ಹಾವೇರಿ: ಒಡೆದ ಹೆಂಚುಗಳು, ಬಿರುಕು ಬಿಟ್ಟ ಮನೆ ಗೋಡೆ, ಜರಡಿಯಂತಾದ ಛಾವಣಿಯಿಂದ ಮಳೆ ಬಂದಾಗಲೆಲ್ಲ ನೀರು ಸೋರುವುದು, ಇದನ್ನು ತಪ್ಪಿಸಲು ಮನೆತುಂಬ ಪಾತ್ರೆಗಳನ್ನಿಟ್ಟು ನೀರು ಹಿಡಿಯುವ ಕೆಲಸದಲ್ಲಿ ನಿರತರಾಗುವ ಮನೆ ಮಂದಿ….ಅಷ್ಟಕ್ಕೂ ಇದು ಯಾವುದೋ ಗುಡಿಸಿಲಿನ ದುಸ್ಥಿತಿಯಲ್ಲ; ಸರ್ಕಾರಿ ನೌಕರರ ವಸತಿ ಗೃಹಗಳ ದಯನೀಯ ಸ್ಥಿತಿ.!
ಇದು ಆಶ್ಚರ್ಯ ಎನಿಸಿದರೂ ಕಹಿಸತ್ಯ. ದೀಪದ ಕೆಳಗೆ ಕತ್ತಲೆ ಎನ್ನುವ ಗಾದೆಯಂತೆ ಸ್ಥಳೀಯ ವಿದ್ಯಾ ನಗರದಲ್ಲಿರುವ ಲೋಕೋಪಯೋಗಿ ಇಲಾಖೆ ಸೇರಿದ ವಸತಿ ಗೃಹಗಳು ನಿರ್ವಹಣೆ ಕೊರತೆಯಿಂದ ನೌಕರರು ಇಂಥ ಹಾಳಾದ ಮನೆಗಳಲ್ಲಿಯೇ ಬದುಕು ಸಾಗಿಸುತ್ತಿದ್ದಾರೆ.
ಹೆಂಚು ಒಡೆದಿರುವುದರಿಂದ ಮೇಲೆ ಸ್ವಂತ ಖರ್ಚಿನಲ್ಲಿ ಪ್ಲಾಸ್ಟಿಕ್ ಹೊದಿಕೆ ಹಾಕಿಕೊಂಡು, ಸಣ್ಣ ಪುಟ್ಟ ದುರಸ್ತಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹಂಚಿಕೆಯಾಗದ ಮನೆಗಳಂತೂ ಪಾಳುಬಿದ್ದು ಮನೆ ತುಂಬ ಜೇಡರ ಬಲೆ, ಧೂಳು ತುಂಬಿಕೊಂಡಿದೆ. ಮನೆ ಸುತ್ತ ಆಳೆತ್ತರ ಗಿಡ-ಗಂಟಿ, ಪೊದೆ ಬೆಳೆದು ವಿಷಜಂತುಗಳ ಆವಾಸ ಸ್ಥಾನವಾಗಿದೆ. ಇಂಥ ಮನೆಯಗಳ ಪಕ್ಕದವರು ನಿತ್ಯ ವಿಷಜಂತುಗಳು ಕಚ್ಚುವ ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.
ಅಭಿವೃದ್ಧಿಗೆ ಉದಾಸೀನ: ವಸತಿಗೃಹಗಳನ್ನು ನಿರ್ಮಿಸಿ ಸುಮಾರು 50ರಿಂದ 60 ವರ್ಷಗಳಾಗಿದ್ದು, ಹೆಂಚುಗಳು ಒಡೆದು ಹೋಗಿವೆ. ಇದರಿಂದಾಗಿ ಮಳೆಗಾಲದ ಸಂದರ್ಭದಲ್ಲಿ ಮನೆಗಳು ಸೋರುತ್ತಿವೆ. ಈಗಂತೂ ನಿತ್ಯ ಸಂಜೆ ಮಳೆ ಸುರಿಯುತ್ತಿದ್ದು ಮಳೆ ನೀರು ಸೋರುವಲ್ಲಿ ಪಾತ್ರೆಗಳನ್ನು ಇಡುವುದು ಸಾಮಾನ್ಯವಾಗಿದೆ. ವಸತಿ ಗೃಹಗಳಿಗೆ ವಿದ್ಯುದೀಕರಣ ಮಾಡಿ ಸುಮಾರು ವರ್ಷಗಳೇ ಕಳೆದಿದ್ದು, ಅಲ್ಲಲ್ಲಿ ತಂತಿಗಳು ತುಂಡುಗಳಾಗಿವೆ. ಪಿಡಬ್ಲ್ಯೂ ಡಿ ಇಲಾಖೆ ವಸತಿ ನಿಲಯಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡದೇ ಇಲಾಖೆ ದಿವ್ಯ ನಿರ್ಲಕ್ಷ್ಯ ತೋರಿದ್ದು ವಸತಿ ಗೃಹಗಳ ನಿವಾಸಿಗರು ತೊಂದರೆ ಅನುಭವಿಸುವಂತಾಗಿದೆ.
ಅನುದಾನ ದುರ್ಬಳಕೆ: ವಸತಿ ಗೃಹಗಳ ಪ್ರತಿಯೊಂದು ಮನೆಗಳಿಗೆ ಸುಣ್ಣ, ಬಣ್ಣ, ವಿದ್ಯುತ್, ಒಡೆದ ಹೆಂಚುಗಳ ನಿರ್ವಹಣೆಗೆ ವರ್ಷಕ್ಕೆ ಇಂತಿಷ್ಟು ಅನುದಾನವನ್ನು ನೀಡಲಾಗುತ್ತದೆ. ಆದರೆ, ಗುತ್ತಿಗೆದಾರರು ಅನುದಾನವನ್ನು ಸಮರ್ಪಕ ಬಳಕೆ ಮಾಡದೇ ಕೆಲವೊಂದು ಮನೆಗಳಿಗೆ ಮಾತ್ರ ಸುಣ್ಣ, ಬಣ್ಣ ಬಳೆದು ಕೈತೊಳೆದುಕೊಳ್ಳುತ್ತಿದ್ದಾರೆ. ಉಳಿದ ವಸತಿ ಗೃಹಗಳ ದುರಸ್ತಿ ಕಾರ್ಯಕ್ಕೆ ಅನುದಾನದ ಕೊರತೆಯಿದ್ದು, ಮುಂದಿನ ವರ್ಷ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು ಎಂಬ ಉತ್ತರ ನೀಡುತ್ತಾರೆ ಎಂಬುದು ವಸತಿ ಗೃಹಗಳ ನಿವಾಸಿಗಳ ಆರೋಪ. ಒಟ್ಟಾರೆ ಸರ್ಕಾರಿ ನೌಕರರಿಗಾಗಿ ಇರುವ ವಸತಿ ಗೃಹಗಳನ್ನು ಸಮರ್ಪಕವಾಗಿ ದುರಸ್ತಿಗೊಳಿಸಿ, ಮೂಲಸೌಲಭ್ಯ ಕಲ್ಪಿಸಿ ಅನುಕೂಲ ಮಾಡಿಕೊಡಬೇಕು ಎಂಬುದು ವಸತಿ ಗೃಹಗಳಲ್ಲಿ ವಾಸವಿರುವ ನೌಕರ, ಸಿಬ್ಬಂದಿಗಳ ಆಗ್ರಹವಾಗಿದೆ.