ಮುಂಬಯಿ, ಎ. 30: ಮಹಾರಾಷ್ಟ್ರ ಸರಕಾರವು ರಾಜ್ಯದಲ್ಲಿ ತುರ್ತು ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ ಎಂದು ವಿಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಅವರು ಆರೋಪಿಸಿದ್ದಾರೆ.
ಫಡ್ನವೀಸ್ ನೇತೃತ್ವದ ಬಿಜೆಪಿ ನಿಯೋಗವು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ಭೇಟಿಯಾಗಿ ರಿಪಬ್ಲಿಕ್ ಟಿವಿಯ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರನ್ನು ನಗರ ಪೊಲೀಸರು 12 ಗಂಟೆಗಳ ಕಾಲ ಪ್ರಶ್ನಿಸಿರುವುದು ಸೇರಿದಂತೆ ಮಾಧ್ಯಮಗಳ ವಿರುದ್ಧ ರಾಜ್ಯದ ಕ್ರಮಕ್ಕೆ ಹೊಣೆಗಾರಿಕೆಯನ್ನು ಕೋರಿದ್ದಾರೆ. ಪತ್ರಕರ್ತರು ಮತ್ತು ಸಂಪಾದಕರಲ್ಲಿ ಭಯ ಹುಟ್ಟಿಸುವ ಮೂಲಕ ತುರ್ತು ಪರಿಸ್ಥಿತಿಗಳನ್ನು ಹೇರಲು ಸರಕಾರ ಪ್ರಯತ್ನಿಸುತ್ತಿದೆ ಎಂದು ಫಡ್ನವೀಸ್ ಅವರು ರಾಜ್ಯಪಾಲರಿಗೆ ಮಾಹಿತಿ ನೀಡಿದ್ದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಪ್ರವೀಣ್ ದಾರೇಕರ್ ಅವರು ರಾಜ್ಯಪಾಲರಿಗೆ ಪತ್ರವೊಂದನ್ನು ಸಲ್ಲಿಸಿದರು.
ಅರ್ನಾಬ್ ಗೋಸ್ವಾಮಿಯನ್ನು 12 ಗಂಟೆಗಳ ಕಾಲ ಪೊಲೀಸ್ ಠಾಣೆಯಲ್ಲಿ ಪ್ರಶ್ನಿಸಿದ್ದಾರೆ. ಅದೇ ಪೊಲೀಸರು ಅಪರಾಧಿಗಳಿಗೆ ಮುಕ್ತವಾಗಿ ತಿರುಗಾಡಲು ಅವಕಾಶ ಮಾಡಿ ಕೊಟ್ಟಿದ್ದಾರೆ. ಸರಕಾರದ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ರೀತಿಯ ಟೀಕೆಗಳು ಬಂದಲ್ಲಿ ಪ್ರಸ್ತುತ ದಿನಗಳಲ್ಲಿ ಪೊಲೀಸ್ ಕ್ರಮಕ್ಕೆ ಕಾರಣವಾಗುತ್ತಿವೆ. ಇದು ಮುಕ್ತ ಮಾಧ್ಯಮವನ್ನು ತಮಾಷೆ ಮಾಡುವ ಪ್ರಯತ್ನಕ್ಕೆ ಸಮನಾಗಿರುತ್ತದೆ ಮತ್ತು ಇದು ಪ್ರಜಾಪ್ರಭುತ್ವದ ಕಾರ್ಯಚಟುವಟಿಕೆಗೆ ಅಪಾಯ ಎಂದು ಫಡ್ನವೀಸ್ ಹೇಳಿದರು.
ಪಾಲ್ಘರ್ ಹತ್ಯೆ ಪ್ರಕರಣದಲ್ಲಿ ಮತ್ತು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ರಾಜ್ಯ ವಿದ್ಯುತ್ ಸಚಿವ ನಿತಿನ್ ರಾವುತ್ ಅವರು ಅರ್ನಾಬ್ ವಿರುದ್ಧ ಸಲ್ಲಿಸಿದ ದೂರಿಗೆ ಸಂಬಂಧಿಸಿದಂತೆ ಪೊಲೀಸರು ಸೋಮ ವಾರ ಅರ್ನಾಬ್ ಗೋಸ್ವಾಮಿಯ ಹೇಳಿಕೆಯನ್ನು ದಾಖಲಿಸಿದ್ದಾರೆ. ಗೋಸ್ವಾಮಿಯ ವಿರುದ್ಧದ ಆರೋಪಗಳು ಗಲಭೆಗೆ ಕಾರಣವಾಗುವ ಪ್ರಚೋದನೆ, ಎರಡು ಸಮುದಾಯಗಳ ನಡುವೆ ದ್ವೇಷವನ್ನು ಉಂಟುಮಾಡುವುದು, ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ದುರುದ್ದೇಶ ಪೂರಿತ ಉದ್ದೇಶ ಮತ್ತು ಮಾನಹಾನಿಯನ್ನು ಒಳಗೊಂಡಿವೆ ಎಂಬುದು ಕಟ್ಟುಕತೆಯಾಗಿದೆ ಎಂದು ಫಡ್ನವೀಸ್ ಹೇಳಿದ್ದಾರೆ.
ಇದೆ ಸಂದರ್ಭದಲ್ಲಿ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಅವರು ಫಡ್ನವೀಸ್ ಅವರ ದೂರು ಮತ್ತು ಗೋಸ್ವಾಮಿಯವರ ನಿಲುವು ಬಿಜೆಪಿ ಸಮಾಜದಲ್ಲಿ ಕೋಮುವಾದ ಮತ್ತು ದ್ವೇಷವನ್ನು ಹರಡಲು ಪ್ರಯತ್ನಿಸುವ ಮಾಧ್ಯಮಗಳ ಒಂದು ಭಾಗವನ್ನು ರಕ್ಷಿಸುತ್ತದೆ ಎಂದು ತೋರಿಸುತ್ತದೆ. ಬಿಜೆಪಿ ಆಡಳಿತದ ಅವಧಿಯಲ್ಲಿ ಹಲವಾರು ಪತ್ರಕರ್ತರು ಮತ್ತು ಸಂಪಾದಕರು ತಮ್ಮ ಕೆಲಸವನ್ನು ಮಾಡಿದ್ದಕ್ಕಾಗಿ ಅವರನ್ನು ದೂಷಿಸಲಾಯಿತು. ಆದ್ದರಿಂದ ಪಕ್ಷವು ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಸ್ಥಿತಿಯಲ್ಲಿಲ್ಲ ಎಂದು ತಿಳಿಸಿದ್ದಾರೆ.
ಫಡ್ನವೀಸ್ ಜತೆ ಮಾಜಿ ಸಚಿವ ರಾದ ವಿನೋದ್ ತಾಬ್ಡೆ, ಆಶಿಶ್ ಶೆಲಾರ್ ಮತ್ತು ನಗರ ಮುಖ್ಯಸ್ಥ ಮಂಗಲ್ ಪ್ರಭಾತ್ ಲೋಧಾ ಉಪಸ್ಥಿತರಿದ್ದರು.