ಶಿವಮೊಗ್ಗ: ರಾಜ್ಯದ ಇಡೀ ಶೈಕ್ಷಣಿಕ ವ್ಯವಸ್ಥೆ ಪಾತಾಳಕ್ಕೆ ಕುಸಿದಿದ್ದು ಸರ್ಕಾರ ಅದನ್ನು ಸರಿದಾರಿಗೆ ತರಲು ವಿಫಲವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್. ಎಸ್. ಸುಂದರೇಶ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳಿ ತಪ್ಪಿರುವ ಶಿಕ್ಷಣ ವ್ಯವಸ್ಥೆಯನ್ನು ಸರಿದಾರಿಗೆ ತರಬೇಕು. ಸಂಕಷ್ಟದಲ್ಲಿರುವ ಅನುದಾನತ ರಹಿತ ಶಿಕ್ಷಕರಿಗೆ ಸಹಾಯ ಮಾಡಬೇಕು. ಬಡ ಮಕ್ಕಳಿಗಾಗಿಯೇ ರೂಪಿತಗೊಂಡಿರುವ ಮಧ್ಯಾಹ್ನದ ಬಿಸಿಯೂಟವನ್ನು ವಿದ್ಯಾರ್ಥಿಗಳ ಮನೆಗೆ ತಲುಪಿಸಬೇಕು ಎಂದು ಒತ್ತಾಯಿಸಿದರು.
ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ತರಬೇಕು. ಕೋವಿಡ್ ವಿರುದ್ಧದ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ಶಿಕ್ಷಕರಿಗೆ ಪರಿಹಾರ ನೀಡಬೇಕು. ಖಾಸಗಿ ಶಾಲೆಗಳಿಗೆ ಬಡ್ಡಿರಹಿತ ಸಾಲ ನೀಡಬೇಕು ಎಂಬುದು ಸೇರಿದಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಸರ್ಕಾರ ಶಿಕ್ಷಣ ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲ ಮಾಡಿದೆ. ಇದರಿಂದ ರಾಜ್ಯದ ಅಸಂಖ್ಯಾತ ಮಕ್ಕಳ ಭವಿಷ್ಯ ಅಂಧಕಾರದಲ್ಲಿ ಮುಳುಗಿದೆ. ಅದರಲ್ಲೂ ಸರ್ಕಾರಿ ಶಾಲಾ ಮಕ್ಕಳ ಪರಿಸ್ಥಿತಿಯಂತೂ ಹೀನಾಯವಾಗಿದೆ. ಬಡ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡುವ ಯೋಜನೆ ಸರ್ಕಾರದ ಬಳಿ ಇಲ್ಲವಾಗಿದೆ. ಒಂದು ಕಡೆ ಕೋವಿಡ್ ಸಾಂಕ್ರಾಮಿಕವಾಗಿ ಕಾಡುತ್ತಿದೆ. ಈ ಮಧ್ಯೆ ಖಾಸಗಿ ಶಾಲೆಗಳು ಮಾತ್ರ ಆನ್‌ಲೈನ್ ಹೆಸರಿನಲ್ಲಿ ಲಾಭ ಮಾಡಿಕೊಳ್ಳಲು ಹೊರಟಿವೆ. ಉಳ್ಳವರು ಮಕ್ಕಳು ಮಾತ್ರ ಆನ್‌ಲೈನ್ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣದ ಮೂಲಕ ಲಾಭ ಪಡೆಯುತ್ತಿದ್ದಾರೆ. ಆದರೆ ಗ್ರಾಮೀಣ ಭಾಗದ ಬಡ ಮಕ್ಕಳು ಇದರಿಂದ ವಂಚಿತರಾಗಿದ್ದಾರೆ. ಅಸಂಖ್ಯಾತ ಶಿಕ್ಷಕರ ಬದುಕು ಅತಂತ್ರವಾಗಿದೆ ಎಂದರು. ಗೋಷ್ಠಿಯಲ್ಲಿ ಜಿಲ್ಲಾ ಪ್ರ. ಕಾರ್ಯದರ್ಶಿ ಸಿ.ಎಸ್. ಚಂದ್ರಭೂಪಾಲ್ ಇದ್ದರು.