ಕಾರವಾರ: ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೊಳಗಾದ ಅಗಸರುಹಾಗೂ ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ಅಸಂಘಟಿತ ವಲಯ ಕಾರ್ಮಿಕರಿಗೆ ಒಂದು ಬಾರಿ ಪರಿಹಾರಧನವಾಗಿ 5 ಸಾವಿರ ರೂ.ಗಳ ನೆರವು ನೀಡಲಾಗುತ್ತಿದ್ದು, ಇದರ ಸದುಪಯೋಗವನ್ನು ಅರ್ಹ ಫಲಾನುಭವಿಗಳು ಪಡೆದು ಕೊಳ್ಳುವಂತಾಗಬೇಕೆಂದು ಜಿಲ್ಲಾಧಿಕಾರಿ ಡಾ| ಕೆ. ಹರೀಶ ಕುಮಾರ ಹೇಳಿದರು.
ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಅಗಸ ಮತ್ತು ಕ್ಷೌರಿಕರ ಸಂಘಗಳ ಪ್ರತಿನಿಧಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಸಂಘಟಿತ ಕಾರ್ಮಿಕರಾದ ಅಗಸರು ಮತ್ತು ಕ್ಷೌರಿಕರಿಗೆ ಸಹಾಯಧನ ನೀಡಲು ಮುಂದಾಗಿದ್ದು, ಈ ಸಹಾಯಧನ ಪಡೆಯಲು ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ಜೂ. 30ರೊಳಗಾಗಿ ಅರ್ಜಿ ಸಲ್ಲಿಸಬೇಕು. 18ರಿಂದ 65ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದಾಗಿದ್ದು, ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ನೆರವು ದೊರೆಯಲಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ ಬಿ.ಆರ್. ಸಭೆಗೆ ಮಾಹಿತಿ ನೀಡಿ, ಯೋಜನೆಯು ಜಾತಿ ಆಧಾರಿತವಾಗಿರದೆ ವೃತ್ತಿ ಆಧಾರಿತವಾಗಿದ್ದು, ಕರ್ನಾಟಕದಲ್ಲಿ ಈ ವೃತ್ತಿಗಳಲ್ಲಿ ತೊಡಗಿರುವರು ಹೊರ ರಾಜ್ಯದ ಕಾರ್ಮಿಕರು, ಬಿಪಿಎಲ್ ಕಾರ್ಡ್ ಹೊಂದಿರುವವರು ಕೂಡ ಈ ಯೋಜನೆಗೆ ಅರ್ಹರಾಗಿರುತ್ತಾರೆ. ಆಧಾರ್ ಸಂಖ್ಯೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಹೊಂದಿರುವುದು ಕಡ್ಡಾಯವಾಗಿದೆ. ವೃತ್ತಿ ನಿರ್ವಹಿಸುತ್ತಿರುವ ಕುರಿತು ಜಿಲ್ಲಾ ಮಟ್ಟದಲ್ಲಿ ನಗರಸಭೆ, ತಾಲೂಕು ಮಟ್ಟದಲ್ಲಿ ಕಂದಾಯ ಇಲಾಖೆಯ ತಹಶೀಲ್ದಾರ್, ಉಪ ತಹಶೀಲ್ದಾರ್, ಕಂದಾಯ ನಿರೀಕ್ಷಕರಲ್ಲಿ, ಗ್ರಾಮ ಮಟ್ಟದಲ್ಲಿ ಗ್ರಾಂಪಂ ಅಭಿವೃದ್ಧಿ ಅಧಿಕಾರಿ ಕಾರ್ಯದರ್ಶಿಯವರಿಂದ ಪಡೆಯಬಹುದಾಗಿದೆ ಎಂದರು. ಅರ್ಜಿ ಸಲ್ಲಿಸಿದ ಪ್ರತಿ ಅರ್ಜಿದಾರರಿಗೆ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಅರ್ಜಿದಾರರ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಲಾಗುತ್ತಿದೆ. ನೋಂದಾಯಿತ ಅರ್ಜಿದಾರರು ವಿಶಿಷ್ಟ ಗುರುತಿನ ಸಂಖ್ಯೆ ಬಳಸಿ ಸಲ್ಲಿಸಿದ ಅರ್ಜಿಯ ಸ್ಥಿತಿಯ ಕುರಿತು ಮಾಹಿತಿ ಪಡೆದು ಮುಂದಿನ ಕ್ರಮಕ್ಕಾಗಿ ಕಳುಹಿಸಲಾಗುವುದು ಎಂದರು.
ಸಭೆಯಲ್ಲಿ ಪೌರಾಯುಕ್ತರಾದ ಪ್ರಿಯಾಂಗಾ ಎಂ., ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಎಸ್.ಪುರುಷೋತ್ತಮ ಸೇರಿದಂತೆ ಇತರರು ಇದ್ದರು.