Advertisement

ಸರ್ಕಾರಿ ಕೊಳವೆ ಬಾವಿ ಶುಂಠಿ ಬೆಳೆಗೆ ಬಳಕೆ

03:15 PM Jun 29, 2019 | Suhan S |

ಬ್ಯಾಡಗಿ: ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದರೂ ಗುಡ್ಡದ ಮಲ್ಲಾಪುರದಲ್ಲಿ ಸರ್ಕಾರಿ ಕೊಳವೆ ಬಾವಿಯೊಂದನ್ನು ಖಾಸಗಿ ವ್ಯಕ್ತಿಗಳು ಶುಂಠಿ ಬೆಳೆಯುವ ಹೊಲಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕೂಡಲೇ ಅದನ್ನು ಸ್ಥಗಿತಗೊಳಿಸಿ ಗ್ರಾಮದ ಮೇಲ್ಮಟ್ಟದ ಜಲಾಗಾರಕ್ಕೆ ನೀರು ಪೂರೈಸಬೇಕು. ಇಲ್ಲದಿದ್ದಲ್ಲಿ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸಲು ಹಿಂಜರಿಯುವುದಿಲ್ಲ ಎಂದು ಅಧ್ಯಕ್ಷೆ ಸವಿತಾ ಸುತ್ತಕೋಟಿ ತರಾಟೆ ತಗೆದುಕೊಂಡರು.

Advertisement

ತಾಲೂಕು ಪಂಚಾಯತ್‌ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯದ ಕುರಿತು ಗಮನ ಸೆಳೆದ ಸದಸ್ಯ ಶಾಂತಪ್ಪ ದೊಡ್ಮನಿ, ಮಳೆಯಿಲ್ಲದೆ ಜನ-ಜಾನುವಾರು ಕುಡಿಯುವ ನೀರಿಗಾಗಿ ತೊಂದರೆ ಪಡುತ್ತಿರುವ ಈ ದಿನಗಳಲ್ಲಿ ಸರ್ಕಾರಿ ಕೊಳವೆಬಾವಿಯೊಂದರ ದುರ್ಬಳಕೆಯಾಗುತ್ತಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ ಎಂದು ಆರೋಪಿಸಿದರು.

ಸದಸ್ಯ ಪ್ರಭುಗೌಡ ಪಾಟೀಲ ಮಾತನಾಡಿ, ಕುಡಿಯುವ ನೀರು ಪೂರೈಕೆಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ. ಹಾಗಂತಲೇ ಕೊಳವೆಬಾವಿಯನ್ನು ಗ್ರಾಮಸ್ಥರ ಅನುಕೂಲಕ್ಕಾಗಿ ಕೊರೆಸಲಾಗಿದೆ. ಆದರೆ, ಕೆಲ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಪ್ರಭಾವ ಬೀರುವ ಮೂಲಕ ಹಿರೇಕೆರೂರು ಹೆಸ್ಕಾಂ ವಿಭಾಗದಿಂದ ಅನಧಿಧೀಕೃತವಾಗಿ ವಿದ್ಯುತ್‌ ಸಂಪರ್ಕ ಪಡೆದು ನೀರನ್ನು ಖಾಸಗಿ ಜಮೀನುಗಳಿಗೆ ಹರಿಸಿಕೊಳ್ಳಲಾಗುತ್ತಿದೆ. ಜಿಲ್ಲಾಧಿಕಾರಿ ಗಳ ಗಮನಕ್ಕೆ ತರುವ ಮೂಲಕ ಹಿರೇಕೆರೂರು ಹೆಸ್ಕಾಂ ಸಿಬ್ಬಂದಿ ಮೇಲೂ ಕ್ರಮ ತೆಗೆದುಕೊಳ್ಳುವ ಕೆಲಸವಾಗಬೇಕು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮೀಣ ನೀರು ಪೂರೈಕೆ ಎಇಇ ಶಂಕರ ಚವಾಣ, ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿದ್ದು, ಗುಡ್ಡದ ಮಲ್ಲಾಪುರ ಶ್ರೀಮಠದ ಧರ್ಮಾಧಿಕಾರಿಗಳು ಹೊಲಕ್ಕೆ ನೀರು ಬಿಡುವುದನ್ನು ನಿಲ್ಲಿಸುತ್ತೇನೆ ಎಂದು ಮೌಖೀಕ ಭರವಸೆ ನೀಡಿದ್ದಾರೆ. ಮಾತಿನಂತೆ ನಡೆದುಕೊಳ್ಳುವ ವಿಶ್ವಾಸವಿಟ್ಟು ಮರಳಿ ಬಂದಿದ್ದೇನೆ ಎಂದರು.

ಸ್ಥಾಯಿಸಮಿತಿ ಅಧ್ಯಕ್ಷ ವೈ.ಎನ್‌. ಕರೇಗೌಡ್ರ ಮಾತನಾಡಿ, ವಿವಿಧ ವಸತಿ ಯೋಜನೆಯಡಿ ಬಡ ಫಲಾನುಭವಿಗಳಿಗೆ ಮಂಜೂರಾದ ಮನೆಗಳ ಕಾರ್ಯಾದೇಶ ಯಾವೊಬ್ಬ ಪಿಡಿಒಗಳೂ ಉಚಿತವಾಗಿ ಕೊಡುತ್ತಿಲ್ಲ. ಹಣ ಕೊಟ್ಟವರಿಗಷ್ಟೇ ಕಾರ್ಯಾದೇಶ ನೀಡಲಾಗುತ್ತಿದೆ. ಇಲ್ಲದಿದ್ದರೇ ಬ್ಲಾಕ್‌ ಆಗಿದೆ ಎಂದು ಕುಂಟುನೆಪ ಹೇಳಿ ಕಳುಹಿಸುತ್ತಿದ್ದಾರೆ. ಇದರಿಂದ ಫಲಾನುಭವಿಗಳಿಗೆ ಗೊತ್ತಿಲ್ಲದಂತೆ ಅವರ ಹೆಸರಿಗೆ ಬಂದಂತಹ ಮನೆಗಳು ಹಿಂದಕ್ಕೆ ಮರಳುತ್ತಿವೆ. ಇನ್ನೂ ಕೆಲವರಿಗೆ ಮನೆ ನಿರ್ಮಿಸಿಕೊಳ್ಳಲು ಮೌಖೀಕವಾಗಿ ತಿಳಿಸಲಾಗುತ್ತಿದ್ದು, ಮನೆ ನಿರ್ಮಿಸಿಕೊಂಡಿದ್ದವರಿಗೆ ಹಣ ನೀಡದೇ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿದರು.

Advertisement

ಲೋಕೋಪಯೋಗಿ ಇಲಾಖೆ ಮೇಲಿನ ಚರ್ಚೆ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ವೈ.ಎನ್‌.ಕರೇಗೌಡ್ರ ಮಾತನಾಡಿ, ಕದಮನಹಳ್ಳಿ ಹಾಗೂ ಗುಂಡೇನಹಳ್ಳಿ ಗ್ರಾಮಗಳ ಮಧ್ಯೆ ರಸ್ತೆ ತಿರುವೊಂದು ಅಪಾಯಕ್ಕೆ ಆಹ್ವಾನಿಸುತ್ತಿದೆ. ಶಾಲಾ ಮಕ್ಕಳನ್ನು ಹೊತ್ತೂಯ್ಯುವ ಸಂದರ್ಭದಲ್ಲಿ ಸಾರಿಗೆ ಬಸ್‌ ಎರಡು ಬಾರಿ ರಸ್ತೆ ಬಿಟ್ಟು ನೆಲಕ್ಕಳಿದಿದೆ. ಹೀಗಿದ್ದರೂ ಸಹ ತಿರುವು ಸರಳೀಕರಣಗೊಳಿಸುವ ಕುರಿತು ಕಳೆದ 6 ತಿಂಗಳ ಹಿಂದೆಯೇ ಮಾನ್ಯ ಶಾಸಕರು ಅಂದಾಜು ಪತ್ರಿಕೆ ಸಿದ್ಧಪಡಿಸುವಂತೆ ಸೂಚನೆ ನೀಡಿದ್ದರೂ ಯಾವುದೇ ಪ್ರಕ್ರಿಯೆ ನಡೆದಿಲ್ಲ ಎಂದು ತರಾಟೆ ತೆಗೆದುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಎಂಜಿನಿಯರ್‌ ಕೆ.ರಾಜಪ್ಪ, ಮೇಲಧಿಕಾರಿಗಳಿಂದ ಯಾವುದೇ ಸೂಚನೆ ಸಿಗದ ಹಿನ್ನೆಲೆಯಲ್ಲಿ ಯೋಜನಾ ಪ್ರತಿ ಸಿದ್ಧಪಡಿಸಿಲ್ಲ. ಅಷ್ಟಕ್ಕೂ ಈ ರಸ್ತೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಭೆಗೆ ತಿಳಿಸಿದರು. ಇದರಿಂದ ಮತ್ತಷ್ಟು ಗರಂ ಆದ ಕರೇಗೌಡ್ರ ‘ಹಾಗಿದ್ದರೇ ಇಷ್ಟು ದಿವಸ ಮಲಗಿದ್ದೀರೇನ್ರಿ? ಇಲ್ಲಿ ಯಾರೂ ದನ ಕಾಯೋರಿಲ್ಲಾ’ ಇಂತಹ ಹೇಳಿಕೆ ನೀಡಲು ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಚಿಕ್ಕಬಾಸೂರ ಗ್ರಾಪಂ ಅಧ್ಯಕ್ಷೆ ಕುಸಮಾ ಹಂಜೇರ ಮಾತನಾಡಿ, ಗ್ರಾಮ ಪಂಚಾಯತ್‌ ಜಾಗವನ್ನು ಒತ್ತುವರಿ ಮಾಡಿದ್ದ ಕೆಲ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಒತ್ತುವರಿ ಮರಳಿ ಪಡೆಯಲು ಗ್ರಾಪಂಗೆ ಅಧಿಕಾರವಿಲ್ಲವೇ ಎಂದು ಪ್ರಶ್ನಿಸಿದರು. ಕೂಡಲೇ ನೆನೆಗುದಿಗೆ ಬಿದ್ದಿರುವ ಪ್ರಕರಣಗಳನ್ನು ಪೂರ್ಣಗೊಳಿಸಿಕೊಡ ಬೇಕು ಮತ್ತು ಪಂಚಾಯಿತಿ ಹಸ್ತಾಂತರ ಮಾಡಿಕೊಡುವಂತೆ ಮನವಿ ಮಾಡಿದರು.

ಉಪಾಧ್ಯಕ್ಷೆ ಶಾಂತಮ್ಮ ದೇಸಾಯಿ ಸೇರಿದಂತೆ, ಸದಸ್ಯರಾದ ಗುಡ್ಡಪ್ಪ ಕೋಳೂರು, ಶಶಿಕಲಾ ಹಲಗೇರಿ, ಪೂರ್ಣಿಮಾ ಆನ್ವೇರಿ, ಸಾವಿತ್ರಾ ಕೋಡದ, ಪಾರ್ವತಮ್ಮ ಮುದುಕಮ್ಮನವರ, ಲಕ್ಷಣ ಮೇಗಳಮನಿ, ಲಲಿತಾ ಲಮಾಣಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next