Advertisement

ಆಲೂರು ಸರಕಾರಿ ಪ್ರೌಢಶಾಲೆಗೆ ರಾಷ್ಟ್ರಮಟ್ಟದ ಗರಿ

11:15 PM Jan 15, 2020 | Sriram |

ನೀತಿ ಆಯೋಗವು ದೇಶಾದ್ಯಂತ ಅತ್ಯುತ್ತಮವಾಗಿ ಅಟಲ್‌ ಟಿಂಕರಿಂಗ್‌ ಲ್ಯಾಬ್‌ ನಿರ್ವಹಣೆ ಮಾಡಿದ ಶಾಲೆಗಳ ಪಟ್ಟಿಯನ್ನು ಪ್ರತಿ ತಿಂಗಳು ಪ್ರಕಟಿಸುತ್ತದೆ. ನವಂಬರ್‌ ತಿಂಗಳ ನಿರ್ವಹಣೆ ಪಟ್ಟಿ ಈಗ ಬಿಡುಗಡೆಯಾಗಿದ್ದು ಆಲೂರು ಶಾಲೆ ಸ್ಥಾನ ಪಡೆದಿದೆ.

Advertisement

ಕುಂದಾಪುರ:
ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಅಟಲ್‌ ಟಿಂಕರಿಂಗ್‌ ಲ್ಯಾಬ್‌ನ ಅತ್ಯುತ್ತಮ ನಿರ್ವಹಣೆಗಾಗಿ ಆಲೂರು ಸರಕಾರಿ ಪ್ರೌಢಶಾಲೆ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ರಾಜ್ಯದ ಒಟ್ಟು 6 ಶಾಲೆಗಳು ಗುರುತಿಸಲ್ಪಟ್ಟಿದ್ದು ಅದರಲ್ಲಿ ಉಡುಪಿ ಜಿಲ್ಲೆಯ 2 ಶಾಲೆಗಳಿವೆ. ಈ ಪೈಕಿ ಆಲೂರು ಶಾಲೆಯೂ ಒಂದು.

ಶಾಲೆಯ ದಾಖಲೆ
2006ರಲ್ಲಿ ಆರಂಭವಾದ ಆಲೂರು ಪ್ರೌಢಶಾಲೆಯಲ್ಲಿ ಪ್ರಾಥಮಿಕ ವಿಭಾಗದಲ್ಲಿ 235, ಪ್ರೌಢ ವಿಭಾಗದಲ್ಲಿ 142 ವಿದ್ಯಾರ್ಥಿಗಳಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ 35 ವಿದ್ಯಾರ್ಥಿಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗಿದ್ದಾರೆ. 4 ವರ್ಷ ಎಸೆಸೆಲ್ಸಿಯಲ್ಲಿ ಶೇ.100 ಫ‌ಲಿತಾಂಶ ಪಡೆದ ಹೆಮ್ಮೆ ಇದೆ. ಉತ್ತಮ ಕ್ರೀಡಾಶಾಲೆ ಎಂದು ಬೈಂದೂರು ವಲಯದಲ್ಲಿ ಗುರುತಿಸಿಕೊಂಡಿದೆ. ಎಸೆಸೆಲ್ಸಿಯಲ್ಲಿ ಒಬ್ಬ ವಿದ್ಯಾರ್ಥಿನಿ ವಲಯಕ್ಕೆ ಪ್ರಥಮ ಸ್ಥಾನ ಗಳಿಸಿ ಸರಕಾರ ಕೊಡುವ ಲ್ಯಾಪ್‌ಟಾಪ್‌ಗೆ ಅರ್ಹತೆ ಪಡೆದಿದ್ದಾರೆ.

ದಾಖಲೆ
ಎನ್‌ಎಂಎಂಎಸ್‌ ಪರೀಕ್ಷೆಯಲ್ಲಿ ಮೂವರು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ವಲಯಮಟ್ಟದಲ್ಲಿ 2 ಬಾರಿ ಕ್ರೀಡೆಯಲ್ಲಿ ಸಮಗ್ರ ಪ್ರಶಸ್ತಿ ಪಡೆದಿದೆ. ಐಎಸ್‌ಎಸ್‌ಕ್ಯೂಎಸಿ ಪರೀಕ್ಷೆಯಲ್ಲಿ ಶಾಲೆಗೆ ಸಿ+ ಗ್ರೇಡ್‌ ದೊರೆತಿದೆ. ಹಿಂದಿ, ಸಮಾಜ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳಿದ್ದಾರೆ.

ಬೋಧಕ ತಂಡ
ಶಾಲೆಯ ಬೋಧಕ ವರ್ಗದ ಕುರಿತು ಎಲ್ಲೆಡೆ ಮೆಚ್ಚುಗೆಯ ಮಾತುಗಳಿದ್ದು ಸದಾನಂದ ಶೆಟ್ಟಿ, ರಾಜಶೇಖರ ತಾಳಿಕೋಟ ಅವರು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಉದಯ ಕುಮಾರ್‌ ಶೆಟ್ಟಿ ಅವರು ಆದರ್ಶ ಶಿಕ್ಷಕ ಪ್ರಶಸ್ತಿ, 2 ಬಾರಿ ಸಾಧಕ ಶಿಕ್ಷಕ ಪ್ರಶಸ್ತಿ ದೊರೆತಿದ್ದು ಈ ಬಾರಿ ವಿನಾಯಕ ಅವರಿಗೆ ಸಾಧಕ ಶಿಕ್ಷಕ ಪ್ರಶಸ್ತಿ ದೊರೆತಿದೆ. ಶಾಲೆಯಲ್ಲಿ ಹಿಂದಿ ಶಿಕ್ಷಕರ ಹುದ್ದೆ ಖಾಲಿಯಿದ್ದು ಅತಿಥಿ ಶಿಕ್ಷಕರು ಬೋಧಿಸುತ್ತಿದಾರೆ. ಉಳಿದಂತೆ ಎಲ್ಲ ಶಿಕ್ಷಕ ಹುದ್ದೆಗಳೂ ಭರ್ತಿಯಿದ್ದು ಉತ್ತಮ ಬೋಧನೆಯಿದೆ.

Advertisement

ಸ್ಮಾರ್ಟ್‌ ಕ್ಲಾಸ್‌
ಕರಿಹಲಗೆ ಬದಲು ಬಿಳಿಹಲಗೆ, ಸೀಮೆ ಸುಣ್ಣ ರಹಿತ ತರಗತಿ ಕೊಠಡಿ, ಪೆನ್‌ ಆಂಡ್‌ ವಿನ್‌ ಮಾದರಿಯ ವಿಶಿಷ್ಟ ಪ್ರಯೋಗವಿದೆ. ವರ್ಚುವಲ್‌ ಕ್ಲಾಸ್‌, ಸ್ಮಾರ್ಟ್‌ ಕ್ಲಾಸ್‌ ಮೂಲಕ ಎಲ್ಲ ತರಗತಿಗಳಲ್ಲೂ ಪ್ರಾಜೆಕ್ಟರ್‌ ಅಳವಡಿಸಲಾಗಿದೆ. ಬೆಳಗ್ಗೆ, ಮಧ್ಯಾಹ್ನ ಲೈವ್‌ ಆಗಿ ವಿಡಿಯೋ ತೋರಿಸಿ ಪಾಠ ಮಾಡಲಾಗುತ್ತದೆ. ಇದು ಕಲಿಕೆಗೆ ಆಕರ್ಷಣೆ ಉಂಟು ಮಾಡಿ ಆಸಕ್ತಿಯನ್ನು ಹೆಚ್ಚಿಸುತ್ತದೆ.

ನೀರಿನ ಸಮಸ್ಯೆ
ಶಾಲೆಗೆ ಪ್ರತ್ಯೇಕ ಬಾವಿಯಿದ್ದರೂ ಬೇಸಗೆಯಲ್ಲಿ ಕುಡಿಯುವ ನೀರಿನ ಕೊರತೆಯಾಗುತ್ತದೆ. ಪಂಚಾಯತ್‌ ನೀರು ನೀಡುತ್ತಿದ್ದರೂ ಕುಡಿಯಲು ಶುದ್ಧನೀರಿನ ಕೊರತೆ ಆಗುತ್ತದೆ. ದಾನಿ ಬೆಂಗಳೂರಿನ ಸಿಎ ಅಶೋಕ್‌ ಪೂಜಾರಿ ಅವರು ಶುದ್ಧ ಕುಡಿಯುವ ನೀರಿನ ಘಟಕ ನೀಡಿದ್ದಾರೆ.

2018 ಮೇ ತಿಂಗಳಲ್ಲಿ ಈ ಶಾಲೆಗೆ ಅಟಲ್‌ ಟಿಂಕರಿಂಗ್‌ ಲ್ಯಾಬ್‌ ಮಂಜೂರಾಗಿದ್ದು 12 ಲಕ್ಷ ರೂ. ಅನುದಾನ ದೊರೆತಿದೆ. ಇದರಲ್ಲಿ 10 ಲಕ್ಷ ರೂ.ಗಳಲ್ಲಿ ಪ್ರಯೋಗಾಲಯಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸಲಾಗಿದೆ. ವರ್ಷಕ್ಕೆ 2 ಲಕ್ಷದಂತೆ 5 ವರ್ಷ ಅನುದಾನ ನೀಡಲಾಗುತ್ತದೆ.

ಹೆಮ್ಮೆಯ ವಿಷಯ
ಗ್ರಾಮೀಣ ಪ್ರದೇಶದ ಶಾಲೆಗೆ ಅಟಲ್‌ ಲ್ಯಾಬ್‌ ಮಕ್ಕಳ ಕಲಿಕೆಗೆ ಹೆಚ್ಚು ಸಹಕಾರಿಯಾಗಿದೆ. ಗ್ರಾಮೀಣ ಮಟ್ಟದ ಶಾಲೆಯಂದಕ್ಕೆ ರಾಷ್ಟ್ರಮಟ್ಟದ ಗುರುತಿಸುವಿಕೆ ಹೆಮ್ಮೆಯ ವಿಚಾರ.
-ನಾಗೇಶ್‌, ಮುಖ್ಯೋಪಾಧ್ಯಾಯರು

ಅತ್ಯುತ್ತಮ ಶಾಲೆ
ಆಲೂರು ಶಾಲೆ ಶೈಕ್ಷಣಿಕವಾಗಿ ಉತ್ತಮವಾಗಿ ಗುರುತಿಸಿಕೊಂಡಿದ್ದು ಉತ್ತಮ ಬೋಧಕ
ವರ್ಗವನ್ನೂ ಹೊಂದಿದೆ. ಕಲಿಕೆಗೆ ಪೂರಕವಾದ ಒಳ್ಳೆಯ ವಾತಾವರಣ ಇದೆ.
-ಜ್ಯೋತಿ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ

ಏನಿದು ಎಟಿಎಲ್‌?
ಕೇಂದ್ರ ಸರಕಾರದ “ನೀತಿ ಆಯೋಗ’ ಪ್ರಾಯೋಜಿತ “ಅಟಲ್‌ ಇನ್ನೋವೇಷನ್‌ ಮಿಷನ್‌’ ಅಡಿಯಲ್ಲಿ 20 ಲಕ್ಷ ರೂ. ಅಂದಾಜು ವೆಚ್ಚದ “ಅಟಲ್‌ ಟಿಂಕರಿಂಗ್‌ ಲ್ಯಾಬ್‌’ನಲ್ಲಿ ವಿಜ್ಞಾನ, ತಂತ್ರಜ್ಞಾನ ಕುರಿತು ಆಸಕ್ತಿ ಬೆಳೆಸಿ ಯುವ ವಿಜ್ಞಾನಿಗಳ ತಯಾರಿಯೇ ಉದ್ದೇಶ. ಸುಸಜ್ಜಿತ ಪ್ರಯೋಗಾಲಯ ಸ್ಥಾಪನೆ, ನಿರ್ವಹಣೆಗೆ ಧನ ಸಹಾಯ ನೀಡಲಾಗುತ್ತದೆ. ವಿಜ್ಞಾನ ಪ್ರಯೋಗಾಲಯ, ಪ್ರಾಜೆಕ್ಟರ್‌ ಬಳಸಿ ಪಾಠ ಮಾಡುವುದು. ಶಬ್ದವೇಧಿ ಉಪಕರಣ, ಉಷ್ಣಾಂಶ ಏರಿಳಿತ ಪತ್ತೆ ಹಚ್ಚುವ ಉಪಕರಣ, ನೈಸರ್ಗಿಕ ಅನಿಲ ಸೋರಿಕೆ ಪತ್ತೆ ಹಚ್ಚುವ ಉಪಕರಣ, ಕಂಪನಗಳು, ಮೆಕಾನಿಕಲ್‌, ಎಲೆಕ್ಟ್ರಾನಿಕ್‌ ಉಪಕರಣಗಳು, 30 ಬಗೆಯ ಮಾದರಿಗಳು ಮತ್ತು 3ಡಿ ಪ್ರಿಂಟರ್‌, 3ಡಿ ಮುದ್ರಣಗಳಿರುವ ಚಿತ್ರಣ ಹಾಗೂ ಮಾದರಿ ರಚನೆ ಇದರಲ್ಲಿದೆ.

ಕುಂದಾಪುರ ವಲಯದಲ್ಲಿ ಕೋಟೇಶ್ವರ, ವಿಕೆಆರ್‌, ಬಿದ್ಕಲ್‌ಕಟ್ಟೆ, ಕುಂದಾಪುರ ಬೋರ್ಡ್‌ ಹೈಸ್ಕೂಲ್‌, ಬೈಂದೂರು ವಲಯದಲ್ಲಿ ಶಿರೂರು, ಬೈಂದೂರು, ಹಕ್ಲಾಡಿ, ಆಲೂರಿನಲ್ಲಿ ಅಟಲ್‌ ಟಿಂಕರಿಂಗ್‌ ಲ್ಯಾಬ್‌ ಇದೆ.

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next