Advertisement

ಬಡವರಿಗೆ ಸೌಲಭ್ಯ ಕಲ್ಪಿಸಲು ಸರ್ಕಾರ ವಿಫ‌ಲ

09:35 PM Dec 18, 2019 | Lakshmi GovindaRaj |

ಚಾಮರಾಜನಗರ: ಭಾಗ್ಯ ಜ್ಯೋತಿ ಸೇರಿದಂತೆ ಬಡಜನರಿಗೆ ದೊರಕುತ್ತಿದ್ದ ಅನೇಕ ಸೌಲಭ್ಯಗಳನ್ನು ರಾಜ್ಯ ಸರ್ಕಾರ ಕಸಿದುಕೊಳ್ಳುತ್ತಿದೆ. ಇದರ ವಿರುದ್ಧ ಮುಂದಿನ ವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ ತಿಳಿಸಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ಇಲಾಖೆಗಳಲ್ಲಿ ಸರ್ಕಾರದಿಂದ ದೊರಕುತ್ತಿದ್ದ ಕಾನೂನು ಬದ್ಧ ಸೌಲಭ್ಯಗಳನ್ನು ತಲುಪಿಸಲು ಬಡವರ ಮೇಲೆ ದೌರ್ಜನ್ಯ ಮಾಡುತ್ತಿದೆ ಎಂದು ಆರೋಪಿಸಿದರು.

Advertisement

ವಿದ್ಯುತ್‌ ಸಂಪರ್ಕ ಕಡಿತ: ಬಡಜನರಿಗೆ ಉಚಿತ ವಿದ್ಯುತ್‌ ಕಲ್ಪಿಸುತ್ತಿದ್ದ ಭಾಗ್ಯಜ್ಯೋತಿ ಯೋಜನೆಯ ಹಣಕಟ್ಟುವಂತೆ ಸಾವಿರಾರು ಬಡ ಫ‌ಲಾನುಭವಿ ಮನೆಯ ವಿದ್ಯುತ್‌ ಸಂಪರ್ಕ ತೆಗೆದುಹಾಕಲಾಗುತ್ತಿದೆ. ಲೈನ್‌ಮ್ಯಾನ್‌ ಮೂಲಕ ದೌರ್ಜನ್ಯ ಮಾಡುತ್ತಿದ್ದಾರೆ. ಪ್ರತಿರೋಧ ವ್ಯಕ್ತಪಡಿಸುವ ಫ‌ಲಾನುಭವಿಯ ಮೇಲೆ ಕ್ರಿಮಿನಲ್‌ ಮೊಕದ್ದಮೆ ಹೂಡುತ್ತಿದ್ದಾರೆ. ಇದು ಖಂಡನೀಯವಾದದ್ದು, ಭಾಗ್ಯಜ್ಯೋತಿ ಯೋಜನೆಯಲ್ಲಿ 40 ಯುನಿಟ್‌ ಉಚಿತ ಎಂದು ಹೇಳುತ್ತಾರೆ. ಆದರೆ, 41ನೇ ಯುನಿಟ್‌ ವಿದ್ಯುತ್‌ ಬಳಕೆ ಮಾಡಿದರೆ ಹೆಚ್ಚುವರಿ ಒಂದು ಯುನಿಟ್‌ಗೆ ಹಣ ಕಟ್ಟಿಸಿಕೊಳ್ಳಬೇಕು. ಅದನ್ನು ಬಿಟ್ಟು 41 ಯುನಿಟ್‌ಗೂ ಪೂರ್ತಿ ಹಣ ಕಟ್ಟಿಸಿಕೊಳ್ಳುವ ಮೂಲಕ ಬಡವರಿಗೆ ಅನ್ಯಾಯ ಮಾಡಲಾಗುತ್ತಿದೆ. ಇದು ಬಹಳ ಅನ್ಯಾಯ ಎಂದು ದೂರಿದರು.

ಬಡವರ ಮೇಲೆ ದೌರ್ಜನ್ಯ: ಜಿಲ್ಲೆಯಲ್ಲಿ ಸ್ಮಶಾನ ಸಮಸ್ಯೆ, ಸಾಗುವಳಿ ಪತ್ರ ವಿತರಣೆ, ಇ-ಸ್ವತ್ತು ಸಮಸ್ಯೆ, ಸಾಗುವಳಿ ಚೀಟಿ ವಿತರಣೆಯಾದ ಫ‌ಲಾನುಭವಿಗಳಿಗೆ ಭೂಮಿಯನ್ನು ಖಾತೆ ಮಾಡಿಕೊಟ್ಟಿಲ್ಲ. ಪೋಡು ಮಾಡಿಲ್ಲ, ಜೀತವಿಮುಕ್ತ ಸಮಸ್ಯೆ, ಗುತ್ತಿಗೆ ನೌಕರರ ಸಮಸ್ಯೆ, ವಿವಿಧ ನಿಗಮಗಳಲ್ಲಿ, ಬ್ಯಾಂಕ್‌ಗಳಲ್ಲಿ ಆಧಾರ್‌ ಕಾರ್ಡ್‌ ವಿತರಣೆಯಲ್ಲಿ ಬಡವರ ಮೇಲೆ ದೌರ್ಜನ್ಯಗಳು ನಡೆಯುತ್ತಿದೆ. ಇವೆಲ್ಲ ಸಮಸ್ಯೆಗಳನ್ನು ರಾಜ್ಯ ಸರ್ಕಾರ, ಜಿಲ್ಲಾಡಳಿತದ ಗಮನಕ್ಕೆ ತರಲು ಮುಂದಿನ ವಾರ ನಮ್ಮ ಪಕ್ಷದ ವತಿಯಿಂದ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ನಮ್ಮ ಸಂಸ್ಕೃತಿಗೆ ಧಕ್ಕೆ: ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರ ರಚನೆಯಾದ ಮೇಲೆ ದೇವಸ್ಥಾನದ ಮುಂಭಾಗದಲ್ಲಿ ತಮಟೆ ಹೊಡೆಯುವಂತಿಲ್ಲ. ಕಂಸಾಳೆ ಹೊಡೆಯುವಂತಿಲ್ಲ, ಜಾನಪದ ಹಾಡು ಹಾಡುವಂತಿಲ್ಲ, ರಜೆ ಹೊಡೆಯುವಂತಿಲ್ಲ ಇದರಿಂದ ನಮ್ಮ ಸಂಸ್ಕೃತಿಗೆ ಧಕ್ಕೆಯಾಗಿದೆ. ಭಕ್ತರನ್ನು ಭಿಕ್ಷುಕರಂತೆ ನೋಡುವ ವಾತಾವರಣ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಆಧಾರ್‌ ಕಾರ್ಡ್‌ ನೋಂದಣಿ, ತಿದ್ದುಪಡಿ ಕೇಂದ್ರವನ್ನು ಗ್ರಾಮ ಪಂಚಾಯ್ತಿಗಳಿಗೆ ವಿಸ್ತರಿಸಿ, ಬಡವರಿಗೆ ಅನುಕೂಲ ಮಾಡಿಕೊಡಬೇಕು. ಬ್ಯಾಂಕ್‌ಗಳ, ಖಾಸಗಿ ಬ್ಯಾಂಕ್‌ಗಳ ಸಾಲ ವಸೂಲಾತಿಯಲ್ಲಿ ಬಡವರ ಮೇಲೆ ದೌರ್ಜನ್ಯ ಮಾಡುತ್ತಿವೆ. ಅಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ಹಣಕಾಸಿನ ಸಂಘ-ಸಂಸ್ಥೆಗಳು ಸಾಲ ನೀಡಿ, ಸಾಲ ವಸೂಲಾತಿಯಲ್ಲಿ ಹಿಂಬದಿಯಿಂದ ದೊಡ್ಡ ದೌರ್ಜನ್ಯ ನೀಡುತ್ತಿದೆ ಎಂದು ಹೇಳಿದರು.

Advertisement

ಅನುದಾನ ಬೇರೆ ಯೋಜನೆಗೆ ಬಳಸುವಂತಿಲ್ಲ: ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿಯಲ್ಲಿ ಶೇ.39ರಷ್ಟು ಅನುದಾನವನ್ನು ಮಾತ್ರ ಖರ್ಚು ಮಾಡಲಾಗಿದೆ. ಬಾಕಿ ಉಳಿಕೆ ಅನುದಾನವನ್ನು ಬೇರೆ ಬೇರೆ ಇಲಾಖೆಗಳಿಗೆ ಖರ್ಚು ಮಾಡುವಂತೆ ಸಮಾಜ ಕಲ್ಯಾಣ ಸಚಿವ ಹಾಗೂ ಉಪಮುಖ್ಯಮಂತ್ರಿ ಗೋವಿಂದಕಾರಜೋಳ ಹೇಳಿದ್ದಾರೆ. ಎಸ್‌ಸಿ, ಎಸ್‌ಟಿಗಳಿಗೆ ಮೀಸಲಾಗಿರುವ ಅನುದಾನವನ್ನು ಬೇರೆ ಯೋಜನೆಗಳಿಗೆ ಬಳಸುವಂತಿಲ್ಲ ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿಎಸ್‌ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ.ಮ.ಕೃಷ್ಣಮೂರ್ತಿ, ಜಿಲ್ಲಾ ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ತಾಲೂಕು ಅಧ್ಯಕ್ಷ ಎಸ್‌.ಪಿ.ಮಹೇಶ್‌, ಖಜಾಂಚಿ ರಾಜೇಂದ್ರ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next