Advertisement

Government Encourge: ಜ.1ರಿಂದ ಕಲಾವಿದರ ಮಾಸಾಶನ 3 ಸಾವಿರ ರೂ. ಏರಿಕೆ: ಸಚಿವ

03:44 AM Oct 30, 2024 | Team Udayavani |

ಬೆಂಗಳೂರು: ಕನ್ನಡ ಭಾಷೆ ನೆಲ ಜಲ, ಸಂಸ್ಕೃತಿ, ಆಚಾರ-ವಿಚಾರ, ಸಂರಕ್ಷಣೆಯ ವಿಚಾರದಲ್ಲಿ ಸರಕಾರ ವಿಶೇಷ ಕಾಳಜಿ ತೋರಿದೆ. ನಾಡಿನ ಕಲಾವಿದರು ಮತ್ತು ಕಲೆಗಳಿಗೆ ವಿಶೇಷ ಪ್ರೋತ್ಸಾಹ ನೀಡುತ್ತಿದ್ದು, ಮುಂದಿನ ವರ್ಷದಿಂದ ಕಲಾವಿದರಿಗೆ ನೀಡಲಾಗುವ ಮಾಸಾಶನದ ಮೊತ್ತವನ್ನು 3 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್‌ ತಂಗಡಗಿ ಹೇಳಿದರು.

Advertisement

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಧಕರಿಗೆ “ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಅನುದಾನ ನೀಡಲು ಯಾವುದೇ ಹಣಕಾಸಿನ ಕೊರತೆ ಇಲ್ಲ. ಪ್ರತಿಯೊಂದು ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೂ ಚಟುವಟಿಕೆಗಳನ್ನು ನಡೆಸುವ ಸಲುವಾಗಿ 1 ಕೋಟಿ ರೂ. ವರೆಗೂ ಅನುದಾನ ಒದಗಿಸಲಾಗುತ್ತಿದೆ. ಕಾರ್ಯಕ್ರಮದ ಕುರಿತು ಪ್ರಸ್ತಾವನೆ ಸಲ್ಲಿಸಿದರೆ, ಅದಕ್ಕೆ ಬೇಕಾದ ಅಗತ್ಯದ ಅನುದಾನ ನೀಡಲಾಗುತ್ತಿದೆ ಎಂದರು.

ಕರ್ನಾಟಕ ಎಂದು ಹೆಸರಿಟ್ಟು 50 ವರ್ಷ ತುಂಬಿರುವ ಈ ಸಂಭ್ರಮದಲ್ಲಿ ನಾನು ಇಲಾಖೆಯ ಸಚಿವನಾಗಿರುವುದು ನನ್ನ ಭಾಗ್ಯ. ಸುವರ್ಣ ಸಂಭ್ರಮದ ರಥ ಇಡೀ ರಾಜ್ಯದ ಮೂಲೆ ಮೂಲೆಗಳನ್ನು ಸಂಚರಿಸುತ್ತಿದೆ. ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನವೆಂಬರ್‌ 1ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ 50 ಪುರುಷ ಹಾಗೂ ಮಹಿಳಾ ಸಾಧಕರಿಗೆ ಸುವರ್ಣ ಸಂಭ್ರಮ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.

ತೀರ್ಪು ಶ್ಲಾಘನೀಯ
ಕರ್ನಾಟಕದಲ್ಲಿ ವ್ಯಾಪಾರ, ವ್ಯವಹಾರ ಮಾಡುತ್ತಿದ್ದೀರಿ ಎಂದರೆ ಶೇ. 60 ಕನ್ನಡ ನಾಮಫಲಕ ಅಳವಡಿಸಬೇಕು ಎಂದು ಸ್ಪಷ್ಟವಾಗಿ ಕೋರ್ಟ್‌ ಹೇಳಿದೆ. ಶೇ. 60ರಷ್ಟು ಕನ್ನಡ ಬಳಕೆ ಮಾಡಬೇಕೆಂಬ ಪ್ರಶ್ನಿಸಿ ಕೆಲ ವಾಣಿಜ್ಯ ಸಂಸ್ಥೆಗಳು ಕೋರ್ಟ್‌ ಮೆಟ್ಟಿಲೇರಿದ್ದವು. ಆದರೆ ನ್ಯಾಯಾಲಯ ನೀವು ಕರ್ನಾಟಕದಲ್ಲಿದ್ದ ಮೇಲೆ ಸೂಚನಾ ಫಲಕಗಳನ್ನು ಕನ್ನಡದಲ್ಲಿ ಪ್ರದರ್ಶಿಸಬೇಕು ಎಂದು ಹೇಳಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

ಬಿಜೆಪಿ ಸರಕಾರದಲ್ಲಿ ಅಕಾಡೆಮಿ ನಿಷ್ಕ್ರಿಯ: ಸಚಿವ
ಬಿಜೆಪಿ ಸರಕಾರದ ಅವಧಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ಅಕಾಡೆಮಿಗಳು ಮತ್ತು ಪ್ರಾಧಿಕಾರಗಳು ಸಂಪೂರ್ಣ ನಿಷ್ಕ್ರಿಯವಾಗಿದ್ದವು. ಆದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ ಅನಂತರ 14 ಅಕಾಡೆಮಿ ಮತ್ತು 4 ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನು ನೇಮಿಸುವ ಮೂಲಕ ನಾಡಿನ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ವೇಗ ನೀಡಲಾಗಿದೆ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next