Advertisement

ಸರ್ಕಾರದಿಂದ ರೈತರ ನಿರ್ಲಕ್ಷ್ಯ: ಆಕ್ರೋಶ

02:01 PM May 18, 2022 | Team Udayavani |

ಚಳ್ಳಕೆರೆ: ರೈತರಿಗೆ ಬೆಳೆನಷ್ಟ ಮತ್ತು ಬೆಳೆವಿಮೆ ಹಣ ಪಾವತಿ ಮಾಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಕಚೇರಿ ಮುಂದೆ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ನೇತೃತ್ವದಲ್ಲಿ ಅನಿರ್ದಿಷ್ಟಕಾಲ ಮುಷ್ಕರ ಹಮ್ಮಿಕೊಂಡಿದ್ದು ಕೃಷಿ ಇಲಾಖೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸ್ಥಳಕ್ಕೆ ಆಗಮಿಸಿ ಭರವಸೆ ನೀಡಿದ ನಂತರ ಮುಷ್ಕರ ವಾಪಸ್‌ ಪಡೆದರು.

Advertisement

ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ವರ್ಷದ 12 ತಿಂಗಳು ರೈತ ಜಮೀನಿನಲ್ಲೇ ಹಗಲಿರುಳಿ ಬೆವರು ಸುರಿಸಿ ದುಡಿಯುತ್ತಾನೆ. ಆದರೆ, ಕಷ್ಟಪಟ್ಟು ಬೆಳೆದ ಬೆಳೆಗೆ ಎಲ್ಲೂ ಮಾರುಕಟ್ಟೆ ವ್ಯವಸ್ಥೆ ಇಲ್ಲ. ನಾನಾ ಕಾರಣಗಳಿಂದಾಗಿ ಗುಣಮಟ್ಟದ ಬೆಳೆ ಬರುತ್ತಿಲ್ಲ. ಬೆಳೆದ ಅಲ್ಪ ಬೆಳೆಗೂ ಸೂಕ್ತ ಬೆಲೆ ಇಲ್ಲ. ರಾಜ್ಯ ಸರ್ಕಾರವೂ ಬೆಂಬಲ ಬೆಲೆ ನಿಗದಿ ಮಾಡದೆ ನಿರ್ಲಕ್ಷ್ಯ ವಹಿಸಿದೆ. ದಲ್ಲಾಳಿಗಳ ಕೈಗೆ ಸಿಕ್ಕಿ ರೈತರು ಪರಿತಪಿಸುತ್ತಿದ್ದಾರೆ. ಇದರ ಜೊತೆಯಲ್ಲಿ ಸರ್ಕಾರವೂ ಸಹ ಬೆಳೆ ನಷ್ಟ ಪರಿಹಾರ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ರೈತರು ಪಾವತಿಸಿದ ಬೆಳೆವಿಮೆ ಇದುವರೆಗೂ ರೈತನ ಖಾತೆಗೆ ಜಮಾವಾಗಿಲ್ಲ.

ಇದಕ್ಕೆ ಯಾರು ಹೊಣೆ?

ಸರ್ಕಾರ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಧರಣಿ ನಿರತ ಸ್ಥಳಕ್ಕೆ ಆಗಮಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್‌ಕುಮಾರ್‌ ಮಾತನಾಡಿ, ಕೇಂದ್ರ ಸರ್ಕಾರ ರೈತರ ಬೆಳೆ ನಷ್ಟ ಪರಿಹಾರವನ್ನು ದ್ವಿಗುಣಗೊಳಿಸಿ ಅವರವರ ಖಾತೆಗೆ ಜಮಾ ಮಾಡುತ್ತಿದೆ. ಇದುವರೆಗೂ ಜಿಲ್ಲೆಗೆ ಬೆಳೆನಷ್ಟ ಪರಿಹಾರ ರೂಪದಲ್ಲಿ ಸುಮಾರು 80 ಕೋಟಿ ರೂ. ಬಂದಿದ್ದು, ಅದರಲ್ಲಿ 32.50 ಕೋಟಿ ಹಣ ಚಳ್ಳಕೆರೆ ತಾಲೂಕಿನ ರೈತರ ಖಾತೆಗೆ ಜಮಾವಾಗಿದೆ. ಕೆಲವು ರೈತರ ಖಾತೆಯಲ್ಲಿ ಲೋಪದೋಷಗಳಿದ್ದು ಅವರಿಗೆ ಹಣ ಸಂದಾಯವಾಗಿಲ್ಲ. ತಾವು ತಮ್ಮ ಮಾಹಿತಿಯನ್ನು ಸರಿಯಾಗಿ ನೀಡಿದರೆ ನಿಮ್ಮ ಖಾತೆಗೆ ಹಣ ಜಮಾವಾಗಲಿದೆ ಎಂದು ಭರವಸೆ ನೀಡಿದರು.

ಬೆಳೆವಿಮೆ ಕುರಿತಂತೆ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಒಟ್ಟು ರೈತರಿಗೆ 85 ಕೋಟಿ ಬೆಳೆ ವಿಮೆ ಹಣ ಪಾವತಿಯಾಗದೆ ಬಾಕಿ ಉಳಿದಿದೆ. ಅದರಲ್ಲಿ ಚಳ್ಳಕೆರೆ ತಾಲೂಕಿನ 40 ಗ್ರಾಪಂ ವ್ಯಾಪ್ತಿಯಲ್ಲಿ 45 ಕೋಟಿ ಹಣ ಸಂದಾಯವಾಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ಖಾಸಗಿ ವಿಮಾ ಕಂಪನಿಯೊಂದಿಗೆ ಚರ್ಚೆ ನಡೆಸಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಹಣ ರೈತರ ಖಾತೆಗೆ ಜಮಾ ಆಗಲಿದೆ ಎಂದರು.

Advertisement

ರೈತರಿಂದ ಮನವಿ ಸ್ವೀಕರಿಸಿದ ತಹಶೀಲ್ದಾರ್‌-2 ಸಂಧ್ಯಾ ಮಾತನಾಡಿ, ರೈತರು ಹಲವಾರು ಬೇಡಿಕೆಗಳ ಬಗ್ಗೆ ಮುಷ್ಕರ ನಡೆಸಿದ್ದು ತಮಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮನವಿ ಮಾಡಿದ್ದೀರಿ. ತಮ್ಮ ಮನವಿಯನ್ನು ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಿಕೊಡುವ ಭರವಸೆ ನೀಡಿದರು.

ಉಪಕೃಷಿ ನಿರ್ದೇಶಕ ಶಿವಕುಮಾರ್‌, ಸಹಾಯಕ ಕೃಷಿ ನಿರ್ದೇಶಕ ಆರ್‌.ಅಶೋಕ್, ಹಿರಿಯ ತೋಟಗಾರಿಕೆ ನಿರ್ದೇಶಕ ವಿರೂಪಾಕ್ಷಪ್ಪ, ಖಾಸಗಿ ವಿಮಾ ಕಂಪನಿ ಪ್ರತಿನಿಧಿಗಳು ಉಪಸ್ಥಿತರಿದ್ದರು.

ದೊಡ್ಡ ಉಳ್ಳಾರ್ತಿ ಕರಿಯಣ್ಣ, ತಿಪ್ಪೇಸ್ವಾಮಿ, ಹಿರೇಹಳ್ಳಿ ಯರ್ರಿಸ್ವಾಮಿ, ಅಧ್ಯಕ್ಷ ಕೆ.ಸಿ. ಶ್ರೀಕಂಠಮೂರ್ತಿ, ಜಿ.ಒ. ಹನುಮಂತಪ್ಪ, ತಿಪ್ಪೇಸ್ವಾಮಿ, ಬಸವರಾಜು, ರಾಜಣ್ಣ, ಟಿ.ತಿಪ್ಪೇಸ್ವಾಮಿ, ಜಯಣ್ಣ, ರತ್ನಮ್ಮ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next