ಧಾರವಾಡ: ಧಾರವಾಡ ರಂಗ ಸಮಾಜದ ಸದಸ್ಯರು ವಿವಿಯ ಸಿಂಡಿಕೇಟ್ ಸದಸ್ಯರು ಇದ್ದಂತೆ. ಆದರೆ ಈಗಿನ ಸರಕಾರ ರಂಗಾಯಣ ನಿರ್ದೇಶಕರ ಜೊತೆ ರಂಗ ಸಮಾಜದ ಸದಸ್ಯರನ್ನು ತೆಗೆದು ಹಾಕಿರುವುದು ಸರಿಯಲ್ಲ ಎಂದು ಹಿರಿಯ ಸಾಹಿತಿ ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ ಹೇಳಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಗದಿತ ಅವಧಿಗೆ ಆಯ್ಕೆಯಾಗಿ ಬಂದವರನ್ನು ತೆಗೆದು ಹಾಕುವ ಹಸ್ತಕ್ಷೇಪ ಒಳ್ಳೆಯ ಬೆಳವಣಿಗೆ ಅಲ್ಲ. ರಂಗಭೂಮಿ ಮತ್ತು ಕಲೆಯ ಮೇಲೆ ಇದು ದೊಡ್ಡ ಹೊಡೆತ. ಇದು ಅಪರಾಧ. ಕೂಡಲೇ ಈ ತಪ್ಪು ಸರಿಪಡಿಸಬೇಕು ಎಂದರು.
ಸಾಂಸ್ಕೃತಿಕ ನೀತಿ ಕುರಿತಂತೆ ಬರಗೂರ ರಾಮಚಂದ್ರಪ್ಪ ಅವರ ವರದಿ ಸರಕಾರ ಅನುಷ್ಠಾನ ಮಾಡಬೇಕು. ನಾವೂ ಭಿಕ್ಷೆ ಬೇಡುತ್ತಿಲ್ಲ. ಕಲಾವಿದರಿಗೆ ಮಾಡಿರುವ ಅವಮಾನವನ್ನು ಖಂಡಿಸುತ್ತೇವೆ ಎಂದರು.
ಧಾರವಾಡ ರಂಗಾಯಣದ ಮಾಜಿ ನಿರ್ದೇಶಕ ಪ್ರಮೋದ ಶಿಗ್ಗಾಂವ್ ಮಾತನಾಡಿ, ರಂಗಾಯಣದಲ್ಲಿ ನೇರ ಹಸ್ತಕ್ಷೇಪ ಮಾಡಲ್ಲ ಎಂಬ ಭಾವನೆ ಇರಲಿಲ್ಲ. ರಾಜ್ಯದ ಎಲ್ಲ ನಿರ್ದೇಶಕರು ಹಾಗೂ ರಂಗ ಸಮಾಜದವರನ್ನು ತೆಗೆದು ಹಾಕಿರುವ ನಿರ್ಧಾರ ಸರಿಯಲ್ಲ. ಯಾವುದೇ ಪಕ್ಷದ ವಿರುದ್ದ ಮಾತುಗಳಿಲ್ಲ. ರಂಗ ಸಮಾಜದವರನ್ನು ತೆಗೆದು ಹಾಕಿರುವ ಉದಾಹರಣೆಗೆ ಇಲ್ಲ. ಸಾಂಸ್ಕೃತಿಕ ಲೋಕದಲ್ಲಿ ಸರಕಾರದ ಈ ರೀತಿಯ ಹಸ್ತಕ್ಷೇಪ ಮಾಡಬಾರದು ಎಂದರು.
ರಂಗ ಸಮಾಜದ ಮಾಜಿ ಸದಸ್ಯೆ, ಹಿರಿಯ ಕಲಾವಿದೆ ವಿಶ್ವೇಶ್ವರಿ ಹಿರೇಮಠ ಮಾತನಾಡಿ, ಸರಕಾರದ ಈ ನಿರ್ಧಾರ ಖಂಡನೀಯ. ರಂಗಾಯಣ ಹಾಗೂ ರಂಗ ಸಮಾಜದವರನ್ನು ತೆಗೆದು ಹಾಕಿರುವ ಕ್ರಮ ಸರಿಯಲ್ಲ. ರಂಗ ಸಮಾಜದವರೇ ನಿರ್ದೇಶಕರ ನೇಮಕಕ್ಕೆ ನಿರ್ಧಾರ ತೆಗೆದುಕೊಳ್ಳುತ್ತದೆ. ಹೀಗಿರುವಾಗ ಸರಕಾರದ ನಿರ್ಧಾರ ಬೇಸರ ತರಿಸಿದೆ ಎಂದರು.