Advertisement

ಸರ್ಕಾರದ ನಿರ್ಧಾರ ಸ್ವಾಗತಾರ್ಹ

04:36 PM Aug 23, 2018 | |

ಚಿಕ್ಕಮಗಳೂರು: ಪಶ್ಚಿಮಘಟ್ಟ ಪ್ರದೇಶದ ಜಿಲ್ಲೆಗಳಲ್ಲಿ ಎಲ್ಲಾ ಬಗೆಯ ವಾಣಿಜ್ಯ ಉದ್ದೇಶಕೋಸ್ಕರ ಕೃಷಿ ಭೂಮಿ ಪರಿವರ್ತನೆ ಮಾಡದಂತೆ ಮುಖ್ಯಮಂತ್ರಿಗಳು ಆದೇಶಿಸಿರುವುದು ಸ್ವಾಗತಾರ್ಹ ಎಂದು ಪರಿಸರ ಸಂಘಟನೆಗಳು ತಿಳಿಸಿವೆ.

Advertisement

ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ, ಭೂ ಕುಸಿತದಿಂದಾಗಿ ಜನರ ಪರಿಸ್ಥಿತಿ ಚಿಂತಾಜನಕವಾಗಿದ್ದು,
ಪ್ರಕೃತಿಯಲ್ಲಿನ ಅಸಮತೋಲನ, ಹವಾಮಾನ ಸ್ಥಿತಿ ಏರುಪೇರುಗಳಿಗೆ ಮಾನವ ಕೇಂದ್ರೀಕೃತ ಚಟುವಟಿಕೆಗಳೇ ಕಾರಣ ಎಂಬ ಮಾಹಿತಿಯಿಂದ ವಾಣಿಜ್ಯ ಉದ್ದೇಶಕೋಸ್ಕರ ಕೃಷಿ ಭೂಮಿ ಪರಿವರ್ತನೆ ಮಾಡದಂತೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ ಎಂದು ಹೇಳಿಕೆಯಲ್ಲಿ ಸಂಘಟನೆಯ ಮುಖಂಡರು ಹೇಳಿದ್ದಾರೆ.

ಪಶ್ಚಿಮಘಟ್ಟದ ಗಿರಿ ಶ್ರೇಣಿಗಳಲ್ಲಿ ಇತ್ತೀಚೆಗೆ ವ್ಯಾಪಕವಾಗಿ ವಾಣಿಜ್ಯ ಉದ್ದೇಶಕೋಸ್ಕರ ಭೂ ಪರಿವರ್ತನೆ ಪ್ರಕ್ರಿಯೆಗಳು ನಡೆಯುತ್ತಿದ್ದು, ಪ್ರವಾಸೋದ್ಯಮ ಅಭಿವೃದ್ಧಿ ಹೆಸರಿನಲ್ಲಿ ಬೃಹತ್‌ ರೆಸಾರ್ಟ್‌ಗಳ ನಿರ್ಮಾಣ, ಪಂಚತಾರ ಹೋಟೆಲ್‌ಗ‌ಳ ನಿರ್ಮಾಣ, ಯಾತ್ರಿ ನಿವಾಸ, ಹೋಂ ಸ್ಟೇ, ಹೋಟೆಲ್‌ಗಳ ನಿರ್ಮಾಣ, ಅಥಿತಿ ಗೃಹ ಸೇರಿದಂತೆ ಹಲವು ರೀತಿಯ ವಾಣಿಜ್ಯ ಕಟ್ಟಡಗಳ ನಿರ್ಮಾಣ ಬಹುತೇಕ ಗುಡ್ಡ ಪ್ರದೇಶಗಳಲ್ಲಿ ತಲೆ ಎತ್ತುತ್ತಿವೆ. ಬೆಟ್ಟ ಸಮತಟ್ಟು ಮಾಡಿ, ಶೋಲಾ ಅರಣ್ಯ ಹುಲ್ಲುಗಾವಲನ್ನು ನಾಶಮಾಡಿ ಬೆಟ್ಟಕ್ಕೆ ಹೊಂದಿಕೊಂಡಂತೆ ಕಟ್ಟಡಗಳನ್ನು ಕಟ್ಟಲಾಗುತ್ತಿತ್ತು. ಈ ಕಟ್ಟಡಗಳ ಒತ್ತಡ ಆ ಭಾಗದ ಬೆಟ್ಟ ಪ್ರದೇಶಗಳಿಗೆ ಹಾನಿ
ಉಂಟಾಗುತ್ತಿತ್ತು. ರೆಸಾರ್ಟ್‌ ಮತ್ತು ಹೋಂ ಸ್ಟೇ, ಇನ್ನಿತರ ಕಟ್ಟಡಗಳು ಸಾವಿರಾರು ಸಂಖ್ಯೆಯಲ್ಲಿ ದಿನೇ ದಿನೇ ಹಸಿರು ಬೆಟ್ಟಗಳ ನಡುವೆ ಕಾಂಕ್ರಿಟ್‌ ಕಟ್ಟಡಗಳು ತಲೆ ಎತ್ತಿ ಕಾಂಕ್ರಿಟ್‌ ಕಾಡಾಗಿ ಕಾಣುತ್ತಿವೆ. ಇದರಿಂದ ಪರಿಸರ ವ್ಯಾಪಕವಾಗಿ ನಾಶವಾಗಿದ್ದಲ್ಲದೆ ಜಿಲ್ಲೆಯಲ್ಲಿ ಅತಿವೃಷ್ಟಿ ಅನಾವೃಷ್ಟಿಗಳು ಉಂಟಾಗುತ್ತಿದೆ ಎಂದು ಸಂಘಟನೆಯ ಮುಖಂಡರು ಹೇಳಿದ್ದಾರೆ. 

ಪಶ್ಚಿಮಘಟ್ಟದ ಜಿಲ್ಲೆಗಳಲ್ಲಿ ವ್ಯಾಪಕವಾಗಿ ವಾಣಿಜ್ಯ ಉಪಯೋಗಕ್ಕಾಗಿ ಭೂ ಪರಿವರ್ತನೆ ನೀಡಿರುವುದು ಅತಿಯಾದ ಮಳೆ, ಭೂ ಕುಸಿತದಿಂದಾಗಿ ಸಮಸ್ಯೆ ದೊಡ್ಡದಾಗಿ ಜನರು ಮನೆ ಮಠ, ಆಸ್ತಿಪಾಸ್ತಿಗಳನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. 

ಅಪಾರ ಪ್ರಮಾಣದ ಬೆಳೆಗಳು ನಾಶವಾಗಿವೆ. ಮೊದಲೆ ಅಡಿಕೆತೋಟಗಳು ಹಳದಿ ಎಲೆ ರೋಗದಿಂದ ತತ್ತರಿಸಿದ್ದು,
ರೈತರು ಆರ್ಥಿಕವಾಗಿ ಸುಧಾರಿಸಿಕೊಳ್ಳುವ ಮೊದಲೆ ಈ ಬಾರಿ ಅತಿವೃಷ್ಟಿಯಿಂದ ಬೆಳೆ ಕಳೆದುಕೊಳ್ಳುವಂತಾಗಿದೆ. ಯಾರದೋ ಹಿತಕ್ಕಾಗಿ ಮತ್ಯಾವುದೋ ಬಂಡವಾಳಶಾಹಿ ರೆಸಾರ್ಟ್‌ ಕಂಪೆನಿಗಳ, ಸಂಸ್ಥೆಗಳ ಲಾಭಕ್ಕಾಗಿ ಪಶ್ಚಿಮಘಟ್ಟಗಳಲ್ಲಿ ಎಲ್ಲೆಂದರಲ್ಲಿ ಅವಕಾಶ ಮಾಡಿಕೊಟ್ಟಿ ರುವುದು ಈ ಅವಘಡಕ್ಕೆ ಪ್ರಮುಖ ಕಾರಣವಾಗಿದೆ.

Advertisement

ಈ ಜಿಲ್ಲೆಯಾದ್ಯಂತ ಪಶ್ಚಿಮಘಟ್ಟದ ಅತೀ ಸೂಕ್ಷ್ಮ ಪ್ರದೇಶ ಸರ್ಕಾರಿ ಅಥವಾ ಖಾಸಗಿ ಪ್ರದೇಶಗಳಾದರೂ ಸಹ ವಾಣಿಜ್ಯ ಚಟುವಟಿಕೆಗಳಿಗೆ ಯಾವುದೇ ಭೂ ಪರಿವರ್ತನೆ ನೀಡದಂತೆ ಶಾಶ್ವತ ನಿಷೇಧ ಸರ್ಕಾರ ಹೇರಬೇಕು. ಗಿರಿ ಸಾಲುಗಳು, ಬೆಟ್ಟಶ್ರೇಣಿಗಳು, ಸೂಕ್ಷ್ಮ ಅರಣ್ಯ ಪ್ರದೇಶ ಪರಿಸರದಲ್ಲಿ ಯಾವುದೇ ಕಾರಣಕ್ಕೂ ಭೂ ಪರಿವರ್ತನೆ ನೀಡದಂತೆ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು.

 ಇಲ್ಲದಿದ್ದಲ್ಲಿ ಕೇರಳ, ಕೊಡಗು ಜಿಲ್ಲೆಯಲ್ಲಿ ಆದ ಅವಘಡಗಳು ನಮ್ಮ ಜಿಲ್ಲೆಯಲ್ಲೂ ಆಗುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಜಿಲ್ಲಾಢಳಿತ ಮುಳ್ಳಯ್ಯನಗಿರಿ, ಬಾಬಾ ಬುಡನ್‌ಗಿರಿ, ಕೆಮ್ಮಣ್ಣುಗುಂಡಿ, ಕವಿಕಲ್‌ ಗಂಡಿ, ಕುದುರೆಮುಖ, ಸೇರಿದಂತೆ ಹಲವು ಪಶ್ಚಿಮಘಟ್ಟದ ಸೂಕ್ಷ್ಮ ಪ್ರದೇಶದಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಭೂ ಪರಿವರ್ತನೆ ಪ್ರಕ್ರಿಯೆಯನ್ನು ಶಾಶ್ವತವಾಗಿ ನಿಲ್ಲಿಸಬೇಕೆಂದು -ಭದ್ರಾ ವೈಲ್ಡ್‌ಲೈಫ್‌
ಕನ್ಸರ್‌ವೆಷನ್‌ ಟ್ರಸ್ಟ್‌ ಮ್ಯಾನೇಜಿಂಗ್‌ ಟ್ರಸ್ಟಿ ಡಿ.ವಿ.ಗಿರೀಶ್‌, ವೈಲ್ಡ್‌ಲೈಫ್‌-ಸಿನ ಶ್ರೀದೇವ್‌ ಹುಲಿಕೆರೆ, ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಜಿ.ವೀರೇಶ್‌, ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಎಸ್‌. ಗಿರಿಜಾಶಂಕರ ಒತ್ತಾಯಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next