Advertisement

ಒಂದು ರೂ. ಕೊಡದ ಸರ್ಕಾರ: ಡಿಕೆಶಿ

11:55 AM Aug 13, 2019 | Team Udayavani |

ಬೆಳಗಾವಿ: ಭಾರೀ ಮಳೆಯಿಂದ ಪ್ರವಾಹದಿಂದ ನಲುಗಿರುವ ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ಪರಿಹಾರ ಕೇಂದ್ರ ತೆರೆದಿದ್ದು ಬಿಟ್ಟರೆ ಈವರೆಗೆ ಒಂದು ರೂ. ಚೆಕ್‌ ಸಹ ಕೊಟ್ಟಿಲ್ಲ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಿಸಬೇಕು ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ ಆಗ್ರಹಿಸಿದರು.

Advertisement

ತಾಲೂಕಿನಲ್ಲಿ ಪ್ರವಾಹದಿಂದ ನಲುಗಿದ ಕರಡಿಗುದ್ದಿ, ಮೋದಗಾ ಹಾಗೂ ಸಾಂಬ್ರಾ ಗ್ರಾಮದಲ್ಲಿರುವ ಪರಿಹಾರ ಕೇಂದ್ರಗಳಲ್ಲಿರುವ ಸಂತ್ರಸ್ತರನ್ನು ಸೋಮವಾರ ಭೇಟಿಯಾಗಿ , ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉತ್ತರ ಕನಾಟಕದ ಅನೇಕ ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿ ಜನಜೀವನ ಅಸ್ತವ್ಯಸ್ತವಾಗಿದೆ. ಹೀಗಾಗಿ ಎರಡೂ ಕಡೆಗೆ ಬಿಜೆಪಿಯವರದ್ದೇ ಸರ್ಕಾರ ಇರುವುದರಿಂದ ಅನುದಾನ ತರಿಸಿಕೊಂಡು ಇಲ್ಲಿಯ ಜನರ ನೆರವಿಗೆ ಧಾವಿಸಬೇಕು ಎಂದರು.

ಸಮರೋಪಾದಿಯಲ್ಲಿ ಮನೆಗಳನ್ನು ಸಂತ್ರಸ್ತರಿಗೆ ಕಟ್ಟಿಸಿಕೊಡಬೇಕು. ಹಾಳಾದ ರಸ್ತೆ, ಸೇತುವೆ ನಿರ್ಮಿಸಿಕೊಡಬೇಕು. ಇದರಲ್ಲಿ ರಾಜಕಾರಣ ಮಾಡದೇ ಸರ್ಕಾರದ ಬೆನ್ನಿಗೆ ನಿಂತು ಕೆಲಸ ಮಾಡಲಾಗುವುದು. ಸಂತ್ರಸ್ತರಿಗೆ ಕೂಡಲೇ ಸರ್ಕಾರ ಮೊದಲ ಹಂತದಲ್ಲಿ ಪ್ರಥಮ ಪರಿಹಾರ ಘೋಷಿಸಬೇಕು. 40 ಸಾವಿರ ಕೋಟಿ ರೂ. ಅಂದಾಜು ಹಾನಿ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಹಾನಿ ಅಂದಾಜಿನಂತೆ ಹಣ ಬಿಡುಗಡೆ ಮಾಡಬೇಕು. ಈ ಪ್ರವಾಹವನ್ನು ರಾಷ್ಟ್ರೀಯ ವಿಕೋಪವೆಂದು ಘೋಷಿಸುವಂತೆ ಆಗ್ರಹಿಸಿದರು.

ಪ್ರವಾಹ ಪರಿಹಾರ ನಿಯಮಾವಳಿಯಲ್ಲಿ ಬದಲಾವಣೆ ಮಾಡಬೇಕು. ಈವರೆಗೆ ಕೇಂದ್ರ ಮತ್ತು ರಾಜ್ಯದಲ್ಲಿ ಬೇರೆ ಬೇರೆ ಪಕ್ಷಗಳಿದ್ದುದರಿಂದ ಅದು ಆಗಿರಲಿಲ್ಲ. ತಕ್ಷಣ ಸಂತ್ರಸ್ತರಿಗೆ ತಲಾ 10 ಸಾವಿರ ರೂ. ನೀಡಬೇಕು. ಸಾವಿರಾರು ಮನೆಗಳು ಬಿದ್ದಿವೆ. ಜಮೀನು ಕೊಚ್ಚಿಹೋಗಿದೆ. ಅನೇಕರು ಜೀವ ಕಳೆದುಕೊಂಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರ ಪರಿಹಾರಕ್ಕೆ ಹೆಚ್ಚಿನ ಒತ್ತು ನೀಡಬೇಕು. ನಷ್ಟ ತುಂಬುವ ಕೆಲಸ ಮಾಡಬೇಕು ಎಂದು ಶಿವಕುಮಾರ ಆಗ್ರಹಿಸಿದರು.

ಶಾಸಕಿ ಲಕ್ಷ್ಮೀ ಹೆಬ್ಟಾಳಕರ, ಪ್ರಕಾಶ ರಾಠೊಡ, ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ತಾಪಂ ಅಧ್ಯಕ್ಷ ಶಂಕರಗೌಡ ಪಾಟೀಲ, ಚನ್ನರಾಜ ಹಟ್ಟಿಹೊಳಿ, ನಾನಪ್ಪ ಪಾರ್ವತಿ, ಇಸ್ಮಾಯಿಲ್ ತಿಗಡಿ ಸೇರಿದಂತೆ ಇತರರು ಇದ್ದರು.

Advertisement

ಮನೆ ಕುಸಿದು ನಿರಾಶ್ರಿತರಾಗಿರುವ ತಾಲೂಕಿನ ದೊಡವಾಡ ಹಾಗೂ ಸಂಗ್ರೇಶಕೊಪ್ಪ ಗ್ರಾಮಗಳ ವಿವಿಧ ಬಡವಾಣೆ ನಿವಾಸಿಗರನ್ನು ಮಾಜಿ ಸಚಿವ ಡಿ.ಕೆ. ಶಿವಕುಮಾರ ಸೋಮವಾರ ಭೇಟಿ ನೀಡಿ ಸಾಂತ್ವನ ಹೇಳಿದರು.

ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪನವರು 40 ಸಾವಿರ ಕೋಟಿಯಷ್ಟು ಹಾನಿಯಾಗಿದೆ ಎಂದು ಹೇಳಿದ್ದಾರೆ. ಆ 40 ಸಾವಿರ ಕೋಟಿ ಹಣವನ್ನು ಕೇಂದ್ರ ಸರಕಾರದಿಂದ ತಂದು ಪ್ರವಾಹ ಪೀಡಿತ ಜನರಿಗೆ ವಿತರಿಸಬೇಕು ಎಂದರು.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳನ್ನು ಆಕಾಶದಲ್ಲಿ ಕುಳಿತು ಸರ್ವೇ ಮಾಡುತ್ತಿದ್ದಾರೆ. ಎಷ್ಟು ಪರಿಹಾರ ಕೊಡುತ್ತಾರೋ ಕಾದು ನೋಡೋಣ ಎಂದು ಅಮಿತ ಶಾ ಅವರ ವೈಮಾನಿಕ ಸಮೀಕ್ಷೆ ಬಗ್ಗೆ ವ್ಯಂಗ್ಯವಾಡಿದರು.

ಈ ವೇಳೆ ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ಶಾಸಕ ಮಹಾಂತೇಶ ಕೌಜಲಗಿ, ಡಾ| ವಿ.ಎಸ್‌. ಸಾಧುನವರ, ಬಸವರಾಜ ಕೌಜಲಗಿ, ಮಹಾಂತೇಶ ಮತ್ತಿಕೊಪ್ಪ, ಜಿಪಂ ಸದಸ್ಯ ಅನಿಲ ಮ್ಯಾಕಲಮರಡಿ ಅವರು ಡಿಕೆಶಿಗೆ ಸಾಥ್‌ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next