Advertisement

ಲಿಫ್ಟರ್‌ ವಿಶ್ವನಾಥ್‌ಗೆ ಸರಕಾರದ ಗೌರವ

10:59 PM Oct 08, 2019 | Team Udayavani |

ಕುಂದಾಪುರ: ಕೆನಡದಲ್ಲಿ ನಡೆದ ಕಾಮನ್‌ವೆಲ್ತ್‌ ಪವರ್‌ ಲಿಫ್ಟಿಂಗ್‌ನಲ್ಲಿ ಹೊಸ ದಾಖಲೆ ಜತೆ ತಲಾ 2 ಚಿನ್ನ, ಬೆಳ್ಳಿ ಪದಕಗಳ ಸಾಧನೆಯೊಂದಿಗೆ ರಾಜ್ಯಕ್ಕೆ ಕೀರ್ತಿ ತಂದಿತ್ತ ಕುಂದಾಪುರದ ದೇವಲ್ಕುಂದ ಗ್ರಾಮದ ವಿಶ್ವನಾಥ ಭಾಸ್ಕರ ಗಾಣಿಗ ಬಾಳಿಕೆರೆ ಅವರಿಗೆ ರಾಜ್ಯ ಸರಕಾರದಿಂದ ನಗದು ಪುರಸ್ಕಾರ, ಉದ್ಯೋಗ, ಮಾತ್ರವಲ್ಲದೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡಲು ಪ್ರಯತ್ನಿಸುವುದಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.

Advertisement

ಮಂಗಳವಾರ ವಿಶ್ವನಾಥ ಗಾಣಿಗರನ್ನು ಅವರ ಬಾಳಿಕೆರೆಯ ನಿವಾಸದಲ್ಲಿ ರಾಜ್ಯ ಸರಕಾರದ ಪರವಾಗಿ ಸಮ್ಮಾನಿಸಿ, ಗೌರವಿಸಿದ ಬಳಿಕ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು. ಪವರ್‌ ಲಿಫ್ಟಿಂಗ್‌ನಲ್ಲಿ ಉನ್ನತ ಸಾಧನೆ ಮಾಡಿ, ರಾಜ್ಯ ಮಾತ್ರವಲ್ಲದೆ ದೇಶಕ್ಕೆ ಹೆಸರು ತಂದುಕೊಟ್ಟ ವಿಶ್ವನಾಥ್‌ ಬಡ ಕುಟುಂಬದಿಂದ ಬಂದಿದ್ದಾರೆ. ಅವರ ಸಾಧನೆಗೆ ಪ್ರತಿಯಾಗಿ ಸರಕಾರದಿಂದ ನಗದು ಪುರಸ್ಕಾರ, ಉದ್ಯೋಗದ ಜತೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡಲು ಪ್ರಯತ್ನಿಸುವೆ. ಇದಕ್ಕಾಗಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗೆ ತತ್‌ಕ್ಷಣ ಮುಖ್ಯಮಂತ್ರಿ ಯಡಿಯೂರಪ್ಪ, ಕ್ರೀಡಾ ಸಚಿವ ಈಶ್ವರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಾಗುವುದು ಎಂದರು.

ಕ್ರೀಡಾ ಸಾಧಕನನ್ನು ಜಿಲ್ಲಾಡಳಿತ ನಿರ್ಲಕ್ಷಿಸಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜಿಲ್ಲಾಡಳಿತ ಬೇರೆಯಲ್ಲ, ಸರಕಾರ ಬೇರೆಯಲ್ಲ. ಈಗ ಅವರನ್ನು ಸರಕಾರದ ಪ್ರತಿನಿಧಿಯಾಗಿ ಗೌರವಿಸಿದ್ದೇನೆ. ಸರಕಾರದಿಂದ ಎಲ್ಲ ರೀತಿಯ ಗೌರವ ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು.

ಒಲಿಂಪಿಕ್ಸ್‌ ಅಲ್ಲದ ಇತರ ಕ್ರೀಡೆಗಳಲ್ಲಿಯೂ ಮಿಂಚುವ ಕ್ರೀಡಾಪಟುಗಳಿಗೂ ಹಿಂದೆ ಇದ್ದಂತೆ ರಾಜ್ಯದಲ್ಲಿ ಪ್ರಾಶಸ್ತ ನೀಡಬೇಕು ಎಂದು ವಿಶ್ವನಾಥ್‌ ಗಾಣಿಗ ಅವರು ಸಚಿವರಿಗೆ ಮನವಿ ಮಾಡಿದರು. ಈ ಬಗ್ಗೆ ಸರಕಾರದ ಗಮನಕ್ಕೆ ತರಲಾಗುವುದು ಎಂದರು.

ಜಿ.ಪಂ. ಸದಸ್ಯೆ ಶೋಭಾ ಜಿ. ಪುತ್ರನ್‌, ತಾ.ಪಂ. ಸದಸ್ಯ ಕರಣ್‌ ಪೂಜಾರಿ, ಗುಲ್ವಾಡಿ ಗ್ರಾ.ಪಂ. ಸದಸ್ಯ ಸುದೇಶ್‌ ಶೆಟ್ಟಿ ಕರ್ಕಿ, ಗಾಣಿಗ ಸಮಾಜದ ಪ್ರಮುಖರಾದ ಕೊಗ್ಗ ಗಾಣಿಗ, ಗಣೇಶ್‌ ಗಾಣಿಗ, ರವಿ ಗಾಣಿಗ, ನೆಂಪುವಿನ ಶ್ರೀ ವಿನಾಯಕ ಯುವಕ ಸಂಘದ ಸಂತೋಷ, ಮಂಜುನಾಥ, ಜಗದೀಶ್‌ ನೆಂಪು ಹಾಗೂ ಬಾಳಿಕೆರೆ ಗ್ರಾಮಸ್ಥರು ಉಪಸ್ಥಿತರಿದ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next