ಕುದೂರು: ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ಕಟ್ಟಡ ಕಾಮಗಾರಿ ಕಳಪೆಯಿಂದ ಕೂಡಿದೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಅಸಡ್ಡೆಯೇ ಇದಕ್ಕೆ ಕಾರಣ ಎಂದು ಕುದೂರು ಗ್ರಾಮಸ್ಥರಿಂದ ಆರೋಪ ಕೇಳಿ ಬರುತ್ತಿದೆ.
ಕುದೂರು ಗ್ರಾಮದ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ, ಸಮುದಾಯ ಆರೋಗ್ಯ ಕೇಂದ್ರವನ್ನು ಮಂಜೂರು ಮಾಡಲಾಗಿದೆ. ಆರೋಗ್ಯ ಕೇಂದ್ರದಲ್ಲಿ 30 ಹಾಸಿಗೆಗಳ ಕೊಠಡಿ, ಶಸ್ತ್ರ ಚಿಕಿತ್ಸಾ ಕೊಠಡಿ, ಶವಗಾರ ಎಲ್ಲವೂ ಸುಸಜ್ಜಿತವಾಗಿರಬೇಕು ಎಂದು ಸರ್ಕಾರ 2 ಕೋಟಿ ರೂ. ಹಣ ಬಿಡುಗಡೆ ಮಾಡಿದೆ. ಆದರೆ, ಕಟ್ಟಡಕ್ಕೆ ಬಳಸುತ್ತಿರುವ ಕಂಬಿಗಳು ಕಳಪೆಯಾಗಿದೆ. ಅಲ್ಲದೆ, ನೂತನ ಆಸ್ಪತ್ರೆಯ ಕಟ್ಟಡದ ಕಾಮಗಾರಿಯೂ ಕಳಪೆಯಾಗಿದೆ.
ದೂರು ಸಲ್ಲಿಸಿದ್ದರೂ ಪ್ರಯೋಜನವಿಲ್ಲ: ಈ ಹಿಂದೆ ತಳಪಾಯ ಕಟ್ಟುವಾಗ ಕಳಪೆ ವಸ್ತುಗಳನ್ನು ಬಳಸಲಾಗುತ್ತಿದೆ ಎಂದು ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದರು. ಆದರೆ, ಆಸ್ಪತ್ರೆ ಕಾಮಗಾರಿ ಮಾಡುವವರು ರಾಜಕೀಯವಾಗಿ ಪ್ರಭಾವಿ ವ್ಯಕ್ತಿಯಗಿರುವುದರಿಂದ ಗ್ರಾಮಸ್ಥರ ಮಾತುಗಳನ್ನು ಗಣನೆಗೆ ತೆಗೆದುಕೊಳ್ಳದೇ ಕಾಮಗಾರಿ ಮುಂದುವರಿ ಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರಸ್ತುತ ಆಸ್ಪತ್ರೆಯ ಕಟ್ಟಡ ಮೋಲ್ಡ್, ಪ್ಲಾಸ್ಟಿಂಗ್ ಆಗಿ ಟೈಲ್ಸ್ ಮತ್ತು ಬಣ್ಣ ಬಳಿಯುವ ಕಾಮಗಾರಿವರೆಗೆ ಬಂದು ನಿಂತಿದೆ.
ಮಳೆ ಬಂದರೆ ನೂತನ ಕಟ್ಟಡದಲ್ಲಿ ಸೋರಿಕೆ: ಸರ್ಕಾರಿ ಆಸ್ಪತ್ರೆಯ ಕಟ್ಟಡ ಶೇ.80ರಷ್ಟು ಕೆಲಸ ಮುಗಿದು ಬಣ್ಣ ಬಳಿಯುವ ಹಂತಕ್ಕೆ ತಲುಪಿದೆ. ಆಸ್ಪತ್ರೆಯ ಕೊಠಡಿಗಳು ಕಳಪೆಯಿಂದ ಈಗಾಗಲೇ ಸೋರಲಾರಂಭಿಸಿವೆ ಎಂದು ಗ್ರಾಮದ ಯುವಕರು ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ಜತೆ ಪ್ರತಿನಿಧಿಗಳು ಶಾಮೀಲಾಗಿದ್ದಾರೆಯೇ?: ಕಳಪೆ ಕಾಮಗಾರಿ ಎಂದು ವರ್ಷದ ಮುಂಚೆಯ ಸುದ್ದಿ ಪ್ರಕಟವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯರು ಶಾಸಕರಿಗೆ ಹಾಗೂ ಸಂಸದರಿಗೆ ಮನವಿ ಸಲ್ಲಿಸಿದ್ದರು. ಆದರೆ, ಇದುವರೆವಿಗೂ ಶಾಸಕ ಮಂಜುನಾಥ್ ಆಗಲಿ, ಸಂಸದ ಡಿ.ಕೆ.ಸುರೇಶ್ ಆಗಲಿ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿಯನ್ನು ಪರಿಶೀಲನೆ ಮಾಡಿಲ್ಲ. ಕಳಪೆ ಕಮಗಾರಿ ಮಾಡುವ ಗುತ್ತಿಗೆದಾರರನ್ನು ಗದರಿಕೊಳ್ಳುವ ಕೆಲಸವನ್ನು ಸಹ ಮಾಡಿಲ್ಲ. ಇನ್ನೂ ಹೆಸರಿಗಷ್ಟೇ ಇರುವಂತಿರುವ ಗ್ರಾಮ ಪಂಚಾಯ್ತಿ ಮತ್ತು ತಾಲೂಕು ಹಾಗೂ ಜಿಪಂ ಸದಸ್ಯರು ಕಳಪೆ ಕಾಮಗಾರಿಯನ್ನು ಖಂಡಿಸಿಲ್ಲ. ಇದೆಲ್ಲವನ್ನು ನೋಡಿದರೆ ಅಧಿಕಾರಿಗಳ ಜೊತೆಗೆ ಜನಪ್ರತಿನಿಧಿಗಳು ಶಾಮೀಲಾಗಿದ್ದಾರೆಯೇ ಎಂಬ ಅನುಮಾನ ಮೂಡಿಸಿದೆ.
ಆಗೊಮ್ಮೆ ಇಗೊಮ್ಮೆ ಬರುವ ಎಂಜಿನಿಯರ್ ಕಾಟಾಚಾರಕ್ಕೆ ಬಂದು ಹೋದಂತೆ ಕಾಣುತ್ತಿದೆ. ಸಾವಿರಾರು ವರ್ಷಗಳ ಕಾಲ ಗ್ರಾಮದ ಜನರಿಗೆ ಅನುಕೂಲ ಕಲ್ಪಿಸುವ ಆಸ್ಪತ್ರೆ ಗುಣಮಟ್ಟವಾಗಿರುವಂತೆ ನೋಡಿಕೊಳ್ಳುವುದು ಪ್ರತಿ ಗ್ರಾಮಸ್ಥರ ಕರ್ತವ್ಯವಾಗಿದೆ. ಈ ಬಗ್ಗೆ ಜನರು ಧಂಗೆ ಏಳುವ ಮೊದಲು ಸರಿಯಾದ ಕಾಮಗಾರಿ ನೆಡೆಸಿ ಎಂದು ಎಚ್ಚರಿಕೆ ನೀಡಿದ್ದಾರೆ.
ಕಳಪೆ ಕಾಮಗಾರಿ ವಿಡಿಯೋ ವೈರಲ್: ಕುದೂರು ಆಸ್ಪತ್ರೆಯ ಕಳಪೆ ಕಾಮಗಾರಿ ಕೇವಲ ಜನರ ಬಾಯಲ್ಲಿ ಹರಿದಾಡುತ್ತಿಲ್ಲ. ಬದಲಾಗಿ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿದೆ. ವಾಟ್ಸಾಪ್ ಹಾಗೂ ಫೇಸ್‌ಬುಕ್‌ನಲ್ಲಿ ಯುವಕರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ಅನೇಕರು ಆಸ್ಪತ್ರೆ ಕಳಪೆ ಕಾಮಗಾರಿಯನ್ನು ಕುರಿತು ತೀವ್ರ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಅದಷ್ಟು ಬೇಗ ಗುಣಮಟ್ಟವನ್ನು ಉತ್ತಮ ಪಡಿಸಿ, ಗುಣಮಟ್ಟದ ಕಾಮಗಾರಿಯನ್ನು ನಡೆಸುವಂತೆ ಆಗ್ರಹಿಸಿದ್ದಾರೆ. ಅಲ್ಲದೆ, ಅಧಿಕಾರಿಗಳು ಮತ್ತು ಎಂಜಿನಿಯರುಗಳ ಕಾರ್ಯವೈಖರಿ ಬಗ್ಗೆ ಪ್ರಶ್ನಿಸಿದ್ದಾರೆ.
● ಕೆ.ಎಸ್.ಮಂಜುನಾಥ್