Advertisement

ಸರ್ಕಾರದ ನಿರ್ದೇಶನ ಪಾಲನೆ ಕಡ್ಡಾಯ

03:32 PM May 01, 2020 | Suhan S |

ನವಲಗುಂದ: ಪ್ರತಿಯೊಬ್ಬರೂ ಆರೋಗ್ಯದ ದೃಷ್ಟಿಯಿಂದ ಲಾಕ್‌ಡೌನ್‌ ನಿಯಮಗಳನ್ನು, ಸರ್ಕಾರದ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

Advertisement

ಪುರಸಭೆ ಸಭಾಭವನದಲ್ಲಿ ಲಾಕ್‌ಡೌನ್‌ ಸಡಿಲಿಕೆ ಸಂಬಂಧ ಗುರುವಾರ ನಡೆದ ವರ್ತಕರ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿನಲ್ಲಿ ಯಾವುದೇ ಶಂಕಿತರು ಕಂಡುಬಂದಿಲ್ಲದ ಕಾರಣ ಸಾರ್ವಜನಿಕರ ಅನುಕೂಲಕ್ಕಾಗಿ ಲಾಕ್‌ಡೌನ್‌ ಸಡಿಲಿಕೆ ಮಾಡಲಾಗಿದೆ. ಪ್ರಾಯೋಗಿಕವಾಗಿ ನಾಲ್ಕು ದಿನ ಬೆಳಗ್ಗೆ 10ರಿಂದ 6 ಗಂಟೆಯವರಿಗೆ ಸಣ್ಣ ಪುಟ್ಟ ವ್ಯಾಪಾರ ವಹಿವಾಟು ಮಾಡಲು ಅನುವು ಮಾಡಿಕೊಡಲಾಗಿದೆ ಎಂದರು. ರೈತರ ಚಟುವಟಿಕೆಗಳಿಗೆ ಯಾವತ್ತೂ ಅಡ್ಡಿಪಡಿಸಿಲ್ಲ. ರೈತರಿಗೆ ಬೇಕಾಗುವ ಬೀಜ, ಗೊಬ್ಬರ ಇತರೆ ವಸ್ತುಗಳ ಖರೀದಿಸಿ ವ್ಯವಸಾಯ ಮಾಡಬಹುದು. ಯಾವುದಕ್ಕೂ ಕೊರತೆ ಇಲ್ಲ. ಲಾಕ್‌ಡೌನ್‌ ಅನ್ನು ಸರಕಾರ ಮಾಡಿದರೆ ಸಾಲದು, ಪ್ರತಿಯೊಬ್ಬರೂ ಜಾಗೃತಿಗೊಂಡು ಸ್ವತಃ ಲಾಕ್‌ಡೌನ್‌ ನಿಯಮ ಪಾಲಿಸಬೇಕು. ಸುರಕ್ಷಿತ ಅಂತರ ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕೋವಿಡ್‌-19 ಜಾಗೃತಿಗಾಗಿ ಕ್ಷೇತ್ರದ 36 ಪಂಚಾಯತಿಗಳಿಗೆ ಭೇಟಿ ನೀಡಿ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಪಾಡಿಕೊಂಡು ಹೋಗುವುದು, ರೋಗದ ಲಕ್ಷಣಗಳ ಕುರಿತು ಮಾಹಿತಿ ನೀಡಿ ಅರಿವು ಮೂಡಿಸಲು ಪಿಡಿಒಗಳಿಗೆ ತಿಳಿಸಲಾಗಿದೆ. ಪ್ರಧಾನಮಂತ್ರಿಗಳು ಜನ್‌ಧನ್‌, ಪಿಎಂ ಕಿಸಾನ್‌, ಮಾಸಾಶನದಂತಹ ಯೋಜನೆಗಳ ಮೂಲಕ ಬಡ ಕುಟುಂಬಗಳ ಉಪಜೀವನಕ್ಕೆ ಪರಿಹಾರ ಹಣ ನೀಡಿ ಆಸರೆಯಾಗಿದ್ದಾರೆ. ನಾಲ್ಕು ದಿನ ಪ್ರಾಯೋಗಿಕವಾಗಿ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗಿದೆ. ತದನಂತರ ಪರಿಸ್ಥಿತಿ ಅವಲೋಕಿಸಿ ಮುಂದುವರಿಸುವುದಾಗಿ ಭರವಸೆ ನೀಡಿದರು.

ತಹಶೀಲ್ದಾರ್‌ ನವೀನ ಹುಲ್ಲೂರ ಮಾತನಾಡಿ, ಪಟ್ಟಣದಲ್ಲಿ ಸಾರ್ವಜನಿಕರಿಗೆ ಅವಶ್ಯವಿರುವಂತಹ ಸ್ಟೇಷನರಿ, ಬುಕ್‌ಸ್ಟಾಲ್‌, ಇಲೆಕ್ಟ್ರಿಕಲ್‌ ರಿಪೇರಿ, ಪ್ಲಂಬಿಂಗ್‌, ಪೇಂಟ್‌, ಕಟ್ಟಡ ನಿರ್ಮಾಣ ಸಂಬಂ ಧಿಸಿದ ವಸ್ತುಗಳು, ದುರಸ್ತಿ ಮತ್ತು ಸೇವಾ ಕೇಂದ್ರಗಳು, ಟೈಲ್ಸ್‌, ಪ್ರಿಂಟಿಂಗ್‌ ಪ್ರಸ್‌, ಝರಾಕ್ಸ್‌, ಆಪ್ಟಿಕಲ್‌, ರೈಸ್‌ ಮಿಲ್‌, ಹಿಟ್ಟ-ಎಣ್ಣೆ ಗಿರಣಿ, ಹೋಟೆಲ್‌ ಹೋಮ್‌ ಡೆಲಿವರಿ, ಮೊಬೈಲ್‌ ಮತ್ತು ಗ್ಯಾಸ್‌ ಸ್ಟೋ ರಿಪೇರಿ, ಕಿರಾಣಿ ಅಂಗಡಿಯವರು ತಪ್ಪದೇ ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯಾಪಾರ ವಹಿವಾಟು ಮಾಡಬಹುದು. ನಿಯಮಗಳನ್ನು ಪಾಲಿಸದೇ ಇರುವಂತವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ವರ್ತಕರು ತಮ್ಮ ಸಮಸ್ಯೆಗಳ ಕುರಿತು ಶಾಸಕರ ಜೊತೆಗೆ ಚರ್ಚಿಸಿದರು. ಡಿವೈಎಸ್‌ಪಿ ರವಿ ನಾಯಕ, ಸಿಪಿಐ ಮಠಪತಿ, ಪಿಎಸ್‌ಐ ಜಯಪಾಲ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಎನ್‌.ಎಚ್‌. ಖುದ್ದನವರ ಇನ್ನಿತರರಿದ್ದರು.

Advertisement

ಕೋವಿಡ್ 19 ವೈರಸ್‌ ಯಾವುದೇ ಜಾತಿ-ಮತ, ಶ್ರೀಮಂತ-ಬಡವ ಎಂದು ನೋಡುವುದಿಲ್ಲ. ನಮ್ಮ ಎಚ್ಚರಿಕೆಯಲ್ಲಿ ನಾವು ಇದ್ದರೆ ಆರೋಗ್ಯವಂತರಾಗಿರುತ್ತೇವೆ. ನಮ್ಮ ಕ್ಷೇತ್ರದಲ್ಲಿ ಯಾವುದೇ ಪಾಸಿಟಿವ್‌ ಬಂದಿಲ್ಲ. ಆದರೂ ಬೇರೆ ಜಿಲ್ಲೆಯಿಂದ ಬಂದಂತಹ ವ್ಯಕ್ತಿಗಳ ಕುರಿತು ಮಾಹಿತಿ ನೀಡಿ ತಪಾಸಣೆಗೆ ಒಳಪಡಿಸಲು ಸಾರ್ವಜನಿಕರ ಸಹಕಾರ ಅವಶ್ಯವಾಗಿದೆ.  –ಶಂಕರ ಪಾಟೀಲ ಮುನೇನಕೊಪ್ಪ, ನವಲಗುಂದ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next