Advertisement

ಸರ್ಕಾರ ಭವಿಷ್ಯದ ಮತದಾನ

11:26 PM Dec 05, 2019 | Team Udayavani |

ಉಪ ಚುನಾವಣೆ ನಡೆದ 15 ಕ್ಷೇತ್ರಗಳಲ್ಲಿ ಉತ್ತಮ ಮತದಾನ ನಡೆದಿದೆ. ಮತದಾನ ಎಂಬುದು ರಾಜ್ಯ, ರಾಷ್ಟ್ರ ಕಟ್ಟುವ ಪ್ರಕ್ರಿಯೆ. ಇದರಲ್ಲಿ ನಮ್ಮ ಜನತೆ ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ ಸಮಾಧಾನಕರ ರೀತಿಯಲ್ಲಿ ಪಾಲ್ಗೊಂಡಿದ್ದು ನಮ್ಮಲ್ಲಿ ಇನ್ನೂ ಪ್ರಜಾಪ್ರಭುತ್ವ ಗಟ್ಟಿ ಇದೆ ಎಂಬುದನ್ನು ಹೇಳುತ್ತದೆ.

Advertisement

ರಾಜ್ಯದ ಹದಿನೈದು ಕ್ಷೇತ್ರಗಳಿಗೆ ಮತದಾನ ಮುಕ್ತಾಯವಾಗಿದ್ದು, ಮತದಾರರು ತಮ್ಮ ಹಕ್ಕು ಚಲಾವಣೆಯ ಮೂಲಕ ರಾಜ್ಯದ ಬಿಜೆಪಿ ಸರ್ಕಾರದ ಭವಿಷ್ಯವನ್ನು ಇವಿಎಂ ಮಷಿನ್‌ಗಳಲ್ಲಿ ಭದ್ರಗೊಳಿಸಿದ್ದಾರೆ.

ವಿಷಾದದ ವಿಚಾರವೆಂದರೆ ಬೆಂಗಳೂರು ನಗರದ ಮತದಾರರು ತೀರಾ ನಿರಾಶಾದಾಯಕವಾಗಿ ಮತ ಚಲಾಯಿಸಿ ತಮ್ಮ ನಿರಾಸಕ್ತಿಯನ್ನು ಪ್ರದರ್ಶಿಸಿರುವುದು. ಇತರ ಕಡೆ ಹೋಲಿಸಿದರೆ, ಬೆಂಗಳೂರು ನಗರ ವ್ಯಾಪ್ತಿಯ ಪ್ರಮುಖ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.41ರ ಗಡಿ ತಲುಪಿರುವುದು ಜನತೆಯ ನೀರಸ ಪ್ರತಿಕ್ರಿಯೆಯನ್ನು ಪ್ರದರ್ಶಿಸುತ್ತದೆ. ಆದರೂ, ಒಟ್ಟಾರೆಯಾಗಿ 15 ಕ್ಷೇತ್ರಗಳಲ್ಲಿ ಶೇ. 66 ರ ಸರಾಸರಿ ಮತದಾನವಾಗಿದೆ. ಮತದಾನ ಪ್ರಕ್ರಿಯೆ ರಾಜ್ಯ, ರಾಷ್ಟ್ರ ಕಟ್ಟುವ ಪ್ರಮುಖ ಪ್ರಕ್ರಿಯೆಯಾಗಿದ್ದರೂ ಜನರ ನಿರಾಸಕ್ತಿ ಒಳ್ಳೆಯ ಲಕ್ಷಣವಲ್ಲ. ಜನರು ನಿರಾಸಕ್ತಿ ತೋರಿದರೆ ಅದಕ್ಕೆ ರಾಜಕಾರಣಿಗಳೂ ಅಷ್ಟೇ ಕಾರಣ ಎಂಬುದನ್ನು ಮರೆಯುವ ಹಾಗಿಲ್ಲ.

ಆದರೂ, ನಮ್ಮ ಮತದಾರರು ಶೇ. 100ರಷ್ಟು ಅಲ್ಲದಿದ್ದರೂ, ಸಮಾಧಾನಕರ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಿರುವುದು ನಮ್ಮಲ್ಲಿ ಇನ್ನೂ ಪ್ರಜಾಪ್ರಭುತ್ವ ಗಟ್ಟಿ ಇದೆ ಎಂಬುದನ್ನು ಹೇಳುತ್ತದೆ. ಮತ್ತೂಂದೆಡೆ, ಹದಿನೈದು ಕ್ಷೇತ್ರಗಳ ಫ‌ಲಿತಾಂಶ ರಾಜ್ಯ ರಾಜಕಾರಣದ ಭವಿಷ್ಯವನ್ನು ನಿರ್ಧರಿಸಲಿದ್ದು, ಹೀಗಾಗಿ ಈ ಉಪ ಚುನಾವಣೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ಪ್ರಮುಖವಾಗಿ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಸರ್ಕಾರದ ವಿರುದ್ದ ಮುನಿಸಿಕೊಂಡು ಹದಿನೇಳು ಕ್ಷೇತ್ರಗಳಿಗೆ ರಾಜಿನಾಮೆ ನೀಡಿದ್ದ ಶಾಸಕರಲ್ಲಿ ಹದಿಮೂರು ಅನರ್ಹರು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು.

Advertisement

ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ಬಂಡಾಯ ಶಾಸಕರ ಬಗ್ಗೆ ಸುಪ್ರೀಂ ಕೋರ್ಟ್‌ ತೀರ್ಪು ಎರಡು ರೀತಿಯ ವಿಶ್ಲೇಷಣೆಗೆ ಕಾರಣವಾಗಿ, ಆಗ ಸ್ಪೀಕರ್‌ ಆಗಿದ್ದ ರಮೇಶ್‌ ಕುಮಾರ್‌ ಅವರು ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್‌, ಅನರ್ಹರಾದರೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಯಿತು. ಅದೇ ಕಾರಣಕ್ಕೆ ಜನತಾ ನ್ಯಾಯಾಲಯದಲ್ಲಿಯೇ ಅಂತಿಮ ತೀರ್ಪು ಹೊರಬೀಳಲಿದೆ ಎಂಬ ಮಾತು ಆಶಾ ಭಾವನೆ ಜನರಲ್ಲಿದೆ.

ಈಗಾಗಲೇ ಜನತಾ ನ್ಯಾಯಾಲಯದಲ್ಲಿ ಅನರ್ಹರ ಭವಿಷ್ಯ ನಿರ್ಧಾರವಾಗಿದ್ದು, ಯಡಿಯೂರಪ್ಪ ಸರ್ಕಾರದ ಭವಿಷ್ಯ ಡಿ. 9 ರ ತೀರ್ಪಿನ ಮೇಲೆ ನಿಂತಿದೆ. ಫ‌ಲಿ ತಾಂಶ ಹೊರಬರುವವರೆಗೂ ಯಡಿಯೂರಪ್ಪ ಮತ್ತು ಅನ ರ್ಹರು ಉಸಿರು ಬಿಗಿ ಹಿಡಿದುಕೊಂಡೇ ನಡೆಯುವಂತಾಗಿದೆ.

ಪ್ರಮುಖವಾಗಿ ಎರಡು ದೃಷ್ಟಿಯಿಂದ ಈ ಚುನಾವಣೆಯ ಫ‌ಲಿತಾಂಶ ಮಹತ್ವ ಪಡೆದುಕೊಂಡಿದೆ. ಮೊದಲನೆಯದಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನರ್ಹ ಶಾಸಕರು ಎಂದು ಹಣೆ ಪಟ್ಟಿ ಕಟ್ಟಿಕೊಂಡು ಚುನಾವಣೆ ಎದುರಿಸುವ 13 ಜನ ಅನರ್ಹ ಶಾಸಕರ ಸೋಲು ಗೆಲುವು ಚುನಾವಣಾ ವ್ಯವಸ್ಥೆ ಹಾಗೂ ಮತದಾರನ ಮನಸ್ಥಿತಿಯನ್ನೂ ಬಿಂಬಿಸುತ್ತದೆ. ಆ ಮೂಲಕ ಸದ್ಯದ ಪರಿಸ್ಥಿತಿಯಲ್ಲಿ ಪಕ್ಷಾಂತರ ರಾಜಕಾರಣಕ್ಕೆ ಮತದಾರ ಯಾವ ರೀತಿಯ ತೀರ್ಪು ನೀಡುತ್ತಾನೆ ಎನ್ನುವುದು ದೇಶಕ್ಕೆ ಸಂದೇಶ ರವಾನೆ ಮಾಡುವ ಭಾವನೆಗಳೂ ಇವಿಎಂಗಳಲ್ಲಿ ಭದ್ರವಾಗಿ ಅಡಗಿ ಕುಳಿತಿವೆ.

ಇದರ ಜೊತೆಗೆ ಮತದಾರರು ತಮ್ಮ ಮತಗಳ ಮೂಲಕ ಅಸ್ತಿತ್ವದಲ್ಲಿರುವ ಒಂದು ಸರ್ಕಾರದ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಆ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಾಯಕತ್ವ ಹಾಗೂ ರಾಜಕೀಯ ಭವಿಷ್ಯವನ್ನೂ ನಿರ್ಧರಿಸುವ ಅಭಿಪ್ರಾಯಗಳನ್ನೂ ತಮ್ಮ ಮತಗಳ ಮೂಲಕ ಇವಿಎಂಗೆ ಸೇರಿಸಿದ್ದಾರೆ.

ಅದಕ್ಕೆ ಪ್ರತಿಯಾಗಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಹೆಚ್ಚಿನ ಸ್ಥಾನ ಗೆಲ್ಲುವುದರಿಂದ ನಾಯಕತ್ವ ಗಟ್ಟಿಗೊಳಿಸಿಕೊಳ್ಳಲು ಮತದಾರ ಅವಕಾಶ ಕಲ್ಪಿಸಿದ ಸಂದೇಶ ರವಾನಿಸಿದಂತಾಗುತ್ತದೆ. ಅನರ್ಹರ ಜೊತೆಗೆ ಯಡಿಯೂರಪ್ಪ ಅವರ ನಾಯಕತ್ವದ ಭವಿಷ್ಯವನ್ನೂ ನಿರ್ಧರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next