ಚಿತ್ತಾಪುರ: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷದ ಅಮೃತ ಮಹೋತ್ಸವದ ಸಂದರ್ಭದಲ್ಲಿ ರೈತರಿಗೆ ನ್ಯಾಯ ಕೊಡುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಹೇಳಿದರು.
ಪಟ್ಟಣದ ಬಸ್ ನಿಲ್ದಾಣ ಎದುರಿಗೆ ಕರ್ನಾಟಕ ಪ್ರಾಂತ ರೈತ ಸಂಘದ 4ನೇ ತಾಲೂಕು ಸಮ್ಮೇಳನದ ಪ್ರಯುಕ್ತ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಗಳು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಸಂಸತ್ ನಲ್ಲಿ ನಿಯಮಗಳನ್ನು ಗಾಳಿಗೆ ತೂರಿ ರೈತರ ಬದುಕಿಗೆ ಮಾರಕವಾಗಿರುವ ಕೃಷಿ ಕಾಯಿದೆಗಳನ್ನು ಅನುಷ್ಠಾನಗೊಳಿಸಿದೆ ಎಂದರು.
ತಾಲೂಕು ಅಧ್ಯಕ್ಷ ಸಾಯಬಣ್ಣ ಗುಡುಬಾ ಮಾತನಾಡಿ, ನರೇಗಾ ಯೋಜನೆಯಡಿ ಕೆಲಸ ನೀಡುತ್ತಿಲ್ಲ, ಹೋರಾಟ ನಡೆಸಿದಾಗೊಮ್ಮೆ ಕೆಲಸ ನೀಡುವ ನಾಟಕವಾಡುತ್ತಾರೆ. ಕೆಲಸ ಸಿಗದ್ದಕ್ಕೆ ಅನೇಕರು ಗುಳೆ ಹೋಗುವ ಸ್ಥಿತಿ ಉಂಟಾಗಿದೆ. ಬೆಳೆ ನಷ್ಟ ಪರಿಹಾರವನ್ನು ಸರ್ಕಾರ ಸರಿಯಾಗಿ ವಿತರಿಸಿಲ್ಲ. ಈ ಕುರಿತು ಕೂಲಿಕಾರರು ಮತ್ತು ರೈತರಲ್ಲಿ ಜಾಗೃತಿ ಮೂಡಬೇಕಿದೆ ಎಂದರು.
ಹೊಸ ಕೋರ್ಟ್‌ನಿಂದ ಲಾಡ್ಜಿಂಗ್ ಕ್ರಾಸ್, ಬಸ್ ನಿಲ್ದಾಣ ರಸ್ತೆಯಲ್ಲಿ ರ್ಯಾಲಿ ನಡೆಯಿತು. ಪಟ್ಟಣದ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ಪ್ರತಿನಿಧಿಗಳ ಅಧಿವೇಶನ ನಡೆಯಿತು.
ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಾಮಶೆಟ್ಟಿ, ರೈತ ಮುಖಂಡರಾದ ಅಲ್ತಫ್ ಇನಾಂದಾರ್, ನಾಗೇಂದ್ರ ಡಿಗ್ಗಿ, ಸಿದ್ಧಣ್ಣಗೌಡ ಮಾಲಿ ಪಾಟೀಲ, ಮಲ್ಲಣ್ಣಗೌಡ ಪಾಟೀಲ, ಮಹಾದೇವ ಡಿಗ್ಗಿ ಸಿಪಿಐ ಸಮಿತಿ ಸದಸ್ಯ ಮಲ್ಲಿಕಾರ್ಜುನ ಸಜ್ಜನ್, ಶಹಾಬಾದ ಸಂಚಾಲಕ ರಾಯಪ್ಪ ಹುರುಮುಂಜಿ, ಕಾಳಗಿ ಅಧ್ಯಕ್ಷ ದಿಲೀಪ್ ನಾಗೂರೆ, ಸಿದ್ದಮ್ಮ ನಾಲವಾರ, ತೋಟಮ್ಮ ನಾಲವಾರ, ಬಿಸಿಯೂಟ ಅಧ್ಯಕ್ಷೆ ಸುವರ್ಣ, ಅಕ್ಕನಾಗಮ್ಮ, ರಾಧಾ ಇತರರು ಇದ್ದರು.