ಲೋಕಾಪುರ: ಬಸವಾದಿ ಶರಣರ ನಾಡಿನಲ್ಲಿ, ರೈತರ ಶೋಷಣೆ, ದಬ್ಟಾಳಿಕೆಗಳು ನಿರಂತರ ನಡೆಯುತ್ತಿವೆ. ಕಬ್ಬು ಬೆಳೆಗಾರರ ಸಮಸ್ಯೆ ಆಲಿಸಲು ಸರ್ಕಾರಗಳು, ಜನಪ್ರತಿನಿಧಿಗಳು ಮತ್ತು ಆಡಳಿತ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ ಎಂದು ಜನ ಸಾಮಾನ್ಯ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ರೈತ ಮುಖಂಡ ಯಲ್ಲಪ್ಪ ಹೆಗಡೆ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ರಾಜ್ಯದಲ್ಲಿನ ರೈತರು ಪ್ರತಿ ಟನ್ ಕಬ್ಬಿಗೆ 3200-3600 ರೂ. ವರೆಗೆ ಬೆಲೆ ಪಡೆಯುತ್ತಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿನ ರೈತರಿಗೆ ಬಹುತೇಕ ಸಕ್ಕರೆ ಕಾರ್ಖಾನೆಗಳು ಕಳೆದ ವರ್ಷ ಪ್ರತಿ ಟನ್‌ಗೆ 2700 ರೂ. ನೀಡಿ ಈ ವರ್ಷ 2700 ರೂ. ನೀಡುವುದಾಗಿ ತಿಳಿಸಿ ಕಾರ್ಖಾನೆ ಪ್ರಾರಂಭಿಸಿವೆ ಎಂದರು.
ಬಾಗಲಕೋಟೆ-ವಿಜಯಪುರ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಕಳೆದ ವರ್ಷ ಪ್ರತಿ ಟನ್ ಕಬ್ಬಿಗೆ 2500 ರೂ.ನೀಡಿವೆ ಹಾಗೂ ಇನ್ನೂ ಕೆಲವು ಕಾರ್ಖಾನೆಗಳು 2500ಕ್ಕಿಂತ ಕಡಿಮೆ ಬೆಲೆ ನೀಡಿ ಕೈ ತೊಳೆದುಕೊಂಡಿವೆ. ಭರವಸೆ ನೀಡಿದಂತೆ ಪ್ರತಿ ಟನ್ ಕಬ್ಬಿಗೆ 2700 ರೂ. ನೀಡದೇ ರೈತರ ಶೋಷಣೆಗೆ ಸಕ್ಕರೆ ಕಾಖಾನೆಗಳು ಮುಂದಾಗಿವೆ ಎಂದು ಆರೋಪಿಸಿದರು.
ಈ ವರ್ಷದ ಬೆಲೆ ನಿಗದಿಯನ್ನೂ ಸಹಿತ ಕಾರ್ಖಾನೆಗಳು ಮನಬಂದಂತೆ ಬೆಲೆ ಘೋಷಿಸಿವೆ. ಇನ್ನೂ ಕೆಲವು ಕಾರ್ಖಾನೆಗಳು ಎಫ್‌ಆರ್‌ಪಿ ಬೆಲೆ ನೀಡುತ್ತಿವೆ. ರೈತರ ನ್ಯಾಯಯುತ ಬೇಡಿಕೆಗೆ ಸ್ಪಂದಿಸಿದೇ ಕಾರ್ಖಾನೆ ಪ್ರಾರಂಭಿಸಿವೆ, ಕಾಂಗ್ರೆಸ್-ಬಿಜೆಪಿ ಜನಪ್ರತಿನಿಧಿ ಗಳು ರೈತರ ನ್ಯಾಯಯುತ ಬೇಡಿಕೆಗಳ ಪರ ಧ್ವನಿ ಎತ್ತದೇ ಮೌನಕ್ಕೆ ಶರಣರಾಗಿದ್ದಾರೆ ಎಂದು ಆರೋಪಿಸಿದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ ಅವರಿಗೆ ನಾನು ವಿನಂತಿಸುತ್ತೇನೆ. ತಾವು ಕೃಷ್ಣಾ ಮೇಲ್ದಂಡೆ 3ನೇ ಹಂತ ಯೋಜನೆ ಜಾರಿಗಾಗಿ ತಮ್ಮ ನೇತೃತ್ವದಲ್ಲಿ “ಗಾಂ ಧಿ ನಡಿಗೆ ಕೃಷ್ಣೆಯ ಕಡೆಗೆ’ ಕಾರ್ಯಕ್ರಮ ಕೇವಲ 3 ದಿನಗಳಲ್ಲಿ ಆಯೋಜಿಸಿ ಜನರ ಧ್ವನಿಯಾಗಿ ಕೆಲಸ ಮಾಡಿದ್ದೀರಿ. ಅದರಂತೆಯೇ ತಮ್ಮ ನೇತೃತ್ವದಲ್ಲಿ ಬಾಡಂಗಡಿ ಸಕ್ಕರೆ ಕಾರ್ಖಾನೆ ಇದ್ದು, ತಾವು ಪ್ರತಿ ಟನ್‌ಗೆ ಕಬ್ಬಿಗೆ 3000
ರೂ. ನೀಡಿ ಇತರರಿಗೆ ಮಾದರಿಯಾಗಿ ರೈತರ ಬೇಡಿಕೆಗೆ ಸ್ಪಂದಿಸುವಂತೆ ಒತ್ತಾಯಿಸಿದರು.
ಸಚಿವ ಮುರುಗೇಶ ನಿರಾಣಿ ಸಕ್ಕರೆ ಕಾರ್ಖಾನೆಯು ಹಿಂದಿನ ಎರಡು ವರ್ಷದ ಬಾಕಿ ಹಣ ನೀಡಿಲ್ಲ. ಈ ವರ್ಷ ರೈತರಿಗೆ ನ್ಯಾಯಯುತ ಬೆಲೆ ನೀಡಲು ತಯಾರಿಲ್ಲ. ಈಗ ರೈತ ಸಮೂಹ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ. ಸಕ್ಕರೆ ಕಾರ್ಖಾನೆ ಉದ್ಯೋಗದಲ್ಲಿ ತೊಡಗಿದರವನ್ನು ಚುನಾವಣೆಯಲ್ಲಿ ಆಯ್ಕೆ ಮಾಡಿ ಕಳುಹಿಸಿದ್ದರ ಪರಿಣಾಮ ನಮ್ಮ ಶೋಷಣೆಯಾಗುತ್ತಿದೆ. ಬರುವ ಚುನಾವಣೆಗಳಲ್ಲಿ ಕಾಂಗ್ರೆಸ್-ಬಿಜೆಪಿ ಸೋಲಿಸಿ ಕಬ್ಬು ಬೆಳೆಗಾರರ ಹಿತ ಕಾಪಾಡುವ ವ್ಯಕ್ತಿಗಳನ್ನು ಆಯ್ಕೆ ಮಾಡಿ ಕಳಿಸೋಣ. ಸಕ್ಕರೆ ಕಾರ್ಖಾನೆಗಳ ನಿಯಂತ್ರಣಕ್ಕೆ ಕಾಯ್ದೆ ರೂಪಿಸಿದ್ದಾಗ ಮಾತ್ರ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.
ಈ ವೇಳೆ ಜನ ಸಾಮಾನ್ಯ ಪಕ್ಷದ ಪ್ರಧಾನ ಕಾರ್ಯದರ್ಶಿ ತುಕಾರಾಮ, ಜಿಲ್ಲಾಧ್ಯಕ್ಷ ಪ್ರಶಾಂತ ಶೆಟ್ಟರ್, ಹಣಮಂತ ನಾಯ್ಕ ಸೇರಿದಂತೆ ಇತರರು ಇದ್ದರು.