Advertisement

ಸರ್ಕಾರಿ ಸೌಲಭ್ಯ: ಮನೆ ಬಾಗಿಲಿಗೆ ಪ್ರತಿನಿಧಿಗಳು

06:00 PM Feb 15, 2022 | Team Udayavani |

ಬಾಗಲಕೋಟೆ: ಜಿಲ್ಲೆಯಾದ್ಯಂತ ಗ್ರಾಮ-1 ಯೋಜನೆ ಜಾರಿಗೊಳಿಸುತ್ತಿದ್ದು, ಈ ಯೋಜನೆಯಡಿ ಆಯ್ಕೆಗೊಂಡ ಫ್ರಾಂಚೈಸಿಗಳ ಪ್ರತಿನಿಧಿಗಳು ಪ್ರತಿಯೊಂದು ಮನೆ ಮನೆಗೆ ಭೇಟಿ ನೀಡಿ, ಜನರಿಗೆ ದೊರೆಯಬೇಕಾದ ಸೌಲಭ್ಯಗಳ ಕುರಿತು ಪಟ್ಟಿ ಮಾಡಲಿದ್ದಾರೆ ಎಂದು ಗ್ರಾಮ-1 ಯೋಜನೆಯ ನಿರ್ದೇಶಕ ವರಪ್ರಸಾದ ರಡ್ಡಿ ಹೇಳಿದರು.

Advertisement

ಜಿಲ್ಲಾಡಳಿತ ಭವನದ ನೂತನ ಸಭಾ ಭವನದಲ್ಲಿ ಸೋಮವಾರ ಗ್ರಾಮ-1 ಕೇಂದ್ರದ ಪ್ರಾಂಚೈಸಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ನಾಗರಿಕರಿಗೆ ಸರಕಾರಿ ಸೌಲಭ್ಯಗಳನ್ನು ಸುಲಭವಾಗಿ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಸರಕಾರ ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ರಾಮ-1 ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಪ್ರಾಯೋಗಿಕವಾಗಿ ಈಗಾಗಲೇ 12 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗಿದ್ದು, ಉತ್ತಮ ಸ್ಪಂದನೆ ದೊರೆತಿದೆ ಎಂದರು.

ರಾಜ್ಯದ ಉಳಿದ ಎಲ್ಲ ಜಿಲ್ಲೆಗಳಲ್ಲಿ ಗ್ರಾಮ-1 ಯೋಜನೆಯನ್ನು ಅನುಷ್ಠಾನಗೊಳಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಾಗರಿಕರಿಗೆ ವಿವಿಧ ಇಲಾಖೆಯ ಸೇವೆಗಳನ್ನು ತಮ್ಮ ಗ್ರಾಪಂ. ವ್ಯಾಪ್ತಿಯಲ್ಲಿಯೇ ನೀಡುವ ಉದ್ದೇಶ ಹೊಂದಲಾಗಿದೆ. ಗ್ರಾಮ-1 ಕೇಂದ್ರದ ಫ್ರಾಂಚೈಸಿಗಳು ನಾಗರಿಕರಿಗೆ ಉತ್ತಮ ಸೇವೆ ಒದಗಿಸುವ ಕೆಲಸವಾಗಬೇಕು.

ಸರಕಾರ ನಿಗದಿಪಡಿಸಿದ ದರ ಹೊರತು ಪಡಿಸಿ ಹೆಚ್ಚಿನದ ದರ ಪಡೆಯಲು ಅವಕಾಶವಿರುವದಿಲ್ಲ. ಈ ಬಗ್ಗೆ ದೂರುಗಳನ್ನು ಬಂದಲ್ಲಿ ಅಂತಹ ಫ್ರಾಂಚೈಸಿಗಳ ಅನುಮತಿಯನ್ನು ರದ್ದುಪಡಿಸಲಾಗುತ್ತಿದೆ ಎಂದು ಹೇಳಿದರು.

Advertisement

ಜಿಲ್ಲೆಯಲ್ಲಿ ಆಯ್ಕೆಯಾದ 206 ಫ್ರಾಂಚೈಸಿಗಳು ಪ್ರಥಮವಾಗಿ 2-3 ದಿನಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಿಗಬೇಕಾದ ಸೌಲಭ್ಯಗಳ ಪಟ್ಟಿಯನ್ನು ಮಾಡಿಕೊಳ್ಳಬೇಕು. ಅವರಿಗೆ ಯಾವ ಯಾವ ಸೌಲಭ್ಯಗಳು ನೀಡಬಹುದೆಂಬುದನ್ನು ಒಂದು ಮೈಕ್ರೋ ಪ್ಲಾನ್‌ ಮಾಡಿಕೊಳ್ಳಬೇಕು ಎಂದರು. ಇದರಿಂದ ತಮಗೆ ಬರುವ ಆದಾಯವನ್ನು ಸಹ ಲೆಕ್ಕಾಚಾರ ಮಾಡಬಹುದಾಗಿದೆ. ಆದ್ದರಿಂದ ನ್ಯಾಯಬದ್ಧವಾಗಿ ಕೆಲಸ ನಿರ್ವಹಿಸುವ ಮೂಲಕ ಸರಕಾರಿ ಸೌಲಭ್ಯ ನಾಗರಿಕರಿಗೆ ಒದಗಿಸುವ ಕಾರ್ಯ ಮಾಡಬೇಕು ಎಂದರು.

ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ|ಕೆ.ರಾಜೇಂದ್ರ ಮಾತನಾಡಿ, ಸರಕಾರಿ ಸೇವೆಗಳನ್ನು ಪಡೆಯಲು ನಾಗರಿಕರು ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಮನೆ ಬಾಗಲಿಗೆ ಸೌಲಭ್ಯ ಒದಗಿಸಲು ಗ್ರಾಮ-1 ಯೋಜನೆ ಸರಕಾರ ಜಾರಿಗೆ ತಂದಿದೆ. 798 ಸೌಲಭ್ಯಗಳನ್ನು ಈ ಯೋಜನೆಯಿಂದ  ಪಡೆಯಬಹುದಾಗಿದೆ. ಸರಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣ ಪಡೆಯುವಂತಿಲ್ಲ. ಪಡೆದಲ್ಲಿ ಅವರ ಮೇಲೆ ಕ್ರಮವಹಿಸುವುದರ ಜತೆಗೆ ಫ್ರಾಂಚೈಸಿಯನ್ನು ರದ್ದುಪಡಿಸುವ ಅಧಿಕಾರವು ಸಹ ಇದೆ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಗ್ರಾಮ-1 ಯೋಜನೆಯ ಜಿಲ್ಲಾ ವ್ಯವಸ್ಥಾಪಕ ಸ್ವಾಗತ ಗುಡಗುಡಿ ಸೇರಿದಂತೆ ಜಿಲ್ಲೆಯಲ್ಲಿ ಆಯ್ಕೆಯಾದ 206 ಫ್ರಾಂಚೈಸಿಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next