ಹೊಸದಿಲ್ಲಿ: ಆನ್‌ಲೈನ್ ಮಾರಾಟ ತಾಣಗಳು ಹಬ್ಬದ ಮಾರಾಟದ ವೇಳೆ ಭಾರೀ ಡಿಸ್ಕೌಂಟ್ ನೀಡಿ ನಿಯಮಾವಳಿಗಳನ್ನು ಉಲ್ಲಂಘಿಸುತ್ತಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಅವುಗಳ ಮೇಲೆ ಕೇಂದ್ರ ಸರಕಾರ ಕಣ್ಣಿಟ್ಟಿದೆ. ಮಾರಾಟ ತಾಣಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಹಬ್ಬದ ಮಾರಾಟ ಹೆಸರಿನಲ್ಲಿ ಮಿತಿಗಿಂತ ಹೆಚ್ಚು ಕಡಿಮೆ ದರಕ್ಕೆ ಸರಕುಗಳನ್ನು ಮಾರಾಟ ಮಾಡುತ್ತಿದ್ದು ಇದರಿಂದ ಸಮಸ್ಯೆಯಾಗುತ್ತಿದೆ ಎಂಬ ಆರೋಪ ಚಿಲ್ಲರೆ ಮಾರಾಟಗಾರರದ್ದಾಗಿದೆ.
ಕಳೆದ ಫೆಬ್ರವರಿಯಲ್ಲಿ ಭಾರತಾದ್ಯಂತ ಚಿಲ್ಲರೆ ಮಾರಾಟದಲ್ಲಿ ತೊಡಗಿರುವ 13 ಕೋಟಿ ಮಂದಿಯ ಹಿತಾಸಕ್ತಿಯ ಅನ್ವಯ ಹೊಸ ನಿಯಮವನ್ನು ಕೇಂದ್ರ ಸರಕಾರ ಜಾರಿಗೊಳಿಸಿದ್ದು, ಭಾರೀ ದರ ಕಡಿತ ಮಾರಾಟದಿಂದ ರಕ್ಷಿಸುವ ಉದ್ದೇಶ ಹೊಂದಿತ್ತು. ದರ ಕಡಿತ ಮಾರಾಟದಿಂದ ಸಣ್ಣ ವ್ಯಾಪಾರಿಗಳಿಗೆ ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಅಂತರ್ಜಾಲ ಮಾರಾಟ ತಾಣಗಳಿಗೆ ಮೂಗುದಾರ ಹಾಕಲು ಉದ್ದೇಶಿಸಿದ ಬೆನ್ನಲ್ಲೇ ಅಮೆರಿಕದಿಂದ ಇದಕ್ಕೆ ಆಕ್ಷೇಪ ವ್ಯಕ್ತವಾಗಿದ್ದು, ದಿಲ್ಲಿ-ವಾಷಿಂಗ್ಟನ್ ನಡುವಿನ ಮಾರಾಟ ಒಪ್ಪಂದಗಳ ಮೇಲೆ ಪರಿಣಾಮ ಬೀರಿತ್ತು.
ಅಮೆಜಾನ್, ಫ್ಲಿಪ್‌ಕಾರ್ಟ್‌ಗಳು ನಾವು ಸರಕಾರದ ನಿಯಮದಂತೆಯೇ ವ್ಯಾಪಾರ ನಡೆಸುತ್ತಿದ್ದೇವೆ ಎಂದು ಹೇಳಿದರೂ ಚಿಲ್ಲರೆ ಮಾರಾಟಗಾರರು ಇದರ ವಿರುದ್ಧ ಕಿಡಿಕಾರಿದ್ದರು.
ಸದ್ಯ ಮಾರಾಟ ತಾಣಗಳ ವಿರುದ್ಧ ದಾಖಲಾದ ದೂರುಗಳ ಕುರಿತಾಗಿ ಮತ್ತು ಅಖೀಲ ಭಾರತೀಯ ಮಾರಾಟಗಾರರ ಒಕ್ಕೂಟ (ಸಿಎಐಟಿ) ಸಲ್ಲಿಸಿದ ಸಾಕ್ಷ್ಯಗಳನ್ನು ಕೇಂದ್ರ ಸರಕಾರ ಪರಿಶೀಲಿಸುತ್ತಿದೆ ಎನ್ನಲಾಗಿದೆ. ಎರಡೂ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳುವದನ್ನು ಕೇಂದ್ರದ ಅಧಿಕಾರಿಗಳು ತಳ್ಳಿಹಾಕಿದ್ದರೂ, ಎರಡೂ ಕಂಪೆನಿಗಳ ಅಧಿಕೃತ ವ್ಯಕ್ತಿಗಳಿಗೆ ಸಮನ್ಸ್ ಜಾರಿಮಾಡಲಾಗಿದೆ.
ಇದೇ ವೇಳೆ ಭಾರೀ ದರ ಕಡಿತ ಮಾರಾಟದಿಂದಾಗಿ ಗ್ರಾಹಕರು ಆನ್‌ಲೈನ್ ಖರೀದಿಗೆ ಮುಂದಾಗುತ್ತಾರೆ. ಹಬ್ಬದ ಸಮಯದಲ್ಲಿ ಸಾಮಾನ್ಯ ಅಂಗಡಿಯವರಿಗೆ ಇದರಿಂದ ಶೇ.30ರಿಂದ ಶೇ.40ರಷ್ಟು ಮಾರಾಟ ಕಡಿಮೆಯಾಗಿದೆ ಎಂದು ಒಕ್ಕೂಟದ ಮುಖ್ಯ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಹೇಳಿದ್ದಾರೆ.