ಅಂಕೋಲಾ: ಪ್ರತಿಯೊಂದು ಮಗುವೂ ಚೆನ್ನಾಗಿ ಕಲಿಯುತ್ತಿದೆ ಎನ್ನುವ ಧ್ಯೇಯ ವಾಕ್ಯದೊಂದಿಗೆ ಗುಣಮಟ್ಟದ ಮತ್ತು ಉತ್ಕೃಷ್ಟ ಶಿಕ್ಷಣ ನೀಡಲು ಈ ವರ್ಷದಿಂದಲೇ ತಾಲೂಕಿನ ಅಗಸೂರಿನಲ್ಲಿ ಸರಕಾರಿ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾರಂಭವಾಗಿದೆ.
ಸರಕಾರಿ ಶಾಲೆಗಳಿಗೆ ಸೇರುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಂಟುತ್ತಾ ಸಾಗಿದ್ದು ಒಂದೇ ಸೂರಿನಡಿ ಎಲ್ಕೆಜಿ ಮತ್ತು 1ರಿಂದ 12ನೇ ತರಗತಿವರೆಗೆ ಆಂಗ್ಲ ಮಾಧ್ಯಮದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಇಲಾಖೆ ಕೆಪಿ ಸ್ಕೂಲ್ ಅಗಸೂರಿನಲ್ಲಿ ಆರಂಭಿಸಿದೆ. ಜಿಲ್ಲೆಯಲ್ಲಿ ಈ ಕೆಪಿ ಸ್ಕೂಲ್ ಆರಂಭಕ್ಕೆ ಸರ್ವೇ ನಡೆಸಿದಾಗ ಅಗಸೂರು ಸ್ಕೂಲ್ ಜಿಲ್ಲೆಯಲ್ಲಿ ಪ್ರಥಮ ಕೆಪಿ ಸ್ಕೂಲ್ಆಗಿ ಗುರುತಿಸಿಕೊಂಡಿದೆ.
ಈಗಾಗಲೇ ಶಿಕ್ಷಕರು ಸುತ್ತಮುತ್ತಲ ಹಳ್ಳಿಗಳಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಶಿರಗುಂಜಿ, ವಾಸರ್‌ಕುದ್ರಿಗೆ, ಹೊನ್ನಳ್ಳಿ, ಮಾಸ್ತಿಕಟ್ಟೆ, ಬಾಳೇಗುಳಿ ಅನೇಕ ಹಳ್ಳಿಗಳಿಂದ ಪಾಲಕರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಗ್ರಾಮೀಣ ಭಾಗಗಳಲ್ಲಿ ಶಾಲೆಯ ಮೂಲ ಸೌಕರ್ಯಗಳ ಅಭಿವೃದ್ಧಿ, ಶಿಕ್ಷಕರ ಬೋಧನಾ ಸಾಮರ್ಥ್ಯ ವೃದ್ಧಿ ಆಗಬೇಕಿದೆ.
ಈ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಕೊಠಡಿ, ಸುಸಜ್ಜಿತ ಪ್ರಯೋಗಾಲಯ, ಪ್ರತ್ಯೇಕ ಕಂಪ್ಯೂಟರ್ ಲ್ಯಾಬ್ ಮತ್ತು ಗ್ರಂಥಾಲಯ, ಶುದ್ಧ ಕುಡಿಯುವ ನೀರು, ಆಟದ ಮೈದಾನ, ಬಾಲಕರು ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇರುತ್ತದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಶಾಲಾ ಹಂತದಲ್ಲೇ ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿಗೊಳಿಸಲಾಗುತ್ತದೆ. ವೃತ್ತಿ ಶಿಕ್ಷಣ, ಕಲೆ, ಸಂಗೀತ ಇತ್ಯಾದಿ ಸಹ ಪಠ್ಯ ಚಟುವಟಿಕೆಗಳಿಗೆ ತರಬೇತಿ ನೀಡಲಿದ್ದಾರೆ.
ನಮ್ಮೂರ ಹಳ್ಳಿಯ ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮ ಶಿಕ್ಷಣ ಪಡೆಯುವಂತಾಗಬೇಕು. ಈ ವರ್ಷದಿಂದ ಪ್ರಾರಂಭವಾಗುವ ಎಲ್ಕೆಜಿಗೆ 30 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ.
• ಐ.ಬಿ ಪೂಜಾರಿ,ಪ್ರಾಚಾರ್ಯರು ಕೆ.ಪಿ ಸ್ಕೂಲ್ ಅಗಸೂರು