ಬೆಂಗಳೂರು: ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭಾನುವಾರ ಪದ್ಮನಾಭನಗರದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಜಾನಪದ ಜಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನ್ನಡ ನಾಡಿನ ಶ್ರೀಮಂತ ಜಾನಪದ ಕಲೆಗಳು ರಾಜ್ಯವಷ್ಟೇ ಅಲ್ಲ.
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿವೆ. ಈ ಕಲೆಗಳನ್ನು ಉಳಿಸಿ ಬೆಳೆಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು. ನಾನು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ನಾಡಿನ ಶ್ರೀಮಂತ ಜಾನಪ ಕ್ರೀಡೆ ಮತ್ತು ಕಲೆಗಳ ಉಳಿಗಾಗಿ ಹಾವೇರಿಯಲ್ಲಿ ಜಾನಪದ ವಿವಿ ಸ್ಥಾಪನೆ ಮಾಡಿದ್ದೆ. ಈಗಲೂ ಗುರುಶಿಷ್ಯ ಯೋಜನೆ, ಜಾನಪದ ಜಾತ್ರೆ ಸೇರಿ ಕಲಾವಿದರ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ಆರಂಭಿಸಲಾಗಿದೆ ಎಂದು ಹೇಳಿದರು.
ಸಚಿವ ಆರ್.ಅಶೋಕ ಮಾತನಾಡಿ, ರೈತರಪರ ಕಾಳಜಿ ಹೊಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರೈತರಿಗಾಗಿ ಪ್ರತ್ಯೇಕ ಬಜೆಟ್ ಮಂಡನೆ ಮಾಡಿದ್ದರು. ಈಗ ಮತ್ತೆ ಜಾನಪದ ಜಾತ್ರೆ ಕಾರ್ಯಕ್ರಮ ಆರಂಭಿಸುವ ಮೂಲಕ ಜಾನಪದ ಕಲೆ ಮತ್ತು ಕಲಾವಿದರ ಉಳಿಕೆಗೆ ಮುಂದಾಗಿದ್ದಾರೆ ಎಂದರು. ಮುಂದಿನ ಮೂರು ವರ್ಷಗಳ ಕಾಲ ಯಡಿಯೂರಪ್ಪ ನೇತೃತ್ವದ ಸರ್ಕಾರ ರಾಜ್ಯದ ಅಭಿವೃದ್ಧಿ ಶ್ರಮಿಸಲಿದೆ.
ಶಿಕ್ಷಣ, ಆರೋಗ್ಯ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ತೋರಲಿದೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮತ್ತು ರಾಜ್ಯದಲ್ಲಿ ಯಡಿಯೂರಪ್ಪ ಅವರ ಸರ್ಕಾರ ಜೋಡೆತ್ತಿನ ರೀತಿಯಲ್ಲಿ ಕೆಲಸ ಮಾಡಲಿದೆ. ಇನ್ನು ಐಟಿ ಬಿಟಿಯಲ್ಲಿ ಮುಳುಗಿ ಹೋಗುತ್ತಿರುವ ಬೆಂಗಳೂರಿಗೆ ಮತ್ತೆ ಹಳ್ಳಿ ಸಂಸ್ಕೃತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ಜಾನಪದ ಜಾತ್ರೆ ಹಮ್ಮಿ ಕೊಳ್ಳಲಾಗಿದೆ ಎಂದು ಹೇಳಿದರು.
ಇದಕ್ಕೂ ಮೊದಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು. ಜತೆಗೆ ವಿವಿಧ ಜಾನಪದ ತಂಡಗಳ ಕಲಾಪ್ರದರ್ಶನ ಗಮನ ಸೆಳೆಯಿತು. ಸಚಿವ ಬಸವರಾಜ ಬೊಮ್ಮಾಯಿ, ಶಾಸಕರಾದ ಸತೀಶ್ ರೆಡ್ಡಿ, ಪ್ರೀತಂ ಗೌಡ, ಕನ್ನಡ ಮತ್ತು ಸಂಸ್ಕತಿ ಇಲಾಖೆ ನಿರ್ದೇಶಕ ಎಸ್.ರಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.
ಜಾನಪದ ಕುಣಿತ ವೀಕ್ಷಿಸಿದ ಸಿಎಂ: ಬುಧವಾರ ರಿಲ್ಯಾಕ್ಸ್ ಮೂಡಲ್ಲಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, 2 ಗಂಟೆಗೂ ಹೆಚ್ಚು ಕಾಲ ಸಿದ್ಧಿಕುಣಿತ, ಹಾಲಕ್ಕಿ ಸುಗ್ಗಿ ಕುಣಿತ ಸೇರಿದಂತೆ 500ಕ್ಕೂ ಹೆಚ್ಚು ಕಲಾವಿದರು ಪ್ರದರ್ಶಿಸಿದ ವಿವಿಧ ಜಾನಪದ ಕಲಾ ಪ್ರಕಾರಗಳ ಕುಣಿತ, ಜಾನಪದ ಸೊಗಡಿನ ಹಾಡು, ನೃತ್ಯ ವೀಕ್ಷಿಸಿದರು.