿನಲ್ಲಿ ಅತೀವೃಷ್ಟಿ ಹಾಗೂ ಪ್ರವಾಹದಿಂದಾಗಿ ಹಾನಿಯಾದ ಎ ಮತ್ತು ಬಿ 2 ವರ್ಗ-19240, ಬಿ1-581 ಹಾಗೂ ಸಿ ವರ್ಗ-27138 ಸೇರಿದಂತೆ ಒಟ್ಟು 46959 ಮನೆಗಳಿಗೆ 828.67 ಕೋಟಿ ರೂ ಗಳನ್ನು ಬಿಡುಗಡೆ ಮಾಡಲಾಗಿದೆ. 2020 ನೇ ಸಾಲಿನಲ್ಲಿ ಅತೀವೃಷ್ಟಿ ಹಾಗೂ ಪ್ರವಾಹದಿಂದಾಗಿ ಹಾನಿಯಾದ ಒಟ್ಟು 5372 ಮನೆಗಳಿಗೆ 70.44 ಕೋಟಿ ರೂಗಳನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಬಿಡುಗಡೆ ಮಾಡಲಾಗಿದೆ ಎಂದರು. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ 19.59 ಕೋಟಿ ರೂ ಅನುದಾನ ನಿಗದಿಯಾಗಿದ್ದು, ಈ ಮೂಲಕ ಜಿಲ್ಲೆಯ ರೈತರಿಗೆ ಅಂದಾಜು ಒಟ್ಟು 1477.24 ಹೆಕ್ಟೇರ್‌ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಘಟಕಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ. 2020-21 ನೇ ಸಾಲಿನಲ್ಲಿ ತೋಟಗಾರಿಕೆ ಬೆಳೆ ವಿಮೆ ಯೋಜನೆಗಳಡಿ ಜಿಲ್ಲೆಯ 3069 ರೈತರಿಗೆ ಒಟ್ಟು 16.16 ಕೋಟಿ ಮೊತ್ತದ ವಿಮೆ ಪರಿಹಾರ ವಿತರಿಸಲಾಗಿದೆ ಎಂದು ಹೇಳಿದರು.

ಬೆಳಗಾವಿ ನಗರದಲ್ಲಿ ನಿರ್ಮಿಸಲಾಗುತ್ತಿರುವ 140 ಕೋಟಿ ರೂಪಾಯಿ ವೆಚ್ಚದ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಬೆಳಗಾವಿಯಲ್ಲಿ 130 ಕೋಟಿ ರೂಪಾಯಿ ವೆಚ್ಚದಲ್ಲಿ ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆಯ ಪ್ರಾದೇಶಿಕ ಕೇಂದ್ರ ಸ್ಥಾಪನೆಗೆ ನಿರ್ಧರಿಸಲಾಗಿದ್ದು, ಈಗಾಗಲೇ ಜಾಗೆಯನ್ನು ಗುರುತಿಸಲಾಗಿದೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.

ಜಲ ಜೀವನ್‌ ಮಿಷನ್‌ ಯೋಜನೆಯಡಿಯ ಹಂತ-1 ರಲ್ಲಿ 89243 ಮನೆಗಳಿಗೆ, ಹಂತ-2ರಲ್ಲಿ 178096 ಮನೆಗಳಿಗೆ ಹಾಗೂ 79027 ಮನೆಗಳಿಗೆ ಕ್ರಿಯಾತ್ಮಕ ನಳ ಸಂಪರ್ಕ ಒದಗಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ 2022-23 ನೇ ಸಾಲಿನಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಇಲ್ಲಿಯವರಗೆ 7.64 ಲಕ್ಷ ಕುಟುಂಬಗಳು ನೋಂದಣಿಯಾಗಿದ್ದು ಜುಲೈ ಅಂತ್ಯದವರೆಗೆ 51.87 ಲಕ್ಷಗಳಷ್ಟು ಮಾನವ ದಿನಗಳನ್ನು ಸೃಜಿಸಿ ಶೇ 41.49 ರಷ್ಟು ಭೌತಿಕ ಪ್ರಗತಿ ಸಾಧಿಸಲಾಗಿದೆ ಎಂದರು.

ನಾನು ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ನಂತರ ಜಿಲ್ಲೆಯ ಅಭಿವೃದ್ಧಿ ಯೋಜನೆಗಳು, ಸವಾಲುಗಳನ್ನು ಮನಗಂಡಿದ್ದೇನೆ. ಜಿಲ್ಲೆಯ ಎಲ್ಲ ಸಚಿವರು, ಸಂಸದರು, ಶಾಸಕರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಹಾಗೂ ನಾಗರಿಕರ ಸಹಕಾರೊಂದಿಗೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಸದ ಮಂಗಲಾ ಅಂಗಡಿ, ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಾರುತಿ ಅಷ್ಟಗಿ, ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ ಬೆನಕೆ, ಜಿಲ್ಲಾದಿಕಾರಿ ನಿತೇಶ ಪಾಟೀಲ್‌, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅದಿಕಾರಿ ದರ್ಶನ ಹೆಚ್‌.ವಿ, ಜಿಲ್ಲಾ ಪೊಲೀಸ್‌ ಆಯುಕ್ತರಾದ ಡಾ. ಎಂ.ಬಿ. ಬೋರಲಿಂಗಯ್ಯ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಭಾಗವಹಿಸಿದ್ದರು.

ಇದಕ್ಕೂ ಮುನ್ನ ನಡೆದ ಕೆಎಸ್‌ಆರ್‌ಪಿ, ಸಶಸ್ತ್ರ ಪೊಲೀಸ್‌, ಮಹಿಳಾ ಪೊಲೀಸ್‌, ಅರಣ್ಯ ಇಲಾಖೆ, ಗೃಹರಕ್ಷಕ ದಳ, ಕರ್ನಾಟಕ ಅಗ್ನಿ ಶಾಮಕದಳ, ಜಿಲ್ಲಾ ಅಬಕಾರಿ ಪೊಲೀಸ್‌ ಪಡೆ, ನಾಗರಿಕ ಪೊಲೀಸ್‌ ಪಡೆ, ಪೊಲೀಸ್‌ ಬ್ಯಾಂಡ್‌ ತಂಡ ಹಾಗೂ ವಿವಿಧ ಶಾಲಾ ಮಕ್ಕಳ ಅಕರ್ಷಕ ಪಥಸಂಚಲನ ಎಲ್ಲರ ಗಮನಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next