ಹುಬ್ಬಳ್ಳಿ: ಸರಕಾರದ ಭರವಸೆ ಹಿನ್ನೆಲೆಯಲ್ಲಿ ಗುತ್ತಿಗೆ ಪೌರಕಾರ್ಮಿಕರು ಸೋಮವಾರದಿಂದ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಮಂಗಳವಾರ ಕೈ ಬಿಡಲಾಗಿದ್ದು, ಪೌರಕಾರ್ಮಿಕರು ಮೆರವಣಿಗೆ ನಡೆಸಿ ವಿಜಯೋತ್ಸವ ಆಚರಿಸಿದರು.
ಕಳೆದ ಕೆಲ ವರ್ಷಗಳಿಂದ ಗುತ್ತಿಗೆ ಪೌರಕಾರ್ಮಿಕರ ಕಾಯಂ ಹಾಗೂ ಗುತ್ತಿಗೆ ಪದ್ಧತಿ ರದ್ದತಿಗೆ ಒತ್ತಾಯಿಸಿ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘ ಹಾಗೂ ಕರ್ನಾಟಕ ಪೌರಕಾರ್ಮಿಕರ ನೌಕರರ ಮಕ್ಕಳ ಕಲ್ಯಾಣ ಮತ್ತು ಕ್ಷೇಮಾಭಿವೃದ್ಧಿ ಸಂಘ (ಎಸ್‌ಸಿ, ಎಸ್‌ಟಿ)ದ ಸದಸ್ಯರು ಸೋಮವಾರದಿಂದ ಪಾಲಿಕೆಯ ಮುಂಭಾಗದಲ್ಲಿ ಅನಿರ್ದಿಷ್ಟ ಮುಷ್ಕರ ಹಾಗೂ ನಿರಂತರ ಪ್ರತಿಭಟನೆ ಹಮ್ಮಿಕೊಂಡಿದ್ದರು.
24 ವರ್ಷಗಳ ಗುತ್ತಿಗೆ ಪದ್ದತಿಯನ್ನು ರದ್ದು ಮಾಡಲು ಸಮ್ಮತಿಸಿರುವ ಸರಕಾರ ಜೂ.20ರಂದು ಮುಖ್ಯಮಂತ್ರಿಗಳು ಆದೇಶ ಹೊರಡಿಸಲಿದ್ದಾರೆ ಎಂದು ಸಚಿವ ಎಚ್.ಆಂಜನೇಯ ಅವರು ರಾಜ್ಯ ಸಂಘದ ಅಧ್ಯಕ್ಷ ನಾರಾಯಣ ಅವರಿಗೆ ತಿಳಿಸಿರುವ ಹಿನ್ನೆಲೆಯಲ್ಲಿ ಮುಷ್ಕರ ಕೈಬಿಟ್ಟು ವಿಜಯೋತ್ಸವ ಆಚರಿಸಲಾಯಿತು.
ಸಂಘಟನೆಗಳ ಮುಖಂಡರಾದ ವಿಜಯ ಗುಂಟ್ರಾಳ, ಶರಣಪ್ಪ ಅಮರಾವತಿ, ಕನಕಪ್ಪ ಕೊಟಬಾಗಿ, ಪುಲ್ಲಯ್ಯ ಚಿಂಚಗಾಲ್ಲ, ರಮೇಶ ಡಾವಣಗೇರಿ, ಶರೀಫ ಅಬ್ಬಿಗೇರಿ, ಸಂತೋಷ ಕಟ್ಟಿಮನಿ ಹಾಗೂ ಬಾಬು ಬಳ್ಳಾರಿ, ಶಿವು ಅರ್ಜುನಗಿ, ನಾಗರಾಜ ಹೊಸಮನಿ, ಮಂಜುನಾಥ ಬೂದೂರ ಸೇರಿದಂತೆ ಗುತ್ತಿಗೆ ಪೌರಕಾರ್ಮಿಕರು ಇದ್ದರು.
ದಲಿತ ಸಂಘರ್ಷ ಸಮಿತಿ ಬೆಂಬಲ: ಪೌರ ಕಾರ್ಮಿಕರು ನಡೆಸುತ್ತಿದ್ದ ಅನಿರ್ದಿಷ್ಟ ಮುಷ್ಕರಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಬೆಂಬಲ ನೀಡುವುದರ ಜೊತೆಗೆ ಮುಖ್ಯಮಂತ್ರಿಗಳು ನೀಡಿರುವ ಭರವಸೆಯಿಂದ ವಿಜಯೋತ್ಸವ ಆಚರಿಸಿದರು.