ಹುಳಿಯಾರು: ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಸೂಚನೆ ಮೇರೆಗೆ ಹುಳಿಯಾರಿನಲ್ಲಿ ನೂತನ ಸರ್ಕಾರಿ ಆಸ್ಪತ್ರೆ ನಿರ್ಮಿಸಲು
ಸೂಕ್ತ ಸ್ಥಳ ಪರಿಶೀಲನಾ ಕಾರ್ಯ ನಡೆಯಿತು.
ಆಸ್ಪತ್ರೆ ಮೇಲ್ದರ್ಜೆಗೇರಿಸಿ 100 ಹಾಸಿಗೆಯ ದೊಡ್ಡ ಆಸ್ಪತ್ರೆ ನಿರ್ಮಿಸಲು ಸಚಿವರು ಉದ್ದೇಶಿಸಿರುವುದರಿಂದ ಹಾಲಿ ಇರುವ ಆಸ್ಪತ್ರೆ ಜಾಗ ತೀರಾಕಿರಿದಾಗಿದೆ ಎನ್ನುವ ಕಾರಣದಿಂದ ಡಿಎಚ್‌ಒ ನಾಗೇಂದ್ರಪ್ಪ ಅವರ ನೇತೃತ್ವದಲ್ಲಿ ಯಳನಾಡು ರಸ್ತೆಯ ಪೆಟ್ರೋಲ್ ಬಂಕ್ ಹಿಂಭಾಗ, ಕೆಂಕೆರೆ ರಸ್ತೆಯ ಮುಕ್ತಿಧಾಮದ ಸಮೀಪ ಹಾಗೂ ಕಂಪನಹಳ್ಳಿ ಸಮೀಪದ ಸರ್ಕಾರಿ ಜಾಗವನ್ನು ವೀಕ್ಷಿಸಿ, ಲಭ್ಯವಿರುವ ಭೂಮಿಯ ವಿಸ್ತೀರ್ಣದ
ಮಾಹಿತಿಗಳನ್ನು ಸಂಗ್ರಹಿಸಿದರು.
ಮುಕ್ತಿಧಾಮದ ಬಳಿ ಕೇವಲ 2 ಎಕರೆ ಮಾತ್ರ ಸರ್ಕಾರಿ ಜಾಗವಿರುವ ಕಾರಣದಿಂದ ಈ ಸ್ಥಳವನ್ನು ಕೈ ಬಿಡಲಾಯಿತು. ಯಳನಾಡು ರಸ್ತೆಯ ಪೆಟ್ರೋಲ್ ಬಂಕ್ ಬಳಿ 15 ಎಕರೆಗೂ ಹೆಚ್ಚು ಸರ್ಕಾರಿ ಜಾಗವಿದೆಯಾದರೂ ಕೆಲವರು ಟಿಟಿ ಕಟ್ಟಿ ಸಾಗುವಳಿ ಮಾಡುತ್ತಿದ್ದಾರಲ್ಲದೆ ಇಲ್ಲಿಯೇ ಯಳನಾಡು ಪಂಚಾಯ್ತಿಯ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸುತ್ತಿರುವುದರಿಂದ ಆಸ್ಪತ್ರೆ ನಿರ್ಮಾಣಕ್ಕೆ ಸೂಕ್ತ ಸ್ಥಳವಲ್ಲ ಎನ್ನುವ ಅಭಿಪ್ರಾಯಕ್ಕೆ ಬರಲಾಯಿತು.
ಇದನ್ನೂ ಓದಿ:ಕಾಂಗ್ರೆಸ್ ಮುಖಂಡ ಜೈನುಲ್ಲಾ ಖಾನ್ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಬಂಧನ
ಕೊನೆಗೆ ಕಂಪನಹಳ್ಳಿ ಸಮೀಪದ ಗೌಡಗೆರೆ ಸರ್ವೆ ನಂಬರ್ 22ರಲ್ಲಿ ಪರಿಶೀಲನೆ ಮಾಡಲಾಯಿತು. ಇಲ್ಲಿ 35 ಎಕರೆ ಸರ್ಕಾರಿ ಜಾಗವಿದೆಯಲ್ಲದೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದೆ. ಈ ಭೂಮಿಯಲ್ಲಿ ಪ್ರಸ್ತುತ ಯಾರೊಬ್ಬರೂ ಸಾಗುವಳಿ ಮಾಡದೆ ಖಾಲಿಯಿದ್ದು, ಯಾವುದೇ ತಂಟೆತಕರಾರು ಇಲ್ಲದೆ ಆಸ್ಪತ್ರೆ ನಿರ್ಮಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಅಗ್ನಿಶಾಮಕ ಠಾಣೆ ಸೇರಿದಂತೆ ಇತರೆ ಸರ್ಕಾರಿ ಕಟ್ಟಡ ಗಳನ್ನು ನಿರ್ಮಿಸಲು ಸೂಕ್ತವಾಗಿದೆ ಎಂಬ ಅಭಿಪ್ರಾಯವನ್ನು ಅಧಿಕಾರಿಗಳ ತಂಡ ವ್ಯಕ್ತಪಡಿಸಿತು. ಡಿಎಚ್‌ಒ ನಾಗೇಂದ್ರಪ್ಪ ಮಾತನಾಡಿ, ಶೀಘ್ರದಲ್ಲೇ ತಹಶೀಲ್ದಾರ್ ಅವರೊಂದಿಗೆ ಮತ್ತೂಮ್ಮೆ ಗೌಡಗೆರೆ ಸರ್ವೆ ನಂಬರ್ 22 ಪರಿಶೀಲಿಸಿ ಇಲಾಖೆಯಅಭಿಪ್ರಾಯ ಸೇರಿದಂತೆ ಸಮಗ್ರ ವರದಿ ಪಡೆದು ಸಚಿವರ ಗಮನಕ್ಕೆ ತರಲಾಗುವುದು. ಅವರ ಸಲಹೆ ಸೂಚನೆಯಂತೆ ಆಸ್ಪತ್ರೆ ನಿರ್ಮಿಸುವ ನಿಟ್ಟಿನಲ್ಲಿ ಮುಂದಿನ ಹೆಜ್ಜೆ ಹಿಡಲಾಗುವುದು ಎಂದು ತಿಳಿಸಿದರು. ಟಿಎಚ್‌ಒ ನವೀನ್, ತಾಪಂ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್, ಪಪಂ ಸದಸ್ಯ ಹೇಮಂತ್, ಕೆಎಂಎಲ್‌ಕಿರಣ್, ಮುಖಂಡ ಜಯಣ್ಣ, ಬಳೆದಾಸಪ್ಪ, ಅಶೋಕ್‌ಬಾಬು, ಪಾತ್ರೆ ಪರಮೇಶ್ ಮತ್ತಿತರರು ಇದ್ದರು.
ಹುಳಿಯಾರಿಗೆ ಸಚಿವರ
ಬಂಪರ್ ಕೊಡುಗೆ
ಹುಳಿಯಾರಿನ ಜನ ಹಾಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವಂತೆ ಎರಡೂ ದಶಕಗಳಿಂದ ಕೇಳಿ ಕೊಳ್ಳುತ್ತಿದ್ದರು. ಮಾಜಿ ಸಚಿವ ಟಿ.ಬಿ.ಜಯಚಂದ್ರ ಸೇರಿದಂತೆ ಅಂದಿನ ಜನಪ್ರತಿನಿಧಿಗಳು ಈಗ ಮೇಲ್ದರ್ಜೆ
ಗೇರಿಸುತ್ತೇವೆ, ಆಗ ಮೇಲ್ದರ್ಜೆಗೇರಿಸುತ್ತೇವೆ ಎಂದು ದಿನದೂಡಿದರೆ ವಿನಃ ಮೇಲ್ದರ್ಜೆಗೇರಿಸಲಿಲ್ಲ. ಆದರೆ, ಸಚಿವ ಜೆ.ಸಿ.ಮಾಧುಸ್ವಾಮಿ
ಅವರು ಹುಳಿಯಾರಿನವರ ಪಾಲಿಗೆ ಬಂಪರ್ ಕೊಡುಗೆ ಎನ್ನುವಂತೆ ಸಮುದಾಯ ಆರೋಗ್ಯ ಕೇಂದ್ರಕ್ಕಿಂತಲೂ ದೊಡ್ಡದಾದ100 ಹಾಸಿಗೆಯ ಆಸ್ಪತ್ರೆ ನಿರ್ಮಿಸಲು ಮುಂದಾಗಿದ್ದಾರೆ.
ಸಮುದಾಯ ಆರೋಗ್ಯ ಕೇಂದ್ರ ವಾದರೆ ಹೆರಿಗೆ ತಜ್ಞರು, ಮಕ್ಕಳ ವೈದ್ಯರು ಸೇರಿದಂತೆ 3 ಮಂದಿ ವೈದ್ಯರಿದ್ದು 30 ಹಾಸಿಗೆಯ ಸೌಲಭ್ಯ ವಿರುತ್ತದೆ. 100 ಹಾಸಿಗೆಯ ಆಸ್ಪತ್ರೆಯಾದರೆ ಮೂಳೆ, ಚರ್ಮ, ಇಎನ್‌ಟಿ,ಕಣ್ಣು ಸೇರಿದಂತೆ 11 ಮಂದಿ ತಜ್ಞ ವೈದ್ಯರು ಸೇರಿದಂತೆ ಅಗತ್ಯ ಸಿಬ್ಬಂದಿ, ಔಷಧ, ಲ್ಯಾಬ್ ಸೌಕರ್ಯ ಸಿಗಲಿದೆ.
-ನಾಗೇಂದ್ರಪ್ಪ, ಡಿಎಚ್‌ಒ