ಆಳಂದ: ತಾಲೂಕಿನ ನಿರಗುಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ನೂತನ ಕಟ್ಟಡ ನಿರ್ಮಾಣಕ್ಕೆ ಜಿಪಂ ಅನುದಾನದ ಅಡಿಯಲ್ಲಿ ಒಂದು ಕೋಟಿ ರೂ. ವೆಚ್ಚದ ಕಾಮಗಾರಿ ಆರಂಭಕ್ಕೆ ಎಸ್‌ಡಿಎಂಸಿ ಅಧ್ಯಕ್ಷ ಗುಂಡಪ್ಪ ಎಸ್. ಅಣೂರೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅಣೂರೆ ಅವರು, ಗ್ರಾಮದಲ್ಲಿ ಪ್ರೌಢಶಾಲೆ ಕಟ್ಟಡ ಸ್ಥಾಪಿಸಲು ಬಹುದಿನಗಳ ಬೇಡಿಕೆಯಾಗಿತ್ತು. ಗ್ರಾಮಸ್ಥರ ಈ ಬೇಡಿಕೆಗೆ ಶಾಸಕ ಸುಭಾಷ ಗುತ್ತೇದಾರ ಸ್ಪಂದಿಸಿ, ಜಿಪಂನಿಂದ ಅನುದಾನ ಒದಗಿಸಿದ ಹಿನ್ನೆಲೆಯಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಗ್ರಾಮಸ್ಥರೆಲ್ಲ ಸೇರಿಕೊಂಡು ಕಾಮಗಾರಿಯ ಗುಣಮಟ್ಟತೆಗೆ ಒತ್ತು ನೀಡಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಇಂದಿನ ಅಗ್ಯವಾಗಿದೆ. ಸರ್ಕಾರ ಶಿಕ್ಷಣಕ್ಕಾಗಿ ಸಾಕಷ್ಟು ಖರ್ಚು ಮಾಡುತ್ತಿದೆ. ಇದನ್ನು ಸದ್ಭಳಕೆ ಮಾಡಿಕೊಳ್ಳಲು ಗ್ರಾಮೀಣ ಜನರ ಆದ್ಯ ಕರ್ತವ್ಯವಾಗಿದೆ ಎಂದರು.
ಮುಖಂಡ ಮಂಜುನಾಥ ಮೂಲಗೆ ಮಾತನಾಡಿ, ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಕಾಮಗಾರಿಗೆ ವಿಳಂಬ ಆಗದಿರಲಿ ಎಂದು ಚಾಲನೆ ನೀಡಲಾಗಿದೆ. ಸಂಬಂಧಿತ ಅಧಿಕಾರಿಗಳು ಗುಣಮಟ್ಟದ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಕೈಗೊಂಡು ಶಾಲೆಗೆ ಹಸ್ತಾಂತರಿಸಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ರಾಜು ದೇಶಮುಖ, ಚಂದ್ರಕಾಂತ ಅಣೂರೆ, ಚನ್ನಪ್ಪ ನಾಗೂರೆ, ಬಾಬುರಾವ್ ಬಿರಾದಾರ, ಪರಮೇಶ್ವರ ಹತ್ತಿಕಾಳೆ, ಪಂಡಿತ ಸೋನಕಂಟ್ಲೆ, ರೇವಣಸಿದ್ಧಪ್ಪ ಜಮಗಿ, ಮುಖ್ಯಶಿಕ್ಷಕ ಕೃಷ್ಣಾ ಪಾಟೀಲ, ಶಿಕ್ಷಕ ನೂಲಕರ್, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಶಂಕರ ಮಗಿ, ಪ್ರಮುಖ ಅಶೋಕ ಸಿಮಿಕೋರೆ, ಶ್ರೀಶೈಲ ಜಮಗೆ, ಎಸ್‌ಡಿಎಂಸಿ ಸದಸ್ಯ ಸೂರ್ಯಕಾಂತ ತಳವಾರ, ಹಣಮಂತ ಗಾಡೆಕರ್ ಮತ್ತಿತರರು ಇದ್ದರು.