Advertisement

ಎಸ್ಸಿ, ಎಸ್ಟಿಗೆ ಸಂವಿಧಾನ ಹಕ್ಕು ನೀಡಲು ಸರ್ಕಾರ ವಿಫ‌ಲ

08:55 PM Jul 21, 2019 | Lakshmi GovindaRaj |

ಚಾಮರಾಜನಗರ: ಪ.ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸಂವಿಧಾನ ಬದ್ಧ ಹಕ್ಕುಗಳನ್ನು ನೀಡುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಉದಾಸೀನ ತೋರಿವೆ ಎಂದು ದಾವಣಗೆರೆ ಜಿಲ್ಲೆಯ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ ಆರೋಪಿಸಿದರು.

Advertisement

ನಗರದ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪ.ಜಾತಿ ಮತ್ತು ಪರಿಶಿಷ್ಟ ಪಂಗಡ ಸರ್ಕಾರಿ ನೌಕರರ ಒಕ್ಕೂಟ ಜಿಲ್ಲಾ ಘಟಕವು ಛತ್ರಪತಿ ಶಾಹು ಮಹಾರಾಜ್‌, ನಾಲ್ವಡಿ ಕೃಷ್ಣರಾಜ ಒಡೆಯರ್‌ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ದಿನಾಚರಣೆ ಅಂಗವಾಗಿ ಪ.ಜಾತಿ ಮತ್ತು ಪರಿಶಿಷ್ಟ ಪಂಗಡ ಸರ್ಕಾರಿ ನೌಕರರ ಸ್ವಾಭಿಮಾನಿ ಸಮಾವೇಶ ಮತ್ತು ಬಡ್ತಿ ಮೀಸಲಾತಿ ಕುರಿತು ಸುಪ್ರೀಂಕೋರ್ಟ್‌ನ ಐತಿಹಾಸಿಕ ತೀರ್ಪಿನ ಅವಲೋಕನ ಸಮಾರಂಭದಲ್ಲಿ ಮಾತನಾಡಿದರು.

ಪ್ರಾಮಾಣಿಕ ಕೆಲಸ ಮಾಡೋಣ: ನಾವೆಲ್ಲರೂ ಸಂಘಟನಾತ್ಮಕ ಮನೋಭಾನೆ ಬೆಳಸಿಕೊಂಡು ಹೋರಾಟದ ಮೂಲಕ ನಮ್ಮಹಕ್ಕುಗಳನ್ನು ಪಡೆದು ಕೊಳ್ಳಬೇಕಿದೆ. ಸರ್ಕಾರ ಆನೆ ಇದ್ದಂತೆ. ಈ ಆನೆಯನ್ನು ಅಂಕುಶದ ಮೂಲಕ ಮಣಿಸಿ, ಬಗ್ಗಿಸಿ, ಚಾಟಿ ಬೀಸಿ ನಮ್ಮ ಹಕ್ಕುಗಳನ್ನು ಪ್ರಾಮಾಣಿಕವಾಗಿ ಪಡೆದುಕೊಳ್ಳುವ ಕೆಲಸ ಮಾಡೋಣ ಎಂದರು.

ಸಮುದಾಯವನ್ನು ಮೇಲೆತ್ತೋಣ: ಎಸ್‌ಸಿ, ಎಸ್‌ಟಿಗಳು ರಾಜಕೀಯವಾಗಿ ಸಂಘಟಿತರಾಗೋಣ. ನಮ್ಮ ಪರಂಪರೆ ಇತಿಹಾಸದ ಪುಟಗಳನ್ನು ತೆಗೆದಾಗ ರಾಮಾಯಣದ ಆದರ್ಶದಲ್ಲಿ ಭಾರತೀಯ ಕುಟುಂಬ ನಡೆಯುತ್ತಿದೆ. ರಾಮಾಯಣ ಆದರ್ಶವನ್ನು ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಸಂವಿಧಾನ ಮೂಲಕ ಎತ್ತಿ ಹಿಡಿದ್ದಾರೆ. ಮಾನವೀಯ ಮೌಲ್ಯಗಳು, ಮಾನವ ಹಕ್ಕುಗಳನ್ನು ನೀಡಿದ್ದಾರೆ. ತಳಸಮುದಾಯಗಳೆಲ್ಲ ಶಿಕ್ಷಣವಂತರಾಗಿ ಸಂಘಟಿತರಾಗಿ ಹೋರಾಟದ ಮೂಲಕ ನಮ್ಮ ಹಕ್ಕುಗಳನ್ನು ಪಡೆದುಕೊಂಡು ಸ್ವಾಭಿಮಾನಿಗಳಾಗಿ ಬದುಕು ಕಟ್ಟಿಕೊಂಡು ನಮ್ಮ ಸಮುದಾಯಗಳನ್ನು ಮೇಲೆ ತರುವ ಕೆಲಸ ಮಾಡೋಣ ಎಂದು ಕರೆ ನೀಡಿದರು.

ಸಂವಿಧಾನ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ: ನಳಂದ ಬೌದ್ಧ ವಿಶ್ವವಿದ್ಯಾನಿಲಯದ ಬೋಧಿದತ್ತ ಬಂತೇಜಿ ಮಾತನಾಡಿ, ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ನೀಡಿರುವ ಮೀಸಲಾತಿಯಿಂದ ನಾವೆಲ್ಲರೂ ಒಳ್ಳೆಯ ಜೀವನ ಮಾಡುತ್ತಿದ್ದೇವೆ. ಜಾತೀಯತೆ, ಮನುವಾದ ಇರುವ ತನಕ ಮೀಸಲಾತಿ ಇರಲೇಬೇಕು. ಮೀಸಲಾತಿ ವಿಶೇಷ ಆದ್ಯತೆ, ಬಡ್ತಿ ಮೀಸಲಾತಿ, ಎಲ್ಲ ಕ್ಷೇತ್ರದಲ್ಲಿ ಮೀಸಲಾತಿ ವಿರೋಧಿಸವವರಿಗೆ ನಮ್ಮ ಪ್ರಶ್ನೆ ನಾವು ಮನುಷ್ಯರಲ್ಲವೇ ಮನುಷ್ಯರನ್ನ ಮನುಷ್ಯರಂತೆ ನೋಡಬೇಕು. ಅಂಬೇಡ್ಕರ್‌ ಅವರು ನೀಡಿರುವ ಮೀಸಲಾತಿ, ಸಂವಿಧಾನವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

Advertisement

ಪಂಚಶೀಲ ಪಾದಯಾತ್ರೆ: ಭಗವಾನ್‌ಬುದ್ಧರು, ಅಂಬೇಡ್ಕರ್‌ ಅವರ ಸಂದೇಶಗಳನ್ನು ಗ್ರಾಮೀಣ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಇಡೀ ರಾಜ್ಯಾದ್ಯಂತ ಅಂಬೇಡ್ಕರ್‌ ಪರಿನಿಬ್ಟಾಣ ದಿನವಾದ ಡಿ. 6 ರಿಂದ ಪಂಚಶೀಲ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗವುದು. ಈ ಪಾದಯಾತ್ರೆಯು ರಾಜ್ಯದ 30 ಜಿಲ್ಲೆಗಳು, 150 ತಾಲೂಕುಗಳು, 2 ಸಾವಿರ ಹಳ್ಳಿಗಳಲ್ಲಿ ಒಟ್ಟು 7 ಸಾವಿರ ಕಿ.ಮೀ ಸಂಚರಿಸಲಿದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಎಸ್‌ಸಿ,ಎಸ್‌ಟಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ನಾಗ ಸಿದ್ದಾರ್ಥ ಹೊಲೆಯರ್‌ ಮಾತನಾಡಿ, ಬಡ್ತಿ ಮೀಸಲಾತಿ, ಮೀಸಲಾತಿ, ಪ್ರಜಾಪ್ರಭುತ್ವ ಅಪಾಯದಲ್ಲಿ ಸಿಲುಕಿದೆ. ಇಡೀ ಪ್ರಜಾಪ್ರಭುತ್ವ, ಸಂವಿಧಾನ ರಕ್ಷಣೆ ಮಾಡಿ ಅಂಬ್ಕೇಡ್ಕರ್‌ರವರ ಮಾರ್ಗದಲ್ಲಿ ನಡೆಯಬೇಕಿದೆ ಎಂದರು.

ಒಗ್ಗಟ್ಟಿನಿಂದ ಹೋರಾಡೋಣ: ಬಡ್ತಿ ಮೀಸಲಾತಿ ವಿಚಾರದಲ್ಲಿ ಕ್ರಾಂತಿಕಾರಿ, ಪ್ರತಿಕ್ರಾಂತಿಕಾರಿಗಳ ನಡುವೆ ಹೋರಾಟ ನಡೆಯುತ್ತಿದೆ. ಪ್ರತಿಕ್ರಾಂತಿಕಾರಿಗಳು ನಮ್ಮ ಸಂವಿಧಾನವನ್ನೇ ಬಳಸಿಕೊಂಡು ನಮಗೆ ತಿರುಗೇಟು ನೀಡುತ್ತಿದ್ದಾರೆ. ಬಡ್ತಿ ಮೀಸಲಾತಿ ಕೊಡದಿದ್ದರೆ ಇಡೀ ಆಡಳಿತ ವ್ಯವಸ್ಥೆಯಿಂದ ದೌರ್ಜನ್ಯವಾಗುತ್ತದೆ. ನಮ್ಮ ಹೋರಾಟದ ಫ‌ಲವಾಗಿ ಹೊಸ ಕಾಯ್ದೆ ಜಾರಿತು. ನಾವೆಲ್ಲರೂ ಒಗ್ಗಟ್ಟಿನಿಂದ ಕಾನೂನು ಹೋರಾಟ ಮೂಲಕ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕಿದೆ. ಇದಕ್ಕಾಗಿ ನಾವೆಲ್ಲರೂ ಒಂದಾಗಬೇಕಿದೆ ಎಂದರು.

ಸನ್ಮಾನ: ಜಿಪಂ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಎಸ್‌ಸಿ,ಎಸ್‌ಟಿ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಎಂ.ಎಸ್‌.ಮಾದಯ್ಯ, ಲೋಕೋಪಯೋಗಿ ಇಲಾಖೆ ನಿವೃತ್ತ ಅಧೀಕ್ಷಕ ಅಭಿಯಂತರಾದ ದೊಡ್ಡಸಿದ್ದಯ್ಯ, ಪಂಚಾಯತ್‌ ರಾಜ್‌ ಇಲಾಖೆಯ ನಿವೃತ್ತ ವ್ಯವಸ್ಥಾಪಕ ಎಸ್‌.ಸಿದ್ದಯ್ಯ ಹಾಗೂ ಇತರರನ್ನು ಸನ್ಮಾನಿಸಲಾಯಿತು.

ಚಿತ್ರದುರ್ಗ ಜಿಲ್ಲೆಯ ಪ್ರೇರಣಾ ಶಿಕ್ಷಣ ಮತ್ತು ಗ್ರಾಮೀಣ ಸಂಸ್ಥೆ ಸಂಸ್ಥಾಪಕಿ ಕೆ.ಜೆ.ಜಯಲಕ್ಷಿ¾à ಮಾತನಾಡಿದರು. ಕರ್ನಾಟಕ ಎಸ್‌ಸಿ,ಎಸ್‌ಟಿ ಸರ್ಕಾರಿ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ದಾಸ್‌ಪ್ರಕಾಶ್‌ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಮುನಿರಾಜು, ಖಜಾಂಚಿ ಕೆಂಪರಾಜು, ರಾಜ್ಯ ಪರಿ ಶಿ ಷ್ಟ ಪಂಗಡ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರ್‌, ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್‌ ಪೂರ್ಣಚಂದ್ರ ತೇಜಸ್ವಿ, ಎಇ ದೇವರಾಜಯ್ಯ, ಕೆ.ಎಂ.ರವಿಕುಮಾರ್‌, ಚಿಕ್ಕಲಿಂಗಯ್ಯ, ಎನ್‌.ನೇತ್ರಾವತಿ, ರಾಜ್ಯ ಎಸ್‌ಸಿ,ಎಸ್‌ಟಿ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಶಿವಣ್ಣ, ಎಸ್‌.ಮಹದೇವಯ್ಯ, ಶ್ರೀನಿವಾಸನಾಯಕ, ಅಧ್ಯಕ್ಷ ಲಿಂಗರಾಜು, ಪ್ರಕಾಶ್‌, ಆಲೂರುನಾಗೇಂದ್ರ, ಸುಭಾಷ್‌ ಮಾಡ್ರಳ್ಳಿ, ಕಂದಹಳ್ಳಿ ನಾರಾಯಣ, ಯರಿಯೂರು ರಾಜಣ್ಣ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next