ಮುದ್ದೇಬಿಹಾಳ (ವಿಜಯಪುರ ಜಿಲ್ಲೆ): ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆಗಳ ಬಗ್ಗೆ ಕಾಂಗ್ರೆಸ್ ಶಾಸಕರೇ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ, ರಾಜ್ಯ ಸರ್ಕಾರದ ವಿರುದ್ಧ ಮುದ್ದೇಬಿಹಾಳ ಕಾಂಗ್ರೆಸ್ ಶಾಸಕ ಸಿ.ಎಸ್.ನಾಡಗೌಡ ತಿರುಗಿಬಿದ್ದಿದ್ದಾರೆ.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ, “ಸರ್ಕಾರದ ಬಳಿ ದುಡ್ಡಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ನಿರೀಕ್ಷಿತ ಅನುದಾನ ನೀಡುತ್ತಿಲ್ಲ. ಪರಿಸ್ಥಿತಿ ಹೀಗೇ ಮುಂದುವರಿದರೆ ನಾನು ರಾಜಕೀಯ ತ್ಯಾಗ ಮಾಡುತ್ತೇನೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಮುದ್ದೇಬಿಹಾಳ ಮತಕ್ಷೇತ್ರದ ಅಭಿವೃದ್ಧಿ ಸೇರಿ ರಾಜ್ಯದ ಎಲ್ಲ ಹಿಂದುಳಿದ ಪ್ರದೇಶಗಳಿಗೆ ಸರ್ಕಾರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಸಿಗುತ್ತಿಲ್ಲ. ಸಮಾನವಾಗಿ, ಸಮತೋಲನ ಮಾಡಿ ಅಭಿವೃದ್ಧಿಗೆ ಮುಂದಾಗದಿದ್ದರೆ ನನಗೆ ರಾಜಕೀಯ ಮಾಡುವ ಇಚ್ಛೆ ಇಲ್ಲ. ರಾಜಕೀಯ ತ್ಯಾಗಕ್ಕೂ ನಾನು ಸಿದ್ಧನಾಗಿದ್ದೇನೆ. ರಾಜಕೀಯ ತ್ಯಾಗದ ಕುರಿತು ಬಿಚ್ಚು ಮನಸ್ಸಿನಿಂದ ಹೇಳುತ್ತಿದ್ದೇನೆ ಎಂದಿದ್ದಾರೆ.
“ಸರ್ಕಾರ ಸ್ಪಂದಿ ಸಬೇಕು ಅನ್ನೋದು ನನ್ನ ಅಭಿಲಾಷೆ. ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಹಮ್ಮಿಕೊಂಡ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು ಅನ್ನೋದು ನನ್ನ ಬೇಡಿಕೆ. ಒಂದು ಕ್ಷೇತ್ರಕ್ಕೆ ಅತಿ ಹೆಚ್ಚು ಅನುದಾನ ಕೊಟ್ಟು ಭಾರೀ ಕೆಲಸ ಮಾಡಿದ್ದಾರೆ ಎಂದು ಬಿಂಬಿಸುವುದು. ಬೇರೆಯವರಿಗೆ ಕೇಳಿದಷ್ಟು ಅನುದಾನ ನೀಡದೆ ಅವರ ಮತಕ್ಷೇತ್ರದ ಜನರು ಅಭಿವೃದ್ಧಿ ವಂಚಿತರಾಗಿದ್ದಾರೆ ಎನ್ನಿಸಿಕೊಳ್ಳುವ ರಾಜಕೀಯ ನನಗೆ ಬೇಡ’ ಎನ್ನುವ ಸಂದೇಶವನ್ನು ಸರ್ಕಾರಕ್ಕೆ ನೀಡುತ್ತಿದ್ದೇನೆ ಎಂದರು.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮ್ಜಾಛಛ ಇಬ್ಬರಿಗೂ ಆಪ್ತರಾಗಿದ್ದು, ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ನಾಡಗೌಡರ ಈ ಹೇಳಿಕೆ ಭಾರೀ ಸಂಚಲನ ಮೂಡಿಸಿದಂತಾಗಿದೆ.