ಆಳಂದ: ಗ್ರಾಮೀಣ ಯೋಜನೆಗಳ ಜಾರಿಗೆ ತರುವಲ್ಲಿ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ಹೋರಾಟದ ಮೂಲಕ ಬೇಡಿಕೆಗೆ ಒತ್ತಾಯಿಸಿದರೂ ಸರ್ಕಾರ ಮತ್ತು ಅಧಿಕಾರಿಗಳು ಕಿಂಚಿತವೂ ಸ್ಪಂದನೆ ಮಾಡುತ್ತಿಲ್ಲ ಎಂದು ಅಖೀಲ ಭಾರತ ಕಿಸಾನಸಭಾ ರಾಜ್ಯ ಉಸ್ತುವಾರಿ ಪಿ.ವಿ. ಲೋಕೇಶ ಆರೋಪಿಸಿದರು.
ಪಟ್ಟಣದ ತಾಪಂ ಕಚೇರಿಯ ಮುಂದೆ ಅಖೀಲ ಭಾರತ ಕಿಸಾನಸಭಾ ಮತ್ತು ಭಾರತೀಯ ಖೇತ ಮಜ್ದೂರ ಯೂನಿಯನ್ ಹಮ್ಮಿಕೊಂಡ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಬಳಿಕ ನಡೆಸಿದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ಉದ್ಯೋಗ ಖಾತ್ರಿ ಸೇರಿ ಗ್ರಾಮೀಣ ಕಾಮಗಾರಿಯನ್ನು ಸಮರ್ಪಕ ಅನುಷ್ಠಾನಕ್ಕೆ ತರಬೇಕು ಎಂದು ತಾಪಂ ಕಚೇರಿಯ ಮುಂದೆ 37 ದಿನಗಳಿಂದಲೂ ಹೋರಾಟ ನಡೆಸಿದರು ಸಹ ತಾಲೂಕಿಗೆ ಆಗಮಿಸಿದ್ದ ಮುಖ್ಯಮಂತ್ರಿಗಳಾಗಲ್ಲಿ ಸಂಬಂಧಿತ ಅಧಿಕಾರಿಗಳಲ್ಲಿ ಚರ್ಚಿಸಿ ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡಿಲ್ಲ. ಪಂಪ್ ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಗೂ ಆಗುತ್ತಿಲ್ಲ. ಅತಿವೃಷ್ಟಿಯಿಂದ ಹಾಳಾದ ಬೆಳೆಗೆ ಪರಿಹಾರ ಮತ್ತು ವಿಮೆ ಬರುತ್ತಿಲ್ಲ. ಉದ್ಯೋಗ ಖಾತ್ರಿ ಅಡಿಯಲ್ಲಿ ನಮ್ಮ ಹೊಲ ನಮ್ಮ ರಸ್ತೆ, ಬದು ನಿರ್ಮಾಣ, ದನದಕೊಟ್ಟಿಗೆ ಕುರಿದೊಡ್ಡಿಯಂತ ಕೆಲಸಕ್ಕೆ ಯೋಜನೆಗಳಲ್ಲೇ ಆದೇಶವಿರುವಾಗ ಮತ್ತೇಕ ಮೇಲಾಧಿಕಾರಿಗಳ ಅಥವಾ ಸರ್ಕಾರದ ಆದೇಶ ಬೇಕು. ಇದಕ್ಕೂ ಸಂಪುಟದ ಒಪ್ಪಿಗೆ ಬೇಕೇ ಎಂದು ಪ್ರಶ್ನಿಸಿದ ಅವರು, ಯೋಜನೆಗಳ ಜಾರಿಗೆ ಬಂದ ಮೇಲೆ ನಿರಂತರವಾಗಿ ಅನುಷ್ಠಾನಕ್ಕೆ ಬರಬೇಕು. ಬರುತ್ತಿಲ್ಲದ ಕಾರಣ ಹೋರಾಟ ನಡೆಸಲಾಗಿದೆ. ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸದೆ ಹೋದಲ್ಲಿ ರಾಜ್ಯ ಕಮಿಟಿಯಲ್ಲಿ ನಿರ್ಧರಿಸಿ ರಾಜ್ಯಾದ್ಯಂತ ಹೋರಾಟಕ್ಕೆ ಅಣಿಗೊಳಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಫೆ.23ರಿಂದ ಎರಡು ದಿನಗಳ ಕಾಲ ನಡೆಯಲಿರುವ ಕೇಂದ್ರದ ಎಲ್ಲ ಕಾರ್ಮಿಕ ಸಂಘಟನೆಗಳ ಅಖೀಲಭಾರತ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕಿಸಾನಸಭಾ ಸಂಪೂರ್ಣ ಬೆಂಬಲ ನೀಡಲಿದೆ. ರೈತಪರ ಹೋರಾಟದಲ್ಲೂ ಎಡವಿದೆ ಇದಕ್ಕೆ ಆತ್ಮಾವಲೋಕನ ಮಾಡಿಕೊಳ್ಳುವ ಕಾಲವಿದೆ ಎಂದ ಅವರು, ಜನರ ಕೂಗು ಕೇಳುವ ಸೂಕ್ಷ್ಮತೆ ಸರ್ಕಾರ ಕಳೆದುಕೊಂಡಿವೆ. ಸರ್ಕಾರಗಳಿಗೆ ಜಾತಿ, ಧರ್ಮದ ಭಾವನೆ ಕೆರಳಿಸಿ ಜನರ ಭಾವನಾತ್ಮಕವಾಗಿ ಕೇರಳಿಸುವಂತವುಗಳಿಗೆ ಆದ್ಯತೆ ನೀಡುತ್ತಿವೆ ಹೊರತು ರಾಜ್ಯಧರ್ಮ ಪಾಲನೆ ಸಂವಿಧಾನ ಪಾಲಿಸುತ್ತಿಲ್ಲ. ಹಂಪಿ ವಿವಿಗೆ 50 ಕೊಡಲು ಆಗಿಲ್ಲ. ಅದೇ ಸಂಸ್ಕೃತ ವಿವಿಗೆ 300 ಕೋಟಿ ಅಧಿಕ ಹಣ ಕೊಟ್ಟಿದ್ದಾರೆ. ಸರ್ಕಾರಗಳ ಹಿಡನ್ ಅಜೆಂಡಾವಿಟ್ಟು ಜನಪರ ರೈತಪರ ಹೋರಾಟಗಳಿಗೆ ನಿರ್ಲಕ್ಷಿಸುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.
ರಾಜ್ಯಾಧ್ಯಕ್ಷ ಕರಿಯಣ್ಣ, ರಾಜ್ಯ ಕಾರ್ಯದರ್ಶಿ ಕೆ.ಎಸ್. ಜನಾರ್ದನ, ಬಾಬುರಾವ್ ಹೊನ್ನಾ, ಮೌಲಾ ಮುಲ್ಲಾ, ಭೀಮಾಶಂಕರ ಮಾಡಿಯಾಳ, ಚಂದ್ರಕಾಂತ ಖೋಬ್ರೆ, ರಾಜಶೇಖರ ಬಸ್ಮೇ, ಮಲ್ಲಿನಾಥ ಯಲಶೆಟ್ಟಿ ಇತರರು ಇದ್ದರು.