Advertisement

ಹತ್ತೂರಿನ ಮಕ್ಕಳಿಗೆ ಅಕ್ಷರ ಕಲಿಸಿದ ಜ್ಞಾನ ದೇಗುಲಕ್ಕೆ 130ರ ಸಂಭ್ರಮ

12:08 PM Nov 08, 2019 | Sriram |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

ಕುಂದಾಪುರ: ತಲ್ಲೂರಿನ ಸರಕಾರಿ ಮಾದರಿ ಹಿ.ಪ್ರಾ. ಶಾಲೆಗೆ 130 ವರ್ಷಗಳ ಇತಿಹಾಸವಿದೆ. 1890ರಲ್ಲಿ ಆರಂಭವಾದ ಈ ಶಾಲೆಯಲ್ಲಿ ಈವರೆಗೆ ಅನೇಕ ಮಂದಿ ಮಹಾನ್‌ ಸಾಧಕರು ಜ್ಞಾನಾರ್ಜನೆ ಮಾಡಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ.

ತಲ್ಲೂರು, ಹೆಮ್ಮಾಡಿ, ಹೊಸ್ಕಳಿ, ಸಂತೋಷ್‌ ನಗರ, ದೇವಲ್ಕುಂದ, ಕಟ್‌ಬೆಲೂ¤ರು, ಕರ್ಕಿ, ಕೂಡ್ಲು – ಕನ್ಯಾನ, ರಾಜಾಡಿ, ಸಬ್ಲಾಡಿ ಹೀಗೆ ಹತ್ತಾರು ಊರುಗಳಿಗೆ ಆಗ ಸ್ವಾತಂತ್ರತ್ರ್ಯ ಪೂರ್ವದಲ್ಲಿ ಇದ್ದದು ಇದೊಂದೇ ಶಿಕ್ಷಣ ಸಂಸ್ಥೆ. ಈಗ ಹೆಮ್ಮಾಡಿ, ಕೂಡ್ಲು – ಕನ್ಯಾನ, ದೇವಲ್ಕುಂದ. ಕಟ್‌ಬೆಲೂ¤ರು, ಸಬ್ಲಾಡಿ ಸಹಿತ ಹಲವೆಡೆಗಳಲ್ಲಿ ಶಾಲೆಗಳಾಗಿವೆ.

ಓದಿದ ಮಹನೀಯರು
ಇಂಗ್ಲೆಂಡ್‌ನ‌ಲ್ಲಿ ವೈದ್ಯರಾಗಿರುವ ಡಾ| ಮೈಕಲ್‌ ಮೆನೇಜಸ್‌, ಊರಲ್ಲಿಯೇ ವೈದ್ಯರಾಗಿರುವ ಡಾ| ರಂಜಿತ್‌ ಕುಮಾರ್‌ ಹೆಗ್ಡೆ, ಖ್ಯಾತ ವಕೀಲ ಟಿ.ಬಿ. ಶೆಟ್ಟಿ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಅರುಣ್‌ ಕುಮಾರ್‌ ಶೆಟ್ಟಿ, ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡ ತಲ್ಲೂರು ಶಿವರಾಮ ಶೆಟ್ಟಿ, ತಾ.ಪಂ. ಮಾಜಿ ಸದಸ್ಯ ಟಿ.ಕೆ. ಕೋಟ್ಯಾನ್‌, ಹೀಗೆ ಅನೇಕ ಮಂದಿ ಇಲ್ಲಿ ಕಲಿತವರು ಪ್ರಸಿದ್ಧರಾಗಿದ್ದಾರೆ.

ಈ ಶಾಲೆ ಶತಮಾನೋತ್ಸವ ಪೂರೈಸಿರುವ ಬಗ್ಗೆ ಹೆಮ್ಮೆಯಿದೆ. ಊರಿನ ದಾನಿಗಳು, ಹಳೆ ವಿದ್ಯಾರ್ಥಿಗಳು, ಎಸ್‌ಡಿಎಂಸಿ, ಗ್ರಾ.ಪಂ. ಸಹಕಾರದಿಂದ ಗುಣಮಟ್ಟದ ಶಿಕ್ಷಣದಲ್ಲಿಯೂ ಮುಂಚೂಣಿಯಲ್ಲಿದೆ. 2010ರಲ್ಲಿ 140 ಇದ್ದ ಮಕ್ಕಳ ಸಂಖ್ಯೆ ಈಗ 210 ಕ್ಕೆ ತಲುಪಿದೆ. ಹಾಗಾಗಿ ಶಾಲೆಗೆ ಹೆಚ್ಚುವರಿ ಕಟ್ಟಡದ ಅಗತ್ಯವಿದೆ. ಹಳೆ ವಿದ್ಯಾರ್ಥಿಗಳ ಸಹಕಾರದೊಂದಿಗೆ 130ನೇ ವರ್ಷಾಚರಣೆ ಆಚರಿಸುವ ಯೋಜನೆಯಿದೆ.
-ಶಂಕರ್‌, ಮುಖ್ಯೋಪಾಧ್ಯಾಯರು

Advertisement

ಶತಮಾನೋತ್ಸವ ಸಮಿತಿ ಆಚರಣೆ ಸಮಿತಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದೆ. ಈಗ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷನಾಗಿದ್ದೇನೆ. ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಶಾಲೆಯಿದು. ಈಗಲೂ ಅದೇ ಗುಣ ಮಟ್ಟವನ್ನು ಕಾಪಾಡಿಕೊಂಡಿದೆ. ಈ ಶಾಲೆಯ ವಿದ್ಯಾರ್ಥಿ ಎಂದು ಹೇಳಿಕೊಳ್ಳಲು ಹೆಮ್ಮೆ ಅನ್ನಿಸುತ್ತದೆ.
-ಟಿ.ಬಿ. ಶೆಟ್ಟಿ, ಹಿರಿಯ ನ್ಯಾಯವಾದಿ
(ಹಳೆ ವಿದ್ಯಾರ್ಥಿ)

1890ರಲ್ಲಿ ಆರಂಭ
1890ರಲ್ಲಿ ಆರಂಭವಾದ ಈ ಶಾಲೆ ಈಗ 129 ವಸಂತಗಳನ್ನು ಪೂರೈಸಿ, 130ನೇ ವರ್ಷಾಚರಣೆ ಸಂಭ್ರಮದಲ್ಲಿದೆ. ಶಾಂತಮೂರ್ತಿ ಅವರು ಇಲ್ಲಿನ ಮೊದಲ ಮುಖ್ಯೋಪಾಧ್ಯಾಯರು. ಆಗ ಉಪ್ಪಿನಕುದ್ರುವಿನಲ್ಲಿ ಹೊರತುಪಡಿಸಿದರೆ, ಆಸುಪಾಸಿನಲ್ಲಿ ಇದ್ದುದು ಇದೊಂದೇ ಶಾಲೆ. ಹಾಗಾಗಿ ದೂರ-ದೂರದ ಊರುಗಳಿಂದ ಇಲ್ಲಿಗೆ ವಿದ್ಯಾರ್ಜನೆಗೆ ಬರುತ್ತಿದ್ದರು.

210 ವಿದ್ಯಾರ್ಥಿಗಳು
ಸರಕಾರಿ ಶಾಲೆಗೆ ವಿದ್ಯಾರ್ಥಿಗಳ ಕೊರತೆ ಹೆಚ್ಚಿನ ಕಡೆಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದ್ದರೂ ಈ ಶಾಲೆಗೆ ಮಾತ್ರ ಅಂತಹ ಯಾವುದೇ ಸಮಸ್ಯೆ ಎದುರಾಗಿಲ್ಲ. ಪ್ರಸ್ತುತ ಇಲ್ಲಿ 210 ಮಂದಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಬಾರಿ 1ನೇ ತರಗತಿಗೆ ದಾಖಲಾದ ಮಕ್ಕಳ ಸಂಖ್ಯೆ 23. ಒಟ್ಟಾರೆ ಈ ವರ್ಷ 35 ಮಕ್ಕಳ ಹೊಸದಾಗಿ ದಾಖಲಾತಿಯಾಗಿದೆ. ಮುಖ್ಯ ಶಿಕ್ಷಕರು ಸೇರಿ, ಒಟ್ಟು 7 ಮಂದಿ ಬೋಧಕರಿದ್ದಾರೆ.
ಕಳೆದ 5 ವರ್ಷಗಳಲ್ಲಿ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಕೋಲಾಟದಲ್ಲಿ ಪ್ರತಿ ಬಾರಿ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆ ಈ ಶಾಲೆಯ ವಿದ್ಯಾರ್ಥಿಗಳದ್ದು.

-  ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next