Advertisement

ಸರ್ಕಾರದ ಹಣ ಬಳಕೆಯಿಲ್ಲ’: ಎಂ.ಬಿ.ಪಾಟೀಲ್‌ 

10:43 AM Jun 03, 2017 | Team Udayavani |

ಬೆಂಗಳೂರು: ಕೃಷ್ಣಾ ಮತ್ತು ಕಾವೇರಿ ನದಿ ಉಗಮ ಸ್ಥಾನದಲ್ಲಿ ಮಳೆಗಾಗಿ ಪರ್ಜನ್ಯ ಹೋಮ ನಡೆಸಲು ಸರ್ಕಾರದ ಹಣ ಬಳಸುತ್ತಿಲ್ಲ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್‌ ಸ್ಪಷ್ಟಪಡಿಸಿದ್ದಾರೆ.

Advertisement

ಪೂಜೆಗೆ ಸರ್ಕಾರದ ಹಣ ಬಳಕೆ ಕುರಿತು ಮಾಧ್ಯಮಗಳಲ್ಲಿ ವ್ಯಕ್ತವಾದ ಟೀಕೆಯಿಂದ ಎಚ್ಚೆತ್ತುಕೊಂಡಿರುವ ಸಚಿವರು, ಸರ್ಕಾರದ ಹಣ ಬಳಸದೆ ಪೂಜೆಗೆ ಮುಂದಾಗಿದ್ದಾರೆ. ಸ್ನೇಹಿತರು ಹಾಗೂ ತಮ್ಮ ಸ್ವಂತ ಹಣದ ಖರ್ಚಿನಿಂದ ರಾಜ್ಯದ ಜನತೆ ಪರವಾಗಿ ಮಳೆಗಾಗಿ ಈ ವಿಶೇಷ ಪೂಜೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕೃಷ್ಣಾ ಹಾಗೂ ಕಾವೇರಿ ನದಿಗಳು ರಾಜ್ಯದ ಆರು ಕೋಟಿ ಜನರ ಜೀವನಾಡಿಗಳಾಗಿವೆ. ಕೃಷಿ ಚಟುವಟಿಕೆ ಮತ್ತು ಕುಡಿಯುವ ನೀರಿಗೆ ಆಧಾರ ಸ್ಥಂಬವಾಗಿರುವ ಎರಡೂ ನದಿಗಳು ರಾಜ್ಯದ ರೈತರ ಮತ್ತು ಎಲ್ಲರ ದೈವಿ ಸ್ವರೂಪಿಯಾಗಿವೆ, ತಾಯಿ ಸ್ಥಾನವನ್ನು ಪಡೆದುಕೊಂಡಿವೆ. ಈ ನದಿಗಳಿಗೆ ಪೂಜೆ ನಡೆಸುವುದು ನಮ್ಮ ಸಂಸ್ಕೃತಿಯ ಭಾಗವಾಗಿದೆ ಹಾಗಾಗಿ ಎಲ್ಲರ ಒಳಿತು ಬಯಸಿ ಮಳೆಗಾಗಿ ಪೂಜೆ ನಡೆಸುತ್ತಿರುವುದನ್ನ ಸಚಿವರು ಸಮರ್ಥಿಸಿಕೊಂಡಿದ್ದಾರೆ.

ಟೀಕೆಗೆ ಅವಕಾಶ ನೀಡದೆ ಪೂಜೆಗೆ ತಗಲುವ ವೆಚ್ಚವನ್ನು ಸ್ನೇಹಿತರು ಹಾಗೂ ವಯಕ್ತಿಕವಾಗಿ ಭರಿಸಲು ನಿರ್ಧರಿಸಲಾಗಿದೆ. ಶುಕ್ರವಾರ ಮಹಾಬಲೇಶ್ವರದಲ್ಲಿ ಪೂಜೆ ನಡೆಸಿದ್ದು, ಜೂನ್‌ 4 ರಂದು ಭಾಗಮಂಡಲದಲ್ಲಿ ಪೂಜೆ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಂ.ಬಿ.ಪಾಟೀಲ್‌ ವಿರುದ್ಧ ದೂರು
ಬೆಂಗಳೂರು:
ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌ ಅವರು ಮಳೆ ಬರಿಸಲು ಪರ್ಜನ್ಯ ಹೋಮ ನಡೆಸಲು ವೈಯಕ್ತಿಕವಾಗಿ ಖರ್ಚು ಮಾಡಿರುವ 20 ಲಕ್ಷ ರೂ. ಮೂಲದ ಬಗ್ಗೆ ತನಿಖೆ ನಡೆಸಬೇಕು ಎಂದು ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌. ರಾಘವೇಂದ್ರ ಶುಕ್ರವಾರ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ದೂರು ನೀಡಿದ್ದಾರೆ. ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಸಚಿವ ಎಂ.ಬಿ.ಪಾಟೀಲರ ಸೂಚನೆಯಂತೆ ಪರ್ಜನ್ಯ ಹೋಮ ಆಯೋಜಿಸಲು 20 ಲಕ್ಷ ರೂಪಾಯಿ ವೆಚ್ಚದಲ್ಲಿ ಕೇರಳದ ಮಂತ್ರವಾದಿಗಳಿಂದ ಭಾಗಮಂಡಲ ಮತ್ತು ಮಹಬಲೇಶ್ವರದಲ್ಲಿ ಹೋಮಕ್ಕೆ ಸಿದ್ಧತೆ ನಡೆಸಿದ್ದರು. ಇದಕ್ಕಾಗಿ ಇಲಾಖೆಯಿಂದ ಯಾವುದೇ ಟೆಂಡರ್‌ ಕರೆಯದೆ 20 ಲಕ್ಷ ರೂ. ಮೀಸಲಿಟ್ಟಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next