Advertisement

Government Employees: ಸದನದಲ್ಲಿ ವೇತನ ಪರಿಷ್ಕರಣೆ ಮಾಹಿತಿ ಬಿಚ್ಚಿಟ್ಟ ಸಿದ್ದರಾಮಯ್ಯ

12:48 AM Jul 17, 2024 | Team Udayavani |

ಬೆಂಗಳೂರು: ರಾಜ್ಯ ಸರಕಾರಿ ನೌಕರರು ಹಾಗೂ ನಿವೃತ್ತ ನೌಕರರ ವೇತನ ಹಾಗೂ ಪಿಂಚಣಿ ಪರಿಷ್ಕರಣೆ ಬಗ್ಗೆ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ವಿಧಾನಸಭೆಯಲ್ಲಿ ಪ್ರಕಟಿಸಿದ್ದಾರೆ.

Advertisement

ಇದರಿಂದ ಸರಕಾರದ ಬೊಕ್ಕಸಕ್ಕೆ ವಾರ್ಷಿಕ 20,208 ಕೋಟಿ ರೂ. ಹೆಚ್ಚುವರಿ ವೆಚ್ಚವಾಗುತ್ತದೆ. ಈ ಹೆಚ್ಚುವರಿ ವೆಚ್ಚಕ್ಕೆ 2024-25ರ ಆಯವ್ಯಯದಲ್ಲಿ ಅಗತ್ಯ ಅನುದಾನ ಮೀಸಲಿಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು. ಆಡಳಿತ ಪಕ್ಷದ ಸದಸ್ಯರು ಮೇಜುಕುಟ್ಟಿ ಸ್ವಾಗತಿಸಿದರು.

ಪರಿಷ್ಕರಣೆ ಹೇಗೆ?
 ರಾಜ್ಯ ಸರಕಾರಿ ನೌಕರರ ವೇತನ ಭತ್ತೆ, ಪಿಂಚಣಿ ಪರಿಷ್ಕರಣೆ ಬೇಡಿಕೆ ಪರಿಷ್ಕರಿಸಲು 2022ರ ನವೆಂಬರ್‌ 19ರಂದು 7ನೇ ರಾಜ್ಯ ವೇತನ ಆಯೋಗ ರಚಿಸಲಾಗಿತ್ತು. 2024ರ ಮಾ. 24ರಂದು ವರದಿ ಸ್ವೀಕಾರವಾಗಿತ್ತು.

 7ನೇ ವೇತನ ಆಯೋಗದ ಶಿಫಾರಸಿನಂತೆ ಸರಕಾರಿ ನೌಕರರರ ವೇತನ, ವೇತನ ಸಂಬಂಧಿತ ಭತ್ತೆ, ಪಿಂಚಣಿಯನ್ನು 2024ರ ಆಗಸ್ಟ್‌ 1ರಿಂದ ಅನ್ವಯವಾಗುವಂತೆ ಜುಲೈ 15ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

 2024ರ ಜುಲೈ 1ರಿಂದ ನೌಕರರ ಮೂಲ ವೇತನಕ್ಕೆ ಶೇ.31ರಷ್ಟು ತುಟ್ಟಿಭತ್ಯೆ ಮತ್ತು ಶೇ. 27.50ರಷ್ಟು ಫಿಟ್‌ಮೆಂಟ್‌ ಸೇರಿಸಿ ವೇತನ ಮತ್ತು ಪಿಂಚಣಿ ಪರಿಷ್ಕರಣೆ.

Advertisement

 ನೌಕರರ ಮೂಲ ವೇತನ ಮತ್ತು ಪಿಂಚಣಿಯಲ್ಲಿ ಶೇ.58.50ರಷ್ಟು ಹೆಚ್ಚಳವಾಗುತ್ತದೆ. ಮನೆ ಬಾಡಿಗೆ ಭತ್ಯೆಯಲ್ಲಿ ಶೇ.32ರಷ್ಟು ಹೆಚ್ಚಳವಾಗುತ್ತದೆ.

 ನೌಕರರ ಕನಿಷ್ಠ ಮೂಲ ವೇತನವು 17 ಸಾವಿರದಿಂದ 27 ಸಾವಿರಕ್ಕೆ ಗರಿಷ್ಟ ವೇತನವು 1,50,000ದಿಂದ 2,41,200 ರೂ.ಗಳಿಗೆ ಪರಿಷ್ಕರಣೆ

 ನೌಕರರ ಕನಿಷ್ಠ ಪಿಂಚಣಿ 8,500 ರೂ.ನಿಂದ 13,500 ರೂ.ಗೆ ಮತ್ತು ಗರಿಷ್ಠ ಪಿಂಚಣಿ 75,300ರಿಂದ 75,300ರಿಂದ 1,20,600 ರೂ.ಗೆ ಪರಿಷ್ಕರಣೆ.

 ಈ ಪರಿಷ್ಕರಣೆಯು ಅನುದಾನಿತ ಶಿಕ್ಷಣ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆಗಳ ನೌಕರರು, ವಿಶ್ವವಿದ್ಯಾನಿಲಯಗಳ ಬೋಧಕೇತರ ಸಿಬಂದಿಗೂ ಅನ್ವಯ.

ಸರಕಾರಿ ನೌಕರರ ವರ್ಗ ಅವಧಿ ಜು. 31ರ ವರೆಗೆ ವಿಸ್ತರಣೆ
ಸರಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ಮತ್ತೂಮ್ಮೆ ವಿಸ್ತರಿಸಲಾಗಿದ್ದು, ಜುಲೈ 31ರ ವರೆಗೆ ಅವಕಾಶ ನೀಡಲಾಗಿದೆ. ನಿಗದಿಯಂತೆ ಜುಲೈ 9ರಂದು ಕೊನೆಗೊಳ್ಳಬೇಕಿದ್ದ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆಯನ್ನು ಜು. 15ರ ವರೆಗೆ ವಿಸ್ತರಿಸಲಾಗಿತ್ತು. ಇದೀಗ ಈ ತಿಂಗಳ ಅಂತ್ಯದವರೆಗೆ ವಿಸ್ತರಿಸಲಾಗಿದೆ. ಆಯಾ ಇಲಾಖಾ ಸಚಿವರಿಗೆ ನೀಡಿದ್ದ ವರ್ಗಾವಣೆ ಅಧಿಕಾರವೂ ಜು. 31ರ ವರೆಗೆ ವಿಸ್ತರಣೆಯಾದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next