ಸುಳ್ಯ: ರಾಜ್ಯಾದ್ಯಂತ ತಾಲೂಕು ಸರಕಾರಿ ಆಸ್ಪತ್ರೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ “ಡಿ’ ಗ್ರೂಪ್ ಸಿಬ್ಬಂದಿಗೆ ಕಳೆದ ನಾಲ್ಕು ತಿಂಗಳಿನಿಂದ ವೇತನ ಲಭಿಸಿಲ್ಲ. ಇದರಿಂದ ಹೆಚ್ಚಿನ ಸಿಬ್ಬಂದಿ ಕೆಲಸಕ್ಕೆ ಗೈರು ಹಾಜರಾಗುತ್ತಿದ್ದು, ಆಸ್ಪತ್ರೆಯ ಸ್ವತ್ಛತೆ ಸೇರಿದಂತೆ ಹಲವು ಕೆಲಸಗಳ ಮೇಲೆ ಪರಿಣಾಮ ಬೀರಿದೆ.
ಮಳೆಗಾಲದ ಆರಂಭದ ಕಾಲ ಇದಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಇರುವ ಹೊತ್ತಲ್ಲೇ ಆಸ್ಪತ್ರೆಗಳು ಸಿಬ್ಬಂದಿ ಕೊರತೆ ಎದುರಿಸುತ್ತಿದ್ದು, ಇದರಿಂದ ದಿನನಿತ್ಯದ ಚಟುವಟಿಕೆಗಳಿಗೆ ಪರದಾಡುವಂತಾಗಿದೆ.
ಜೀವನ ನಿರ್ವಹಣೆ ಕಷ್ಟ: ವೇತನ ಸಿಗದ ಕಾರಣ ಸುಳ್ಯ ಆಸ್ಪತ್ರೆಯ 15 ಸಿಬ್ಬಂದಿ ಕೆಲಸಕ್ಕೆ ಹಾಜರಾಗುತ್ತಿಲ್ಲ. ಮೂವರು ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ನಾಲ್ವರು ಕೆಲಸವನ್ನೇ ತೊರೆದಿದ್ದಾರೆ. ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸದ ಖರ್ಚಿಗೆ ಬೇರೆ ದಾರಿ ಕಾಣದೆ ಪರ್ಯಾಯ ಉದ್ಯೋಗ ಹುಡುಕುವ ಸ್ಥಿತಿ ಉಂಟಾಗಿದೆ. ವೇತನ ಪಾವತಿಯಾಗದೆ ಕೆಲಸಕ್ಕೆ ಬನ್ನಿ ಎಂದು ಅವರ ಮೇಲೆ ಇಲಾಖೆಯಿಂದ ಒತ್ತಡವನ್ನೂ ಹೇರುವಂತಿಲ್ಲ.
ಜೂನ್‌ನಲ್ಲೇ ಕೊನೆ: ಆರೋಗ್ಯ ಇಲಾಖೆಯಡಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಗ್ರೂಪ್ “ಡಿ’ ಹುದ್ದೆಗಳ ಸೇವೆಯನ್ನು ತಕ್ಷಣದಿಂದ ಸ್ಥಗಿತಗೊಳಿಸುವಂತೆ ಏ.1ರಂದು ರಾಜ್ಯ ಸರಕಾರ ಸೂಚಿಸಿದ ಪರಿಣಾಮ, ಸಾವಿರಾರು ಸಿಬ್ಬಂದಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿತ್ತು. ನಂತರ, ಸರಕಾರ ಆದೇಶ ರದ್ದುಗೊಳಿಸಿ ಸೇವೆಯನ್ನು ಜೂನ್ ಅಂತ್ಯದ ತನಕ ವಿಸ್ತರಿಸಿತ್ತು. ಒಂದೆಡೆ, ವೇತನ ಸಿಗದಿರುವ ತೊಂದರೆ. ಇನ್ನೊಂದೆಡೆ, ಉದ್ಯೋಗ ಕಳೆದುಕೊಳ್ಳುವ ಭೀತಿ. ಈ ಹೊಯ್ದಾಟದಲ್ಲಿ ಈ ಸಿಬ್ಬಂದಿ ದಿನದೂಡುತ್ತಿದ್ದಾರೆ.
ಕೆಲವರಿಗೆ ವೇತನ ಸಿಕ್ಕಿಲ್ಲ. ರಾಜ್ಯ ವಲಯದಿಂದ ಬಿಡುಗಡೆ ಆಗಬೇಕಿದೆ. ಈ ಬಗ್ಗೆ ಪತ್ರ ಕಳುಹಿಸಲಾಗಿದೆ. ಅನುದಾನ ಬಿಡುಗಡೆಗೊಳ್ಳುವ ಸಾಧ್ಯತೆ ಇದ್ದು, ಶೀಘ್ರ ವೇತನ ಪಾವತಿ ಆಗುವ ನಿರೀಕ್ಷೆ ಇದೆ.
-ರಾಮಕೃಷ್ಣ ರಾವ್, ಡಿಎಚ್‌ಒ, ದ.ಕ.ಜಿಲ್ಲೆ
ಹೊರಗುತ್ತಿಗೆ ಸಿಬ್ಬಂದಿಗೆ ವೇತನ ಬಂದಿಲ್ಲದಿರುವುದು ನಿಜ. ವೇತನ ಪಾವತಿ ರಾಜ್ಯಮಟ್ಟದ ಪ್ರಕ್ರಿಯೆ. ಸರಕಾರದ ಖಜಾನೆಯಿಂದ ಸಿಬ್ಬಂದಿಯ ಬ್ಯಾಂಕ್ ಖಾತೆಗೆ ನೇರ ಪಾವತಿ ಆಗುತ್ತದೆ.
-ಡಾ| ಸುಬ್ರಹ್ಮಣ್ಯ, ತಾಲೂಕು ಆರೋಗ್ಯಧಿಕಾರಿ, ಸುಳ್ಯ