ಮಾಲೂರು: ಕೋವಿಡ್-19 ದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಹಿತ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಂಭೀರ ಅರೋಪ ಮಾಡಿದರು. ತಾಲೂಕಿನ ಕೊಮ್ಮನಹಳ್ಳಿಯಲ್ಲಿ ಶಾಸಕ ನಂಜೇಗೌಡರ ನಿವಾಸದಲ್ಲಿ ತಾಲೂಕಿನ
ಬಡಜನತೆಗಾಗಿ ವಿತರಿಸಲು ಸಿದ್ಧಪಡಿಸಿದ್ದ ಗೋಧಿ ಹಿಟ್ಟು ಮತ್ತು ತರಕಾರಿ ಉಚಿತ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಸೋಂಕು ಗಂಭೀರವಾಗಿರುವ ದಿನಗಳಲ್ಲಿ ಪ್ರಧಾನಿ ಘೋಷಣೆ ಮಾಡಿರುವ ಲಾಕ್‌ಡೌನ್ ಸೂತ್ರವನ್ನು ಪ್ರತಿಪಕ್ಷಗಳು ಸ್ವಾಗತಿಸುತ್ತವೆ ಎಂದು ತಿಳಿಸಿದರು.
ಸೂಕ್ತ ಮಾರುಕಟ್ಟೆ ಇಲ್ಲ: ಅದೇರೀತಿ ರಾಜ್ಯದಲ್ಲಿ ರೈತರು ಬೆಳೆದ ಹಣ್ಣು, ತರಕಾರಿ, ಹೂವು ಬೆಲೆ ಇಲ್ಲದೆ ನಷ್ಟದ ಹಾದಿಯಲ್ಲಿದ್ದು, ರಾಜ್ಯ ಸರ್ಕಾರ ರೈತರು ಬೆಳೆದು ತರಕಾರಿ ಮತ್ತು ಹಣ್ಣುಗಳ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವುದಾಗಿ ಘೋಷಣೆ ಮಾಡಿತ್ತು. ಆದರೆ, ಇದುವರೆಗೂ ರಾಜ್ಯದ ಯಾವುದೇ ರೈತರ ತೋಟಗಳಿಗೆ ಸರ್ಕಾರಿ ಅಧಿಕಾರಿಗಳು ಭೇಟಿ ನೀಡಿಲ್ಲ. ರೈತರ ಸಂಕಷ್ಟ ನೀಗಿಲ್ಲ ಎಂದು ಹೇಳಿದರು.
ಪ್ರಸ್ತುತ ಕೇಂದ್ರ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸೌಲಭ್ಯಗಳ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿರುವುದಾಗಿ ತಿಳಿಸಿದ ಅವರು, ದೇಶದಲ್ಲಿ ಒಂದು ಸಮುದಾಯವನ್ನು ತಪ್ಪಿತಸ್ಥರನ್ನಾಗಿ ಬಿಂಬಿಸುವ ಕಾರ್ಯವಾಗುತ್ತಿದೆ. ಕೋಮು ಪ್ರಚೋದನೆಗೆ ಕಾರಣವಾಗುತ್ತಿದೆ ಎಂದು ಅರೋಪಿಸಿದರು.
ಸಕ್ರಮವಾಗಿ ಜಾರಿ ಮಾಡಿ: ಈ ಕೂಡಲೇ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ನೀಡಿರುವ ಸೌಲಭ್ಯಗಳ ಮಾರ್ಗ ಸೂಚಿಯನ್ನು ಹೊರಡಿಸುವ ಜೊತೆಗೆ ನರೇಗಾ ಕಾರ್ಯಕ್ರಮಗಳನ್ನು ಸಕ್ರಮವಾಗಿ ಜಾರಿ ಮಾಡುವಂತೆ ಅಗ್ರಹಿಸಿದ್ದಾರೆ.
ಬೆಳೆ ಪರಿಶೀಲನೆ: ತಾಲೂಕಿನ ಓಜರಹಳ್ಳಿಯ ಬಳಿಯಲ್ಲಿ ಕೊಂಡಶೆಟ್ಟಿಹಳ್ಳಿಯ ರೈತ ಅಶ್ವತ್ಥಪ್ಪ ಅವರು ಕೃಷಿ ಭೂಮಿಯನ್ನು ಗುತ್ತಿಗೆಗೆ ಪಡೆದ ಸರಿಸುಮಾರು 10 ಎಕರೆ ಪ್ರದೇಶದಲ್ಲಿ ಬೆಳೆದಿರುವ ಕ್ಯಾರೇಟ್ ಮತ್ತು ಎಲೆಕೋಸಿನ ತೋಟ ಮತ್ತು ಬಾಳಿಗಾನಹಳ್ಳಿಯ ಬಳಿಯಲ್ಲಿ ಶ್ರೀನಿವಾಸ್ ಅವರು ಶೇಡ್‌ನೇಟ್‌ನಲ್ಲಿ ಬೆಳೆದ ಬಜ್ಜಿ ಮೆಣಸಿನ ಕಾಯಿ ಮತ್ತು ಬದನೆಕಾಯಿ ತೋಟಗಳನ್ನು ಪರಿಶೀಲಿಸಿ ವಸ್ತು ಸ್ಥಿತಿಯನ್ನು ಸರ್ಕಾರಕ್ಕೆ ತಿಳಿಸುವುದಾಗಿ ತಿಳಿಸಿದರು. ಕೇಂದ್ರ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ, ಮಾಜಿ ಸಚಿವ ಕೃಷ್ಣಾಬೈರೇಗೌಡ, ಶಾಸಕ ಕೆ.ವೈ.ನಂಜೇಗೌಡ, ಕೆಪಿಸಿಸಿ ಕಾರ್ಯದರ್ಶಿ ಸಿ.ಲಕ್ಷ್ಮೀನಾರಾಯಣ್, ಜಿಲ್ಲಾ ಕಾಂಗ್ರೆಸ್
ಅಧ್ಯಕ್ಷ ಚಂದ್ರಾರೆಡ್ಡಿ, ಮುಖಂಡರಾದ ಅಂಜನಿ ಸೋಮಣ್ಣ, ಎಚ್.ಹನುಮಂತಪ್ಪ, ಟಿ.ಮುನಿಯಪ್ಪ ಇದ್ದರು.