Advertisement

ಸರ್ಕಾರಿ ನೌಕರರು-ಪದವೀಧರರಿಗೆ ಸ್ಪಂದಿಸಿದ್ದೇ ಜೆಡಿಎಸ್‌

09:48 AM Jun 04, 2018 | Team Udayavani |

ಕಲಬುರಗಿ: ಸರ್ಕಾರಿ ನೌಕರರಿಗೆ ಹಾಗೂ ಪದವೀಧರರಿಗೆ ಹೆಚ್ಚು ಸ್ಪಂದಿಸಿದ್ದೇ ಜೆಡಿಎಸ್‌ ಪಕ್ಷವೆಂದು ವಿಧಾನ ಪರಿಷತ್‌ ಹಿರಿಯ ಸದಸ್ಯ ಹಾಗೂ ಪಕ್ಷದ ಮುಖಂಡ ಬಸವರಾಜ ಹೊರಟ್ಟಿ ಹೇಳಿದರು.

Advertisement

ರವಿವಾರ ನಗರದ ಭಾವಸಾರ ಕ್ಷತ್ರೀಯ ಸಮಾಜ ಭವನದಲ್ಲಿ ಈಶಾನ್ಯ ಪದವೀಧರ ಮತಕ್ಷೇತ್ರದ ಜೆಡಿಎಸ್‌ ಪಕ್ಷದ ಅಭ್ಯರ್ಥಿ ಪ್ರತಾಪರೆಡ್ಡಿ ಪರವಾಗಿ ನಡೆದ ಪದವೀಧರ ಹಾಗೂ ನೌಕರರ ಸಂವಾದ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. 

ಎಚ್‌.ಜಿ.ಗೋವಿಂದೇಗೌಡ ಶಿಕ್ಷಣ ಸಚಿವರಾಗಿದ್ದಾಗ ಒಂದು ಲಕ್ಷ ಶಿಕ್ಷಕರನ್ನು ನೇಮಕ ಮಾಡಿದ್ದರು. ನೌಕರರ ವರ್ಗಾವಣೆ ನೀತಿ ಜಾರಿಗೆ ತಂದಿದ್ದರು. ಕಾಲ್ಪನಿಕ ವೇತನ ತಾರತಮ್ಯ ನಿವಾರಣೆ ಸಂಬಂಧ ತಮ್ಮ ನೇತೃತ್ವದಲ್ಲಿ ರಚಿಸಲಾದ ಸಮಿತಿ ವರದಿ ನೀಡಿತ್ತು. ನಾನು ಶಿಕ್ಷಣಕ್ಕಾಗಿ ಸಚಿವನಾಗಿದ್ದಾಗ ಅತಿ ಹೆಚ್ಚಿನ ಪ್ರೌಢ ಶಾಲೆ ಹಾಗೂ ಜ್ಯೂನಿಯರ್‌ ಕಾಲೇಜುಗಳನ್ನು ನೀಡಿರುವುದು ಎಲ್ಲರಿಗೂ ಗೊತ್ತಿರುವ ವಿಷಯ ಎಂದರು.

ಪದವೀಧರರು ಹಾಗೂ ಸರ್ಕಾರಿ ನೌಕರರು ಈಗ ಎದುರಿಸುತ್ತಿರುವ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ ಪರಿಹರಿಸುವ ಶಕ್ತಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗಿದೆ. ಹೀಗಾಗಿ ಈ ಸಲ ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಎನ್‌. ಪ್ರತಾಪರೆಡ್ಡಿ ಅವರನ್ನು ಮತದಾರರು ಗೆಲ್ಲಿಸುವ ವಿಶ್ವಾಸವಿದೆ ಎಂದು ನುಡಿದರು.

ಶಾಸಕ ಶ್ರೀಕಂಠೇಗೌಡ ಮಾತನಾಡಿ, ಜೂನ್‌ 8ರಂದು ನಡೆಯುವ 6 ಮೇಲ್ಮನೆ ಸ್ಥಾನಗಳ ಚುನಾವಣೆಯಲ್ಲಿ ಜೆಡಿಎಸ್‌ ಐದು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ಈ ಕ್ಷೇತ್ರದ ಮತದಾರರು ಪ್ರತಾಪರೆಡ್ಡಿ ಅವರನ್ನು ಗೆಲ್ಲಿಸುವ ಮುಖಾಂತರ ತಮ್ಮ ಸಮಸ್ಯೆಗಳ ನಿವಾರಣೆಗೆ ಅವಕಾಶ ಮಾಡಿಕೊಡಬೇಕೆಂದು ವಿನಂತಿಸಿದರು.

Advertisement

ಅಭ್ಯರ್ಥಿ ಎನ್‌. ಪ್ರತಾಪರೆಡ್ಡಿ ಮಾತನಾಡಿ, ಮತದಾರರ ಸಮಸ್ಯೆ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿರುವೆ. ಹೀಗಾಗಿ ಸೇವೆಗೊಂದು ಅವಕಾಶ ನೀಡಬೇಕೆಂದು ಮನವಿ ಮಾಡಿದರು.

ಜೆಡಿಎಸ್‌ ಜಿಲ್ಲಾಧ್ಯಕ್ಷ ಬಸವರಾಜ ತಡಕಲ್‌, ಮಹಾಪ್ರಧಾನ ಕಾರ್ಯದರ್ಶಿ ದೇವೇಗೌಡ ತೆಲ್ಲೂರ, ಪಕ್ಷದ ಮುಖಂಡರಾದ ರಾಜೇಂದ್ರ ವಿ. ಪಾಟೀಲ ರೇವೂರ, ಎಂ.ಬಿ.ಅಂಬಲಗಿ, ಬಸವರಾಜ ಬಿರಬಿಟ್ಟಿ, ಮನೋಹರ ಪೋದ್ದಾರ, ಡಾ| ಕೇಶವ ಕಾಬಾ, ಮಾಣಿಕಶಾ ಶಹಾಪುರಕರ್‌, ಚಾಂದಪಾಶಾ ಜಮಾದಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next