Advertisement

ಬೇಡಿಕೆ ಈಡೇರಿಸಲು ಸರ್ಕಾರ ಬದ್ಧ: ಬಸವರಾಜ ಬೊಮ್ಮಾಯಿ

06:08 PM Feb 28, 2022 | Team Udayavani |

ಬೆಳಗಾವಿ: ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ಕೈಗೊಳ್ಳಬೇಕಾದ ಅಭಿವೃದ್ಧಿ ಕೆಲಸಗಳು ಹಾಗೂ ಜಿಲ್ಲೆಯ ಖ್ಯಾತ ಸಾಹಿತಿಗಳು, ಕಲಾವಿದರ ಹೆಸರಿನಲ್ಲಿ ಟ್ರಸ್ಟ್‌ಗಳನ್ನು ರಚಿಸಬೇಕೆಂಬ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಮತ್ತು ಹಿರಿಯ ಸಾಹಿತಿಗಳು ಸೇರಿ ಸಲ್ಲಿಸಿದ ಬೇಡಿಕೆಗಳು ತಮ್ಮ ಗಮನದಲ್ಲಿದ್ದು ಅವುಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಬದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

Advertisement

ರವಿವಾರ ಬೆಳಗ್ಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಭೇಟಿ ಮಾಡಿದ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ನೇತೃತ್ವದ ಹೋರಾಟಗಾರರ ಮತ್ತು ಹಿರಿಯ ರಂಗಕರ್ಮಿ ಬಿ.ಎಸ್‌. ಗವಿಮಠ ನೇತೃತ್ವದ ಸಾಹಿತಿಗಳ ನಿಯೋಗದ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಬೆಳಗಾವಿ ಜಿಲ್ಲಾ ಮಟ್ಟದ ಕಚೇರಿಗಳನ್ನು ಒಂದೇ ಕಟ್ಟಡದಲ್ಲಿ ಸ್ಥಾಪಿಸಲು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ಬಹುಮಹಡಿ ಕಟ್ಟುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ನಗರದಲ್ಲಿ ಸಂಚಾರ ದಟ್ಟಣೆ ನೀಗಿಸಲು 4 ಕಿ.ಮೀ ನಷ್ಟು ರಸ್ತೆ ಮೇಲ್ಸೇತುವೆ ನಿರ್ಮಿಸಬೇಕು, ರಾಮದುರ್ಗ ತಾಲೂಕಿನ ಶಬರಿಕೊಳ್ಳ ಅಭಿವೃದ್ಧಿಪಡಿಸಿ ಪ್ರವಾಸಿ ಕೇಂದ್ರವನ್ನಾಗಿ ಮಾಡಬೇಕು. ಖ್ಯಾತ ರಂಗಕರ್ಮಿ ದಿ. ಏಣಗಿ ಬಾಳಪ್ಪ, ಖ್ಯಾತ ಕಾದಂಬರಿಕಾರ ದಿ. ಕೃಷ್ಣಮೂರ್ತಿ ಪುರಾಣಿಕ, ಖ್ಯಾತ ಸಾಹಿತಿಗಳಾದ ದಿ. ಡಿ.ಎಸ್‌. ಕರ್ಕಿ, ದಿ. ಎಸ್‌.ಡಿ. ಇಂಚಲ ಹಾಗೂ ಖ್ಯಾತ ಹಿಂದುಸ್ತಾನಿ ಗಾಯಕ ದಿ. ಕುಮಾರ ಗಂಧರ್ವ ಅವರುಗಳ ಹೆಸರಿನಲ್ಲಿ ಟ್ರಸ್ಟ್‌ಗಳನ್ನು ರಚಿಸಿ ಅವೆಲ್ಲವೂ ಒಂದೇ ಸೂರಿನಡಿ ಕಾರ್ಯ ನಿರ್ವಹಿಸುವಂತೆ ಮಾಡಬೇಕು ಎಂದು ನಿಯೋಗದ ಸದಸ್ಯರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬೆಂಗಳೂರಿನ ಕನ್ನಡ ಪರ ಹೋರಾಟಗಾರರಾದ ಸಿ.ಕೆ. ರಾಮೇಗೌಡ, ಶಂಕರ ಹೂಗಾರ,ಬೆಳಗಾವಿ ಹೋರಾಟಗಾರಾದ ರಮೇಶ ಸೊಂಟಕ್ಕಿ, ಮೈನೋದ್ದೀನ್‌ ಮಕಾನದಾರ, ಶಿವಪ್ಪ ಶಮರಂತ, ವೀರೇಂದ್ರ ಗೋಬರಿ, ಸಾಹಿತಿಗಳಾದ ಬಸವರಾಜ ಗಾರ್ಗಿ, ಸುಭಾಷ ಏಣಗಿ, ಡಾ| ಬಸವರಾಜ ಏಣಗಿ, ಬೆಂಗಳೂರಿನ ವಿನಯಕುಮಾರ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next