Advertisement

ಉನ್ನತೀಕರಿಸಿದ ಶಾಲೆಗಳಿನ್ನು ಸರ್ಕಾರಿ ಪ್ರೌಢಶಾಲೆಗಳು!

03:45 AM Jun 25, 2017 | Team Udayavani |

ಹಾವೇರಿ: ರಾಜ್ಯದಲ್ಲಿರುವ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಪ್ರಸಕ್ತ ವರ್ಷದಿಂದ “ಸರ್ಕಾರಿ ಪ್ರೌಢಶಾಲೆ (ಆರ್‌.ಎಂ.ಎಸ್‌.ಎ.)’ ಎಂದು ನಾಮಕರಣ ಮಾಡಲಾಗಿದೆ.

Advertisement

ಶಿಕ್ಷಣ ಇಲಾಖೆ ಈ ಕುರಿತು ಜೂ.12ರಂದೇ ನಿರ್ಣಯ ಕೈಗೊಂಡಿದ್ದು, ಆದೇಶ ಈಗ ಶಾಲೆಗಳಿಗೆ ತಲುಪಿ, ಶಾಲೆಗಳ ಹೆಸರು ಬದಲಾವಣೆ ಕಾರ್ಯ ಶುರುವಾಗಿದೆ. ರಾಜ್ಯದಲ್ಲಿ 2014-15ರಿಂದ 2016-17ವರೆಗೆ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ 462 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಉನ್ನತೀಕರಿಸಲಾಗಿತ್ತು. ಹೀಗೆ ಉನ್ನತೀಕರಿಸಿದ ಬಳಿಕ ಅವುಗಳಿಗೆ “ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು’ ಎಂದು ಹೆಸರಿಸಲಾಗಿತ್ತು. ಈಗ ಇಂತಹ ಶಾಲೆಗಳಲ್ಲಿ ಪ್ರೌಢಶಿಕ್ಷಣ ನೀಡುತ್ತಿರುವುದರಿಂದ ಅವುಗಳ ಹೆಸರನ್ನು ಬದಲಾಯಿಸಲು ಇಲಾಖೆ ನಿರ್ಧರಿಸಿದೆ.

ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗಳ ಹೆಸರನ್ನು ಇಲಾಖೆ ಬದಲಾಯಿಸಿ ಇಂತಹ ಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ “ಸರ್ಕಾರಿ ಪ್ರೌಢಶಾಲೆ (ಆರ್‌.ಎಂ.ಎಸ್‌.ಎ. ಅಂದರೆ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ)’ ಎಂದು ಮರುನಾಮಕರಣ ಮಾಡಿ ಆದೇಶ ಹೊರಡಿಸಿದೆ.

ಬದಲಾವಣೆ ಏಕೆ?:
ಹಿರಿಯ ಪ್ರಾಥಮಿಕ ಶಾಲೆಗಳನ್ನು ಉನ್ನತೀಕರಿಸಿದ ಆರಂಭದ ವರ್ಷ ಅಂದರೆ 2014-15ರಲ್ಲಿ 8ನೇ ತರಗತಿ ಆರಂಭಿಸಲಾಗಿತ್ತು. ಮುಂದಿನ ವರ್ಷಗಳಲ್ಲಿ ಇಲ್ಲಿಯೇ 9 ಹಾಗೂ 10ನೇ ತರಗತಿಯನ್ನೂ ಮುಂದುವರಿಸಿರುವುದರಿಂದ ಉನ್ನತೀಕರಿಸಿದ ಶಾಲೆಗಳು ಈಗ ಪೂರ್ಣ ಪ್ರಮಾಣದ ಪ್ರೌಢಶಾಲೆಗಳಾಗಿ ಮಾರ್ಪಟ್ಟಿವೆ.

ಪ್ರೌಢ ಶಿಕ್ಷಣ ನೀಡುವ ಇಂತಹ ಶಾಲೆಗಳೂ “ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ’ ಎಂಬ ಹೆಸರಿನಿಂದಲೇ ಕರೆಸಿಕೊಳ್ಳುತ್ತಿದ್ದವು.  ಪ್ರೌಢ ಶಿಕ್ಷಣ ನೀಡುವ ಶಾಲೆಗಳನ್ನು ಪ್ರಾಥಮಿಕ ಶಾಲೆಗಳೆಂದು ಕರೆಯುವುದರಿಂದ ಆಗುವ ಆಭಾಸವನ್ನು ತಡೆಯಲು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಸಕ್ತ ವರ್ಷದಿಂದ ಇಂತಹ ಶಾಲೆಗಳನ್ನು ಸರ್ಕಾರಿ ಪ್ರೌಢಶಾಲೆಗಳೆಂದು ಹೆಸರಿಸಲು ಮುಂದಾಗಿದೆ.

Advertisement

ಫಲಕ ಬದಲಾಯಿಸಲು ಸೂಚನೆ:
ಈಗಾಗಲೇ ಇರುವ “ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ’ ಫಲಕವನ್ನು ತೆಗೆಯಿಸಿ ಹೊಸದಾಗಿ “ಸರ್ಕಾರಿ ಪ್ರೌಢಶಾಲೆ (ಆರ್‌ಎಂಎಸ್‌ಎ)’ ಎಂದು ಬರೆಸಲು ಇಲಾಖೆ ರಾಜ್ಯದ ಎಲ್ಲ ಶಾಲೆಗಳಿಗೆ ನಿರ್ದೇಶಿಸಿದೆ. ಶಾಲೆ ಹೆಸರಿನ ನಾಮಫಲಕದ ಜತೆಗೆ ಶಾಲೆಯ ಮೊಹರು ಹಾಗೂ ಆಡಳಿತಾತ್ಮಕ ವಿಷಯದಲ್ಲಿ ಈ ಶಾಲೆಗಳನ್ನು “ಸರ್ಕಾರಿ ಪ್ರೌಢಶಾಲೆ (ಆರ್‌ಎಂಎಸ್‌ಎ)’ ಎಂದು ಬದಲಾಯಿಸಿಕೊಳ್ಳಲು ಆದೇಶದಲ್ಲಿ ಸೂಚಿಸಲಾಗಿದೆ.
ಒಟ್ಟಾರೆ ರಾಜ್ಯದಲ್ಲಿರುವ 462 ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗಳು ಇನ್ನು ಮುಂದೆ “ಸರ್ಕಾರಿ ಪ್ರೌಢಶಾಲೆ (ಆರ್‌ಎಂಎಸ್‌ಎ)’ ಎಂದು ಕರೆಸಿಕೊಳ್ಳಲಿವೆ.

ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗಳ ಹೆಸರನ್ನು “ಸರ್ಕಾರಿ ಪ್ರೌಢಶಾಲೆ (ಆರ್‌ಎಂಎಸ್‌ಎ)’ ಎಂದು ಬದಲಾಯಿಸಿಕೊಳ್ಳಲು ಇಲಾಖೆಯಿಂದ ಆದೇಶ ಬಂದಿದ್ದು, ಎಲ್ಲ ಶಾಲೆಗಳಿಗೆ ಫಲಕ, ಮೊಹರು ಬದಲಾವಣೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಜತೆಗೆ ಆಡಳಿತಾತ್ಮಕ ವಿಷಯದಲ್ಲಿ “ಸರ್ಕಾರಿ ಪ್ರೌಢಶಾಲೆ (ಆರ್‌ಎಂಎಸ್‌ಎ)’ ಎಂದು ನಮೂದಿಸಲು ಸೂಚಿಸಲಾಗಿದೆ.
– ಶಿವನಗೌಡ ಪಾಟೀಲ, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ.

– ಎಚ್‌.ಕೆ. ನಟರಾಜ
 

Advertisement

Udayavani is now on Telegram. Click here to join our channel and stay updated with the latest news.

Next